ಇಸ್ಲಾಮಾಬಾದ್ : ಆಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದ ಕೆಲವು ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸುಮಾರು 260 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 1200 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆಯು 7.5 ರಷ್ಟು ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ಆಫ್ಘಾನಿಸ್ತಾನದ ಈಶಾನ್ಯ ದಿಕ್ಕಿನಲ್ಲಿ ಕಾಬೂಲಿನಿಂದ 250 ಕಿ. ಮೀ. ದೂರದಲ್ಲಿರುವ ಹಿಂದುಕುಶ್ ನಲ್ಲಿ 213.5 ಕಿ. ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ತಿಳಿದು ಬಂದಿದೆ.
ಭೂಕಂಪನದ ಪರಿಣಾಮ ದೆಹಲಿ, ಪಂಜಾಬ್, ಉತ್ತರಪ್ರದೇಶ, ಛತ್ತೀಸ್ ಘಡ, ಗುಜರಾತ್ ಹಾಗೂ ಭಾರತದ ಬಹುತೇಕ ಕಡೆಗಳಲ್ಲಿ ಅನುಭವವಾಗಿದ್ದರಿಂದ ಜನರು ಭಯಭೀತರಾಗಿ ಮನೆ ಮತ್ತು ಕಛೇರಿಗಳಿಂದ ಹೊರಬಂದಿದ್ದಾರೆ. ಭಾರತದಲ್ಲಿ ಸಂಭವಿಸಿರುವ ಭೂಕಂಪನದಲ್ಲಿ ಈವರೆಗೂ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಬಲವಾಗಿ ಭೂಮಿ ಕಂಪಿಸಿದ ಪರಿಣಾಮ ಪರ್ವತ ಪ್ರದೇಶದ ಹಲವೆಡೆ ಕಟ್ಟಡಗಳು ನೆಲಕ್ಕುರುಳಿವೆ. ಅನೇಕ ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ವಿದ್ಯುತ್, ಮೊಬೈಲ್ ನೆಟ್ ವರ್ಕ್ ಸೇವೆಗಳು ಹಲವೆಡೆ ಸ್ಥಗಿತಗೊಂಡಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಶಂಕಿಸಲಾಗಿದೆ.
ಆಪ್ಘಾನಿಸ್ಥಾನದಲ್ಲಿ ಉಂಟಾದ ಭೂಕಂಪದಲ್ಲಿ ಶಾಲಾ ಮಕ್ಕಳು ಹೊರಬರಲು ನೂಕು ನುಗ್ಗಲು ಉಂಟಾಗಿದ್ದರಿಂದ ಕಾಲ್ತುಳಿತ ಸಂಭವಿಸಿ 18ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 35 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಸಂತ್ರಸ್ತರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಆಹಾರ, ವೈದ್ಯಕೀಯ ನೆರವು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಭೂಕಂಪ ಕುರಿತಂತೆ ಮೋದಿಯವರು ಟ್ವೀಟ್ ಮಾಡಿದ್ದು, ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ. ಭೂಕಂಪ ಕುರಿತಂತೆ ಮಾಹಿತಿ ನೀಡಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.