ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ನಾವೂರು ಗ್ರಾಮದ ಪಿಲಿತ್ತಡಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಎಸ್ ಶರಣಪ್ಪ ಗುರುವಾರ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ತಮ್ಮ ಮಿತಿಯಲ್ಲಿ ಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ಹಾಗೂ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಕಾಣಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದಟ್ಟ ಅರಣ್ಯದ ನಡುವೆ ಇರುವ ಈ ಪ್ರದೇಶಕ್ಕೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ತಲುಪಿಲ್ಲ. ರಸ್ತೆಯಂತೂ ಸಂಪೂರ್ಣ ಕೆಟ್ಟುಹೋಗಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ದುರಸ್ತಿ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ವಿದ್ಯುತ್ ಸಂಪರ್ಕ ಪಡೆಯಲು ನಡೆಸಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿದೆ. ರಾಜೀವ ಗಾಂಧಿ ವಿದ್ಯುದೀಕರಣ ಯೋಜನೆಯಲ್ಲಿ ಇಲ್ಲಿಗೆ ವಿದ್ಯುತ್ ಸಂಪರ್ಕಕ್ಕೆ ಎಲ್ಲ ಮಂಜೂರಾತಿಗಳೂ ದೊರೆತಿತ್ತು ಆದರೆ ಕೊನೆಯ ಕ್ಷಣದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸಿದರು ಎಂದು ಜನರು ವಿವರಿಸಿದರು. ಇಲ್ಲಿ ಸುಮಾರು 35 ಕುಟುಂಬಗಳು ವಾಸಿಸುತ್ತಿದ್ದು ಹಲವರಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಕಂದಾಯ ಇಲಾಖೆಯ ಮೂಲಕ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದಾಗ ಅದನ್ನು ಅರಣ್ಯ ಎಂದು ತಡೆಹಿಡಿಯಲಾಗಿತ್ತು ಅರಣ್ಯ ಹಕ್ಕು ಕಾನೂನು ಬಂದಾಗ ಅದರಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಆಗ ಅದನ್ನು ಇಲಾಖೆಯವರು ಇದು ಅರಣ್ಯ ಜಮೀನು ಅಲ್ಲ ಎಂದು ತಿರಸ್ಕರಿಸಿದ್ದರು. ಒಟ್ಟಾರೆಯಾಗಿ ನಾವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿಯವರಲ್ಲಿ ಕೇಳಿಕೊಂಡರು.
ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ರಸ್ತೆ ದುರಸ್ಥಿಗೆ ಸಂಬಂಧಿಸಿದಂತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸಲು ಅರಣ್ಯ ಇಲಾಖೆಯ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ಅನುಮತಿ ಪಡೆದು ಕಾಮಗಾರಿ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದರು. ವನ್ಯ ಜೀವಿ ವಿಭಾಗದ ಅಧಿಕಾರಿಗಳು ಹೆಚ್ಚು ಮರ ಕಡಿಯದೆ ಆಗುವ ಕಾಮಗಾರಿಗಳಿಗೆ ಅನುಮತಿ ನೀಡಲು ಈಗಿನ ಕಾನೂನಿನಲ್ಲಿ ಅವಕಾಶವಿದೆ. ಗ್ರಾಮ ಅರಣ್ಯ ಸಮಿತಿಯ ಮೂಲಕ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಮೂಲ ನಿವಾಸಿಗಳು ನೀವು ಅವಕಾಶ ನೀಡುತ್ತೇವೆ ಎಂದು ಬಾಯಲ್ಲಿ ಹೇಳುತ್ತೀರಿ. ಆದರೆ ಈ ವರೆಗೆ ಕೇಳಿರುವ ಯಾವುದೇ ಯೋಜನೆಗಳಿಗೂ ಅನುಮತಿ ನೀಡಿಲ್ಲ. ಕೆಲವು ಪ್ರಸ್ತಾವನೆಗಳನ್ನು ಸಲ್ಲಿಸಿ ವರ್ಷಗಳೇ ಕಳೆದರೂ ಉತ್ತರವೇ ಬಂದಿಲ್ಲ ಎಂದು ಆರೋಪಿಸಿದರು. ಯಾವುದೇ ಅರ್ಜಿಗಳು ಬಂದರೆ ಕೂಡಲೇ ಅದನ್ನು ವಿಲೇ ಮಾಡುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು. ವಿದ್ಯುತ್ ಬಗ್ಗೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಜಂಟಿ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಅಕ್ರಮ ಸಕ್ರಮ ಯೋಜನೆಯಲ್ಲಿ ಹಾಗೂ ಅರಣ್ಯ ಹಕ್ಕು ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನೂ ಕೂಡಲೇ ಪರಿಶೀಲಿಸಿ ವಿಲೇ ಮಾಡಬೇಕು ಎಂದು ಸೂಚಿಸಿದರು. ಅರಣ್ಯದ ಒಳಗಿರುವ ಕಂದಾಯ ಇಲಾಖೆಯ ಜಮೀನನ್ನು ಕೃಷಿಕರಿಗೆ ನೀಡುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಅರಣ್ಯ ಇಲಾಖೆಯವರು ತಿಳಿಸಿದರು. ಇದು ಕಂದಾಯ ಜಮೀನಾದರೂ ಅರಣ್ಯದ ಬಫರ್ ಆಗಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಅರಣ್ಯ ಇಲಾಖೆಯ ಆಕ್ಷೇಪ ಇಲ್ಲದಿದ್ದಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಜಮೀನಿಗೆ ಹಕ್ಕುಪತ್ರ ನೀಡಲು ಸಾಧ್ಯವಿದ್ದು ಆ ಪ್ರಕ್ರಿಯೆಗೆ ಕೂಡಲೆ ಚಾಲನೆ ನೀಡುವಂತೆ ಜಿಲ್ಲಾಧಿಕಾರಿಯವರು ತಹಶೀಲ್ದಾರರಿಗೆ ಸೂಚಿಸಿದರು.
