ಬಂಟ್ವಾಳ : ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಕೊಳ್ಳಲು ಬಂದಿದ್ದ ಕೇರಳ ಪೊಲೀಸರು ತಮ್ಮ ಅನುಮಾನಾಸ್ಪದ ನಡವಳಿಕೆಯಿಂದ ತಾವೇ ಪೊಲೀಸರ ತನಿಖೆ ಎದುರಿಸಿದ ಘಟನೆಯೊಂದು ಬುಧವಾರ ಬಿ.ಸಿ.ರೋಡಿನಲ್ಲಿ ನಡೆದಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಟ್ವಾಳ ಪೇಟೆಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ ಸಿಬ್ಬಂದಿಯನ್ನು ವಶಕ್ಕೆ ಪಡೆಯಲು ಕೇರಳ ಪೊಲೀಸರು ಬುಧವಾರ ಮಧ್ಯಾಹ್ನದ ವೇಳೆಗೆ ಬಂಟ್ವಾಳಕ್ಕೆ ಬಂದಿದ್ದರು. ಆದರೆ ಸ್ಥಳೀಯ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡದೆ, ಸಮವಸ್ತ್ರವನ್ನು ಧರಿಸದೆ ಬಾಡಿಗೆ ವಾಹನ ಮಾಡಿಕೊಂಡು ಬಂದಿದ್ದ ಪೊಲೀಸರು ಬಂಟ್ವಾಳದ ಚಿನ್ನಾಭರಣ ಮಳಿಗೆಗೆ ನುಗ್ಗಿ ಅಲ್ಲಿನ ಸಿಬ್ಬಂದಿ ವಿನಾಯಕ ಎಂಬಾತನನ್ನು ಕರೆದೊಯ್ದಿದ್ದರು.
ಮಳಿಗೆಗೆ ಬಂದಿದ್ದವರು ಅಪಹರಣಕಾರರು ಎಂದು ಸಂಶಯಗೊಂಡು ಅಂಗಡಿ ಮಾಲಕರು ತಕ್ಷಣ ಬಂಟ್ವಾಳ ನಗರ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದರು. ಸಿಬ್ಬಂದಿಯನ್ನು ಕರೆದೊಯ್ದಿದ್ದ ಕೇರಳ ಪೊಲೀಸರು ಕೆಲವೇ ಕ್ಷಣಗಳಲ್ಲಿ ವಶಕ್ಕೆ ಪಡೆದಿದ್ದ ಯುವಕನನ್ನು ಮತ್ತೆ ಅಂಗಡಿಯ ಬಳಿ ಬಿಟ್ಟು ತೆರಳುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಪೊಲೀಸರು ಕೇರಳದಿಂದ ಬಂದಿದ್ದ ಪೊಲೀಸರ ವಾಹನವನ್ನು ತಡೆ ಹಿಡಿದು ಠಾಣೆಗೆ ಕರೆ ತಂದಿದ್ದರು.
ಅವರ ಗುರುತಿನ ಚೀಟಿ, ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅವರು ಕೇರಳ ಪೊಲೀಸರು ಎಂಬುದು ದೃಢಪಟ್ಟಿದ್ದು ಬಳಿಕ ಕಳುಹಿಸಿ ಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೊರ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ ಕೇರಳ ಪೊಲೀಸರು ಈ ನಿಯಮವನ್ನು ಗಾಳಿಗೆ ತೂರಿದ ಹಿನ್ನಲೆಯಲ್ಲಿ ಅವರೇ ತಪಾಸಣೆಗೊಳಗಾಗ ಬೇಕಾಯಿತು ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.