ಸುಳ್ಯ: ಸುಳ್ಯ-ಪಾಣತ್ತೂರು ಅಂತಾರಾಜ್ಯ ಹೆದ್ದಾರಿಯಲ್ಲಿ ತೀರಾ ಹದಗೆಟ್ಟಿರುವ ಗಡಿ ಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದ ಜನರ ನಿಯೋಗ ಸುಳ್ಯದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದೆ.
ಕೇರಳದ ಕಲ್ಲಪಳ್ಳಿ ಮತ್ತು ಕರ್ನಾಟಕ ಭಾಗವಾದ ಬಡ್ಡಡ್ಕದ ಪ್ರಮುಖರನ್ನೊಳಗೊಂಡ ನಿಯೋಗ ಸುಳ್ಯ ಶಾಸಕ ಎಸ್.ಅಂಗಾರ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚೆ ನಡೆಸಿದರು. ಅಂತಾರಾಜ್ಯ ರಸ್ತೆಯಲ್ಲಿ ತೀರಾ ಹದಗೆಟ್ಟಿರುವ ಬಡ್ಡಡ್ಕದಿಂದ ಬಾಟೋಳಿವರೆಗಿನ ರಸ್ತೆ ಅಭಿವೃದ್ಧಿಪಡಿಸಿ ಸರ್ವ ಋತು ರಸ್ತೆಯನ್ನಾಗಿಸಬೇಕು ಎಂದು ಮನವಿ ಮಾಡಿದರು.
ಸುಳ್ಯ-ಪಾಣತ್ತೂರು ರಸ್ತೆ 20 ಕಿ.ಮಿ. ಅಂತರವಿದ್ದು ರಸ್ತೆಯಲ್ಲಿ ಬಡ್ಡಡ್ಕದಿಂದ ಕೇರಳದ ಗಡಿ ಬಾಟೋಳಿವರೆಗೆ ಒಂದು ಕಿ.ಮಿ.ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದಲ್ಲಿ ರಸ್ತೆ ಬಂದ್ ಆಗುವ ಭೀತಿ ಇದೆ. ಆದುದರಿಂದ ಬಡ್ಡಡ್ಕ -ಬಾಟೋಳಿ ಮಧ್ಯೆ ಇರುವ ರಸ್ತೆಯನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕೆಂದು ನಿಯೋಗವು ಶಾಸಕರಲ್ಲಿ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರಲ್ಲಿ ಮನವಿ ಮಾಡಿತು.
ಕರ್ನಾಟಕದ ಭಾಗದಲ್ಲಿ ಸುಳ್ಯದಿಂದ ಬಡ್ಡಡ್ಕದವರೆಗೆ ಅಭಿವೃದ್ಧಿಯಾಗಿದೆ. ಇದರಲ್ಲಿ ಗುಂಡ್ಯ ಭಾಗದಲ್ಲಿ ಕಾಮಗಾರಿ ನಡೆಸದೆ ಇರುವ ಭಾಗವನ್ನು ಮತ್ತು ಅಲ್ಲಲ್ಲಿ ಅರ್ಧಕ್ಕೆ ಬಿಟ್ಟಿರುವ ಕಾಮಗಾರಿಯನ್ನು ಕೂಡಲೇ ಪೂರ್ತಿ ಮಾಡಬೇಕು ಎಂದು ನಿಯೋಗ ಶಾಸಕರಲ್ಲಿ ವಿನಂತಿಸಿದರು. ಗಡಿ ಭಾಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ತುರ್ತು ಕಾಮಗಾರಿಗೆ 10 ಲಕ್ಷ ಅನುದಾನ:
ಅಂತಾರಾಜ್ಯ ರಸ್ತೆಯಲ್ಲಿ ತೀರಾ ಹದಗೆಟ್ಟಿರುವ ಬಡ್ಡಡ್ಕ-ಬಾಟೋಳಿ ಮಧ್ಯೆ ರಸ್ತೆಯನ್ನು ತುರ್ತಾಗಿ ದುರಸ್ಥಿ ಮಾಡಲು 10 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ತಿಳಿಸಿದ್ದಾರೆ. ಗಡಿ ಪ್ರದೇಶದ ಜನರ ನಿಯೋಗಕ್ಕೆ ಅಧ್ಯಕ್ಷರು ಈ ಭರವಸೆ ನೀಡಿದ್ದು 15 ದಿನದಲ್ಲಿ ರಸ್ತೆ ದುರಸ್ಥಿ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಎನ್.ಎ.ರಾಮಚಂದ್ರ ಉಪಸ್ಥಿತರಿದ್ದರು. ಪನತ್ತಡಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಪ್ರಮುಖರಾದ ರಾಜಗೋಪಾಲ ಭಟ್, ತೇಜಕುಮಾರ್ ಬಡ್ಡಡ್ಕ, ಪಿ.ಕೆ.ಬಾಲಚಂದ್ರ, ಡಾ.ಪಿ.ಕೆ.ಕೇಶವ, ಪೊನ್ನಪ್ಪ, ಎಂ.ಎಲ್.ಮೋನಪ್ಪ, ಜಯಪ್ರಕಾಶ್ ಎನ್.ಕೆ., ಐಸಾಕ್, ಎಂ.ಟಿ.ಬಾಬಣ್ಣ, ರಾಮಚಂದ್ರ, ಬೇಬಿ ರಂಗತ್ತಮಲೆ, ಜೋಸೆಫ್ ಮತ್ತಿತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.