ಮಹಾರಾಷ್ಟ್ರ : ಗರ್ಭಿಣಿಯರಿಗೆ ಮತ್ತು ಜನಿಸುವ ಮಕ್ಕಳಲ್ಲಿ ಅದರಲ್ಲೂ ಆದಿವಾಸಿ ಬುಡಕಟ್ಟು ಪಂಗಡದಲ್ಲಿ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವುದರಿಂದ ಗರ್ಭಿಣಿಯರಿಗೆ ಹಾಗೂ ಹುಟ್ಟುವ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮಹಾರಾಷ್ಟ್ರ ಸರಕಾರ ಆಹಾರ ಯೋಜನೆಯನ್ನು ಜಾರಿಗೆ ತಂದಿದೆ.
ಎಪಿಜೆ ಅಬ್ದುಲ್ ಕಲಾಂ ರವರ ಸವಿನೆನಪಿಗಾಗಿ ಈ ಯೋಜನೆಗೆ ಎಪಿಜೆ ಅಬ್ದುಲ್ ಕಲಾಂ ಅಮೃತ ಆಹಾರ ಯೋಜನೆ ಎಂಬ ಹೆಸರನ್ನಿಡಲಾಗಿದೆ.ಬುಡಕಟ್ಟು ಅಭಿವೃದ್ಧಿ ಇಲಾಖೆಯ ವತಿಯಿಂದ ಈ ಯೋಜನೆಯು ಜಾರಿಗೆ ಬರಲಿದ್ದು ಗರ್ಭಿಣಿ ಮಹಿಳೆಯರಿಗೆ ದಿನಕ್ಕೊಂದು ಬಾರಿ ಪೌಷ್ಟಿಕ ಆಹಾರ ಉಚಿತವಾಗಿ ನೀಡಬೇಕೆಂಬುದು ಸರಕಾರದ ಚಿಂತನೆಯಾಗಿದೆ. ಗರ್ಭಿಣಿಯಾದ ಮೂರು ತಿಂಗಳಿನಿಂದ ಜನಿಸುವ ಮಗುವಿಗೆ 3 ತಿಂಗಳು ಆಗುವವರೆಗೂ ಆಹಾರ ನೀಡಲಾಗುವುದು.
ಸರಕಾರ ಒಂದು ಊಟಕ್ಕೆ 22 ರೂ. ವ್ಯಯಿಸಲಿದೆ. ಈ ಯೋಜನೆಗೆ ಸುಮಾರು 75 ಕೋಟಿ ಖರ್ಚಾಗಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇದರಲ್ಲಿ ಸಹಕರಿಸುವ ಅಂಗನವಾಡಿ ಕಾರ್ಯಕರ್ತೆಯರ ಸಂಬಳಕ್ಕಾಗಿ 10 ಕೋಟಿ ರೂ. ವ್ಯಯಿಸಲಿದೆ.ಯೋಜನೆಯ ಅನುಸಾರ, ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ಪ್ರತಿ ಬುಡಕಟ್ಟು ಗ್ರಾಮದಲ್ಲಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗುವುದು. ಸಮಿತಿಯಲ್ಲಿ ಪಂಚಾಯತ್ನ ಓರ್ವ ಮಹಿಳಾ ಸದಸ್ಯೆ, ಇಬ್ಬರು ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಮತ್ತು ಒಬ್ಬರು ಅಂಗನವಾಡಿ ಕಾರ್ಯಕರ್ತೆಯರು ಇರಲಿದ್ದಾರೆ.
ಬಿಸಿ ಊಟದಲ್ಲಿ ರೋಟಿ, ಅಕ್ಕಿ, ಬೇಳೆಕಾಳು, ಅಯೋಡೈಸಡ್ ಉಪ್ಪಿನಲ್ಲಿ ಬೇಯಿಸಿದ ಹಸಿರು ತರಕಾರಿಗಳು, ಬೆಲ್ಲ, ಲಡ್ಡು, ನೆಲಗಡಲೆ ಮತ್ತು ಬೇಯಿಸಿದ ಮೊಟ್ಟೆಗಳು, ಬಾಳೆಹಣ್ಣು ಹಲ್ವಾ ಮತ್ತು ಸೋಯಾಮಿಲ್ಕ್ನ್ನು ನೀಡಲಾಗುತ್ತದೆ.ಸರ್ಕಾರ ಅಧ್ಯಯನದ ಪ್ರಕಾರ ಬುಡಕಟ್ಟು ಪ್ರದೇಶಗಳಲ್ಲಿ ಜನಿಸಿದ 23.1% ಮಕ್ಕಳ ತೂಕ ಅತಿ ಕಡಿಮೆ ಕಂಡುಬಂದಿದ್ದು, ಬುಡಕಟ್ಟು ಪ್ರದೇಶದಲ್ಲಿ ವಾಸಿಸುವ ಮಹಿಳೆಯರ ಬಿಎಂಐ ಸರಾಸರಿ 18.5 ರಷ್ಟಿದೆ. ಆದ್ದರಿಂದ ಈ ಯೋಜನೆಯನ್ನು ಜಾರಿಗೆ ತರುವುದರಿಂದ ಅಪೌಷ್ಟಿಕತೆ ಕಡಿಮೆಯಾಗುವುದು ಎನ್ನಲಾಗುತ್ತಿದೆ.
ಊಟಕ್ಕೆ ಬೇಕಾದ ಪದಾರ್ಥಗಳನ್ನು ಸ್ಥಳೀಯ ಮಟ್ಟದಲ್ಲಿ ಖರೀದಿಸಿ ಅಲ್ಲಿನ ಮಹಿಳೆಯರಿಗೆ ಸ್ವಾವಲಂಬಿ ಜೀವನ ಮಾತ್ರವಲ್ಲ ಭ್ರಷ್ಟಾಚಾರವನ್ನು ತಡೆಯುವಲ್ಲಿ ಇದು ಮುಖ್ಯ ಪಾತ್ರ ವಹಿಸಲಿದೆ ಎಂಬುದು ಸರಕಾರದ ಚಿಂತನೆ.ನವೆಂಬರ್ನಲ್ಲಿ ಪ್ರಾರಂಭಿಸಲಾಗುವ ಈ ಯೋಜನೆಯು ಪ್ರತಿ ವರ್ಷ ಸುಮಾರು1.92 ಲಕ್ಷ ಮಹಿಳೆಯರನ್ನು ತಲುಪಲಿದೆ ಎಂದು ದೇವೇಂದ್ರ ಫಡ್ನವಿಸ್ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.