ಬೆಳ್ತಂಗಡಿ : ತುಳುನಾಡಿಗೆ ಮಾರಕವಾದ ಎತ್ತಿನಹೊಳೆ ಯೋಜನೆ (ನೇತ್ರಾವತಿ ತಿರುವು ಯೋಜನೆ) ರದ್ದು ಪಡಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಮತ್ತು ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವಂತೆ ಮತ್ತು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹರಿದು ಹಂಚಿ ಹೋಗಿರುವ ಪರಂಪರಾಗತ ತುಳುನಾಡನ್ನು ಒಂದುಗೂಡಿಸಿ ಪ್ರತ್ಯೇಕ ತುಳುನಾಡು ರಾಜ್ಯವನ್ನು ರಚಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ತುಳುನಾಡ್ ರಾಜ್ಯದ ಧ್ವಜಾರೋಹಣ ಮಾಡುವ ಮುಖಾಂತರ ತುಳುನಾಡಿನ ನೆಲ, ಜಲ, ಭಾಷೆಯ ಉಳಿವಿಗೆ ಹೋರಾಟದ ಹೊಸ ಮುನ್ನುಡಿಯನ್ನು ಬರೆಯುವ ಉದ್ದೇಶದಿಂದ ನ.1 ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದ ವಠಾರದಲ್ಲಿ ತುಳುನಾಡ್ ರಾಜ್ಯದ ಧ್ವಜಾರೋಹಣ ಮಾಡುವ ಮನವಿಯನ್ನು ಬೆಳ್ತಂಗಡಿ ಶಾಸಕರಾದ ಕೆ. ವಸಂತ ಬಂಗೇರ ಇವರಿಗೆ ತುಳುನಾಡ್ ಒಕ್ಕೂಟದ ಪದಾಧಿಕಾರಿಗಳು ಈಚೆಗೆ ನೀಡಿದರು.
ತುಳು ಎಂಬುದು ಸುಮಾರು 1 ಕೋಟಿ ಜನರು ಮಾತನಾಡುವ ದ್ರಾವಿಡ ಭಾಷಾ ಸಮೂಹದ ಸ್ವತಂತ್ರ ಲಿಪಿ ಹಾಗೂ ಸಮೃದ್ಧ ಸಾಹಿತ್ಯ ಇರುವ ಅತೀ ಪ್ರಾಚೀನ ಭಾಷೆ. ಬ್ರೀಟಿಷರ ಒಡೆದು ಆಳುವ ನೀತಿಯನ್ನು ನಾಚಿಸುವಂತೆ 1956 ನವೆಂಬರ್ 1ರಂದು ಪರಂಪರಾಗತ ತುಳುನಾಡು ಕೇರಳ ಮತ್ತು ಕರ್ನಾಟಕ ರಾಜ್ಯಗಳಿಗೆ ಹಂಚಿದರು. ಈ ಮೂಲಕ ತುಳುನಾಡಿನ ದುರ್ಗತಿಯು ಆರಂಭವಾಯಿತು. ತುಳು ಭಾಷೆಗೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಮಾನಗಳನ್ನು ನೀಡದೆ ವಂಚಿಸಲಾಯಿತು. ವಿನಾಶಕಾರಿ ಕೈಗಾರಿಕೆಗಳನ್ನು ತುಳುನಾಡಿನಲ್ಲಿ ಸ್ಥಾಪಿಸಿ ಇಲ್ಲಿಯ ನೆಲ, ಜಲ ಮತ್ತು ಜೀವ ವೈವಿಧ್ಯವನ್ನು ಕಲುಷಿತಗೊಳಿಸಲಾಯಿತು.
ಇದೀಗ ತುಳುನಾಡಿನ ಜೀವನದಿ ನೇತ್ರಾವತಿ ಮತ್ತು ಅದರ ಉಪನದಿಗಳನ್ನು ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆಯ ಮೂಲಕ ಬರಡುಗೊಳಿಸುವ ಮತ್ತು ಪಶ್ಚಿಮ ಘಟ್ಟವನ್ನು ನೆಲಸಮ ಮಾಡುವ ಮೂಖಾಂತರ ತುಳುನಾಡು ಬರಡು ಭೂಮಿಯಾಗುವ ದಿನಗಳು ದೂರವಿಲ್ಲ. ಈ ಎಲ್ಲಾ ವಿಚಾರಗಳನ್ನು ಅವಲೋಕಿಸಿದಾಗ ತುಳುನಾಡಿನಲ್ಲಿ ಹುಟ್ಟಿ ತುಳುನಾಡಿನಲ್ಲಿ ಹರಿದು ತುಳುನಾಡಿನಲ್ಲೇ ಕಡಲು ಸೇರುವ ನೇತ್ರಾವತಿ ಮತ್ತು ಅದರ ಉಪನದಿಗಳನ್ನು ಉಳಿಸಲು ಪ್ರತ್ಯೇಕ ತುಳುನಾಡು ರಾಜ್ಯವೇ ಅಂತಿಮ ಪರಿಹಾರ ಎಂದು ಮನವಿಯಲ್ಲಿ ಶಾಸಕರಲ್ಲಿ ತಿಳಿಯಪಡಿಸಲಾಯಿತು.
ನಿಯೋಗದಲ್ಲಿ ತುಳುನಾಡ್ ಒಕ್ಕೂಟದ ಅಧ್ಯಕ್ಷರಾದ ಶೈಲೇಶ್ ಆರ್.ಜೆ., ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ಕಾನೂನು ಸಲಹೆಗಾರ ನ್ಯಾಯವಾದಿ ಪ್ರಶಾಂತ್ ಎಂ, ನಗರ ಘಟಕದ ಅಧ್ಯಕ್ಷ ಜನಾರ್ಧನ ಬಂಗೇರ ಮೂಡಾಯಿಗುತ್ತು, ನಗರ ಘಟಕದ ಕಾರ್ಯದರ್ಶಿ ಗೋಪಾಲಕೃಷ್ಣ ಸಂಜಯನಗರ, ತಾಲೂಕು ಪದಾಧಿಕಾರಿ ಜಿ. ವಿ. ಹರೀಶ್, ವಸಂತ ನಡ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.