ಬೆಳ್ತಂಗಡಿ : 94 ಸಿ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಗ್ರಾಮವಾರು ವಿಂಗಡಿಸಿದ ಬಳಿಕ ತಹಶೀಲ್ದಾರ್ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಪಂಚಾಯತುಗಳಿಗೆ ತೆರಳಿ ಅಲ್ಲಿ ಒಂದೇ ದಿನ ಗ್ರಾಮದ ಅರ್ಜಿಗಳನ್ನು ಪರಿಶೀಲಿಸಿ ವಿಲೇಮಾಡುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ಜಿಲ್ಲೆಯ ತಾಲೂಕುಗಳ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರದನ್ವಯ ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ಆಗಮಿಸಿದ ಸಂದರ್ಭ ಕಡತಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ವೇಳೆ ಅವರು ಈ ಸೂಚನೆ ನೀಡಿದರು.
94 ಸಿ ಯೋಜನೆಯಲ್ಲಿ ಜನರಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಅನಗತ್ಯ ವಿಳಂಬನೀತಿ ಅನುಸರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರು ಕೂಡಲೆ ಅರ್ಜಿಗಳ ವಿಲೇವಾರಿಗೆ ಗ್ರಾಮ ಮಟ್ಟದಲ್ಲಿಯೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಬಗ್ಗೆ ಒಂದೇ ವಾರದಲ್ಲಿ ಯೋಜನೆ ಸಿದ್ದಪಡಿಸಿ ಪರಿಶೀಲನೆ ಕಾರ್ಯ ಆರಂಭಿಸುವಂತೆ ಅವರು ಸೂಚಿಸಿದರು.
ತಾಲೂಕಿನಲ್ಲಿ 9260 ಅರ್ಜಿಗಳು ಬಂದಿದ್ದು ಅದರಲ್ಲಿ ಕೇವಲ 667 ಮಾತ್ರ ವಿಲೇಮಾಡಿ ಹಕ್ಕುಪತ್ರ ಸಿದ್ದಪಡಿಸಲಾಗಿದೆ. ಇದರಲ್ಲಿ ಕೇವಲ 13 ಮಾತ್ರ ಪರಿಶಿಷ್ಟ ಜಾತಿ ಪಂಗಡದವರದ್ದಾಗಿದೆ ಎಂದು ತಹಶೀಲ್ದಾರ್ ತಿಳಿಸಿದಾಗ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯವರು ಪರಿಶಿಷ್ಟ ಜಾತಿ ಪಂಗಡದವರ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಯಾವುದೇ ಸೂಚನೆಯಿಲ್ಲದೆ ಅಂಗವಿಕಲ ವೇತನ ಸ್ಥಗಿತಗೊಂಡಿರುವ ಬಗ್ಗೆ ಎರಡೂ ಕಾಲುಗಳಿಲ್ಲದ ಉಮೇಶ್ಗೌಡ ಹತ್ಯಡ್ಕ ಹಾಗೂ ಎರಡೂ ಕಣ್ಣುಗಳಿರದ ಗಣೇಶ್ ಪ್ರಭು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಸ್ಥಗಿತಗೊಳ್ಳಲು ಕಾರಣವೇನು ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಹೀಗಾಗಿದೆ ಎಂಬ ದೂರೂ ಕೇಳಿ ಬಂತು.
ಕೂಡಲೇ ಅದನ್ನು ಪರಿಶೀಲಿಸಿ ಮುಂದಿನ ತಿಂಗಳಿನಿಂದ ಅಂಗವಿಕಲ ವೇತನ ಸಿಗುವಂತೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು. ಅಕ್ರಮ ಸಕ್ರಮ ಕಡತಗಳ ವಿಲೇಯಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಹಲವು ದೂರುಗಳು ಕೇಳಿ ಬಂದವು ಜಮೀನು ಮಂಜೂರಾದರೂ ಹಕ್ಕುಪತ್ರ ವಿತರಣೆಯಾಗದಿರುವ ಹಲವಾರು ಪ್ರಕರಣಗಳಿರುವ ಬಗ್ಗೆ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಜಶೇಖರ ಅಜ್ರಿ ಅವರು ಗಮನ ಸೆಳೆದರು. ತಾಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮದ ಕಡತಗಳು ನಾಪತ್ತೆಯಾದ ಬಗ್ಗೆ ದೂರುಗಳು ಬಂದಾಗ ಜಿಲ್ಲಾಧಿಕಾರಿಗಳು ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು ಕಡತಗಳು ನಾಪತ್ತೆಯಾದ ಬಗ್ಗೆ ದೂರುಗಳು ಬರುತ್ತಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಕಮೀಷನರ್ರವರಿಗೆ ಆದೇಶಿಸಿದರಲ್ಲದೆ ನಾಪತ್ತೆಯಾದ ಕಡತಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಗಿದ್ದು ಹೊಸ ಕಡತಗಳನ್ನು ತಯಾರಿಸುವಂತೆ ಆದೇಶಿಸಿದರು.
ಮಾಜಿ ಸೈನಿಕ ಡಿ. ಎಸ್. ಚಂದಪ್ಪಇವರಿಗೆ ಮಂಜೂರಾದ ಜಮೀನನ್ನು ಸ್ವಾಧೀನಕ್ಕೆ ಕೊಡುವಂತೆ ಉಚ್ಚನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿದರೂ ಸ್ಥಳೀಯ ಭೂ ಮಾಪಕರು ಸರಿಯಾದ ಕ್ರಮಕೈಗೊಳ್ಳದಿರುವ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಕಳಿಯ ಜಾರಿಗೆಬೈಲು ಪರಪ್ಪು ಎಂಬಲ್ಲಿ ದಫನ್ ಭೂಮಿಯಲ್ಲಿ ಒಂದು ಸಂಘಟನೆಯವರು ಧ್ವಜ, ಕಟ್ಟೆಕಟ್ಟುವ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಒಂದು ಸಂಘಟನೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಸರಕಾರದ ನಿಯಮ ಉಲ್ಲಂಘಿಸುವುದಾದರೆ ಭೂಮಿ ಸರಕಾರದ ವಶದಲ್ಲೇ ಇರಲಿ ಇದನ್ನು ಪುತ್ತೂರು ಸಹಾಯಕ ಕಮೀಷನ್ರವರು ಸುಪರ್ದಿಗೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು. ದಫನ ಮಾಡುವುದಾದರೆ ಸಹಾಯಕ ಕಮೀಷನರ್ರವರ ಅನುಮತಿ ಪಡೆಯುವಂತೆ ಸಂಘಟಕರಿಗೆ ಸೂಚಿಸಿದರು. ಕೆರೆಒತ್ತುವರಿ ಬಗ್ಗೆ ತನಿಖೆ, ಸರಕಾರಿ ಕಟ್ಟಡಗಳ ಸ್ಥಳದ ಬಗ್ಗೆ, ಪಹಣಿಪತ್ರಿಕೆಯಲ್ಲಿ ತಪ್ಪುನೊಂದಾವಣೆ, ರೇಷ್ಮೆಕೃಷಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಪುತ್ತೂರು ಸಹಾಯಕ ಕಮೀಷನರ್ ಸತೀಶ್, ತಹಶೀಲ್ದಾರ್ ಹೆಚ್. ವಿ.ಪ್ರಸನ್ನಕುಮಾರ್, ಜಿಲ್ಲಾಧಿಕಾರಿಗಳ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.