ಪಡಿತರ ಸಾಮಾಗ್ರಿಗಳನ್ನು ಪಡೆಯಲು ದೂರದ ನಡಕ್ಕೆ ಹೋಗಬೇಕಾಗಿದ್ದು ತಲೆಹೊರೆಯಲ್ಲಿಯೇ ತರಬೇಕಾಗಿದೆ ಎಂದಾಗ ಇಲ್ಲಿಗೆ ಸಂಚಾರಿ ಪಡಿತರ ಅಂಗಡಿ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ, ಅದೇರೀತಿ ಮತದಾನ ಮಾಡಲು ಇಲ್ಲೇ ಸಮೀಪದ ಸುಲ್ಲೋಡಿ ಶಾಲೆಯಲ್ಲಿ ಮತಗಟ್ಟೆ ತೆರೆಯುವಂತೆಯೂ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು. ನಾರಾವಿಯಲ್ಲಿ ಕಾಲುಸಂಕದ ಕಾಮಗಾರಿಯನ್ನು ತಡೆದು ಕಾಮಗಾರಿಯ ಸಾಮಾಗ್ರಿಗಳನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಿದ ಜನರು ಸರಕಾರಿ ಇಲಾಖೆಗಳ ನಡುವೆಯೇ ಹೊಂದಾಣಿಕೆಯಿಲ್ಲದಿರುವುದು ಸರಿಯಲ್ಲ ಎಂದರು.
ಅರಣ್ಯ ಹಕ್ಕುಪತ್ರಕ್ಕೆ ಬೆಲೆಯೇ ಇಲ್ಲ: ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಸಿಕ್ಕಿರುವ ಹಕ್ಕುಪತ್ರಕ್ಕೆ ಬೆಲೆಯೇ ಇಲ್ಲವಾಗಿದೆ. ಅದಕ್ಕೆ ಪಹಣಿ ಪತ್ರವೂ ಸಿಗುವುದಿಲ್ಲ ಬ್ಯಾಂಕ್ಗಳಿಂದ ಕೃಷಿಗಾಗಿ ಸಾಲವನ್ನೂ ಪಡೆಯಲು ಅವಕಾಶವಿಲ್ಲ ಎಂದು ಶೇಖರ ಲಾಯಿಲ ಗಮನ ಸೆಳೆದರು. ಇದು ಪೂರ್ಣ ಪ್ರಮಾಣದ ಹಕ್ಕುಪತ್ರವಲ್ಲ ಎಂದು ತಿಳಿಸಿದ ಅಧಿಕಾರಿಗಳು ಇಲ್ಲಿ ಜಮೀನಿನ ಮಾಲಿಕತ್ವ ನೀಡುವುದಿಲ್ಲ ಪರಂಪರಾಗತವಾಗಿ ತಮ್ಮ ಬಳಿ ಇದ್ದ ಜಮೀನನ್ನು ಅನುಭೋಗಿಸಲು ಮಾತ್ರ ಅವಕಾಶ ನೀಡುತ್ತದೆ. ಅವರು ತಾವು ಅದನ್ನು ಅನುಭವಿಸಬಹುದೇ ಹೊರತು ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಕೃಷಿಕರಿಗೆ ಬ್ಯಾಂಕ್ಗಳಿಂದ ಸಾಲನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭ ತಹಶೀಲ್ದಾರ್ ಪ್ರಸನ್ನಮೂರ್ತಿ, ಜಿಲ್ಲಾಧಿಕಾರಿಗಳ ಕಾರ್ಯದರ್ಶಿ ಸುಧಾಕರ್, ಜಿ ಪಂ ಇಂಜಿನಿಯರಿಂಗ್ ಉಪವಿಭಾಗದ ಸಿ ಆರ್ ನರೇಂದ್ರ, ಬೆಳ್ತಂಗಡಿ ವೃತ್ತನಿರೀಕ್ಷಕ ಲಿಂಗಪ್ಪ ಬಿ ಆರ್, ಸಮಾಜ ಕಲ್ಯಾಣ ಅಧಿಕಾರಿ ಮೋಹನ್ ತಾಲೂಕು ಪಂಚಾಯತು ಸದಸ್ಯ ಗಣೇಶ್ ಕಣಾಲ್, ಗ್ರಾಮ ಪಂಚಾಯತು ಅಧ್ಯಕ್ಷೆ ನಳಿನಿ ಗ್ರಾ ಪಂ ಸದಸ್ಯ ಹರೀಶ್ ಸಾಲಿಯಾನ್ ವಿವಿಧ ಇಲಾಖೆಗಳ ಅಧಿಕಾರಿಗಳುಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.