ಬೆಳ್ತಂಗಡಿ : ಶಾಲೆಗೆ ಬರುವ ಮಕ್ಕಳನ್ನು ಹತ್ತಿಸಿಕೊಳ್ಳಲು ನಿಲ್ಲಿಸದೇ ಬಸ್ಗಳು ಹೋಗುತ್ತಿವೆ, ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಸರಿಯಾಗಿಲ್ಲ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಸರಿಪಡಿಸಿ, ಮಕ್ಕಳು ಓದುವ ಸಮಯದಲ್ಲಿ ಕರೆಂಟ್ ಕಟ್ ಮಾಡಬೇಡಿ, ಶಾಲೆ ಕಾಲೇಜು ಹತ್ತಿರ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ, ರಸ್ತೆ ದಾಟಲು ಸರಿಯಾದ ವ್ಯವಸ್ತೆಯಿಲ್ಲ, ವಿದ್ಯಾರ್ಧಿ ನಿಲಯಗಳಲ್ಲಿ ಆಹಾರ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಮಕ್ಕಳು ಬೆಳ್ತಂಗಡಿಯಲ್ಲಿ ನಡೆದ ಮಕ್ಕಳ ಸಂಸತ್ತಿನಲ್ಲಿ ಶಾಸಕರ ಮುಂದೆ ತೆರೆದಿಟ್ಟರು. ಇದೆಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಶಾಸಕ ಕೆ ವಸಂತ ಬಂಗೇರ ಅವರು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದರು.
ಬೆಳ್ತಂಗಡಿಯ ಸುವರ್ಣ ಆರ್ಕೇಡಿನಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು, ಬೆಳ್ತಂಗಡಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ವೆಲೋರೆಡ್ ಮಂಗಳೂರು ಇದರ ಆಶ್ರಯದಲ್ಲಿ ಮಕ್ಕಳ ಸಂಸತ್ತು ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಶಾಲಾ ಮಕ್ಕಳು ತಮ್ಮ ಊರಿನ ಶಾಲೆಯ ಸಮಸ್ಯೆಗಳನ್ನು ಬಿಡಿಸಿಟ್ಟರು. ತಾಲೂಕಿನಲ್ಲಿ ಇರುವ ಸರಕಾರಿ ಬಸ್ನ ಸಮಸ್ಯಗೆ ಉತ್ತರಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಲ್ಲಿ 8 ಸಾವಿರಕ್ಕೂ ಅಧಿಕ ಬಸ್ ಪಾಸ್ಗಳನ್ನು ನೀಡಲಾಗಿದೆ ಎಂದರು. ಇದಕ್ಕೆ ಶಾಸಕರು ಎಲ್ಲ ವೇಗದೂತ ಬಸ್ಗಳಿಗೂ ನಾಳೆಯಿಂದಲೇ ಬಸ್ಪಾಸ್ ನಲ್ಲಿ ಸಂಚರಿಸಲು ವಿದ್ಯಾರ್ಧಿಗಳಿಗೆ ಅವಕಾಶ ನೀಡಬೇಕು ಯಾರಾದರೂ ಬಸ್ ಚಾಲಕರು ನಿರ್ವಾಹಕರು ನಿಲ್ಲಿಸದೇ ಹೋದರೆ ತಮಗೆ ಮಾಹಿತಿನೀಡುವಂತೆ ಸೂಚಿಸಿದರು. ಬಸ್ಗಳಲ್ಲಿ ಸಂಚರಿಸುವ ಮಕ್ಕಳಿಂದ ಚಾಲಕ ನಿರ್ವಾಹಕರ ಬಗ್ಗೆ ಹಲವಾರು ದೂರುಗಳು ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಲು ಮಕ್ಕಳೊಂದಿಗೆ ಬಸ್ಗಳಲ್ಲಿ ಸಂಚಾರಮಾಡುವುದಾಗಿಯೂ ತಪಿತಸ್ಥರ ವಿರುದ್ದ ಕ್ರಮ ಕೈಗೋಳ್ಳುವುದಾಗಿಯೂ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ಇಲಾಖಾಧಿಕಾರಿಗಳು ಈಗಾಗಲೆ ಈ ವಿಚಾರಗಳ ಬಗ್ಗೆ ಸೂಚನೆ ನೀಡಲಾಗಿದೆ ಇನ್ನು ಎಲ್ಲ ಬಸ್ಗಳಲ್ಲಿಯೂ ಪಾಸ್ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಶಾಲೆಗಳ ಸಮೀಪವಿರುವ ಗೂಂಡಂಗಡಿಗಳಲ್ಲಿ ಬೀಡಿ ಸಿಗರೇಟ್, ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತಿದ್ದರೆ ಕೂಡಲೆ ಪೋಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಮಾದಕ ವಸ್ತುಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದರು. ಮಕ್ಕಳ ಮೇಲೆ ಯಾವುದಾದರೂ ರೀತಿಯ ದೌರ್ಜನ್ಯಗಳು ನಡೆದರೆ ಕೂಡಲೆ ಮಾಹಿತಿನೀಡುವಂತೆ ಅವರು ಸಲಹೆ ನೀಡಿದರು. ವಿದ್ಯಾರ್ಧಿನಿಯೋರ್ವಳು ಹದಿಹರೆಯದ ಸಮಸ್ಯೆಗಳ ಬಗ್ಗೆ ನಮಗೆ ಶಾಲೆಗಳಲ್ಲಿ ಸರಿಯಾದ ಮಾಹಿತಿ ನೀಡಲಾಗುತ್ತಿಲ್ಲ ಎಂಬ ದೂರನ್ನು ಮುಂದಿಟ್ಟಾಗ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲ ಈಗಾಗಲೆ ಈ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚನೆ ನೀಡಿದ್ದೇನೆ ಯಾರಾದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಿಸಿಯೂಟದಲ್ಲಿ ಹುಳ ಪತ್ತೆಯಾದ ಬಗ್ಗೆ ಬಾಲಕಿಯೋರ್ವಳು ಮಾಹಿತಿ ನೀಡಿದಾಗ ಗರಂ ಆದ ಶಾಸಕರು ನಾಳೆಯೇ ಆ ಶಾಲೆಗೆ ತೆರಳಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಸಮಸ್ಯೆಗಳಾದರೂ ತನಗೆ ನೇರವಾಗಿ ಒಂದು ಪತ್ರ ಬರೆಯಿರಿ ಅದನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ಮಕ್ಕಳಿಗೆ ಭರವಸೆ ನೀಡಿದರು. ವೇದಿಕೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕಸ್ತೂರಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶ್ರೀಧರ ರಾವ್, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಸುಮತಿ, ಜಾಕೀರ್ ಹುಸೈನ್, ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದ ಹೊರ ಜಿಲ್ಲೆಯ ಜನರು ಇಲ್ಲಿಗೆ ಮಕ್ಕಳನ್ನು ಕಳುಹಿಸಲು ಭಯ ಪಡುವಂತಾಗಿದೆ. ಇಲ್ಲಿ ಕಲಿತದ್ದು ಸಾಕು ಎಂದು ಮನೆಯವರು ಹೇಳುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆಯಿಂದ ಬಂದಿರುವ ವಿದ್ಯಾರ್ಧಿನಿಯೋರ್ವಳು ತನ್ನ ನೋವನ್ನು ಬಿಡಿಸಿಟ್ಟಳು ಇಲ್ಲಿ ಮತ್ತೆ ಶೈಕ್ಷಣಿಕ ವಾತಾವರಣ ನಿರ್ಮಿಸಿಕೊಡಿ ಎಂದು ಆಕೆ ಶಾಸಕರ ಮುಂದೆ ಬೇಡಿಕೆಯಿಟ್ಟಳು. ಕಡ್ಡಾಯ ಪ್ರಾಧಮಿಕ ಶಿಕ್ಷಣದ ಪ್ರಾಯವನ್ನು ೧೮ ಕ್ಕೆ ಏರಿಸಬೇಕು. ಮದುವೆಯ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ೧೮ ರಿಂದ ೨೧ ಕ್ಕೆ ಏರಿಸಬೇಕು ಆಗ ನಮಗೆ ಕಲಿಯಲು ಇನ್ನಷ್ಟು ಅವಕಾಶ ದೊರೆಯುತ್ತದೆ ಎಂಬ ಬೇಡಿಕೆಯೂ ಮಕ್ಕಳಿಂದ ಕೇಳಿ ಬಂತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.