ಸುಳ್ಯ: ನಗರದಲ್ಲಿ ರಸ್ತೆ ದುರಸ್ಥಿ, ಚರಂಡಿ ಕಾಮಗಾರಿಯನ್ನು ಕೂಡಲೇ ಮುಗಿಸಬೇಕೆಂದು ಸದಸ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ತುರ್ತಾಗಿ ಆಗಬೇಕಾದ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಯನ್ನು ನಡೆಸಲು ಅಲ್ಪಾವಧಿ ಟೆಂಡರ್ನ್ನು ಕರೆದು ಕೂಡಲೇ ಕಾಮಗಾರಿ ನಡೆಸಲು ಮಂಗಳವಾರ ನಡೆದ ಸುಳ್ಯ ನಗರ ಪಂಚಾತ್ನ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಲ್ಪಾವಧಿ ಟೆಂಡರ್ನ ಪ್ರಕ್ರಿಯೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಂಡು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಟೆಂಡರ್ ನಡೆಸಿ ರಸ್ತೆ ದುರಸ್ಥಿ, ಚರಂಡಿ ದುರಸ್ಥಿ ಮತ್ತಿತರ ತುರ್ತು ಕಾಮಗಾರಿಗಳನ್ನು ನಡೆಸಲಾಗುವುದು. ಇನ್ನು ಒಂದು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ರಸ್ತೆ ದುರಸ್ಥಿ ನಡೆಸದೆ ಸಂಚಾರ ದುಸ್ಥರವಾಗಿದೆ. ಚರಂಡಿಗಳೆಲ್ಲ ಹೂಳು ತುಂಬಿ ನೀರು ಹರಿಯದ ಸ್ಥಿತಿ ಇದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಟೆಂಡರ್ ನಡೆದ ಕೆಲವು ಕಾಮಗಾರಿಗಳು ಪೂರ್ತಿಯಾಗಲಿಲ್ಲ. ಅದನ್ನು ಕೂಡಲೇ ಪೂರ್ತಿ ಮಾಡಿ ಎಂದು ಸದಸ್ಯರು ಆಗ್ರಹಿಸಿದರು.
ಸಾಂಕ್ರಾಮಿಕ ರೋಗಗಳು ಹರಡುವ ಕಾಲ ಇದಾಗಿದ್ದು, ನೀರಿನ ಶುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಫಾಗಿಂಗ್ ನಡೆಸದೆ ಇರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪಯಸ್ವಿನಿ ನದಿಯ ನೀರು ಕಲುಷಿತವಾಗುವುದನ್ನು ತಡೆಯಲು ಕ್ರಮಕ್ಕ ಒತ್ತಾಯಿಸಲಾಯಿತು. ಪಯಸ್ವಿನಿ ನದಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲು ನಿರ್ಧರಿಸಲಾಯಿತು.
ಎಲ್ಲಾ ವಾರ್ಡ್ಗಳಲ್ಲಿಯೂ ಬೀದಿ ದೀಪಗಳು ದುರಸ್ಥಿಯಲ್ಲಿದೆ. ಆದುದರಿಂದ ಎಲ್ಲಾ ವಾರ್ಡ್ಗಳಲ್ಲಿಯೂ ಹೊಸ ದೀಪಗಳ ಅಳವಡಿಕೆಗೆ ಸದಸ್ಯರು ಆಗ್ರಹಿಸಿದರು. ಕೂಡಲೇ ಹೊಸ ದೀಪಗಳ ಖರೀದಿ ನಡೆಸಲು ನಿರ್ಧರಿಸಲಾಯಿತು. 300ಕ್ಕೂ ಹೆಚ್ಚು ಬೀದಿ ದೀಪಗಳನ್ನು ಖರೀದಿಸಬೇಕೆಂದು ಸದಸ್ಯರು ಆಗ್ರಹಿಸಿದರು.
2014-15 ನೇ ಸಾಲಿನಲ್ಲಿ ಶೇ.22.75ರಲ್ಲಿ ಪರಿಶಿಷ್ಠ ಜಾತಿಗೆ ರೂ. 2.16 ಲಕ್ಷ ಮತ್ತು ಪರಿಶಿಷ್ಟ ಪಂಗಡದಲ್ಲಿ 88 ಸಾವಿರ ಸೇರಿಸಿ ಒಟ್ಟು 3.04 ಲಕ್ಷಕ್ಕೆ ಖರೀದಿಗೆ ಅನುಮೋದನೆ ನೀಡಲಾಯಿತು. 2014-15 ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ನಾಲ್ಕು ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದಿತ ಅಂದಾಜು ಮೊತ್ತಕ್ಕಿಂತ 2.5 ಲಕ್ಷ ಹೆಚ್ಚುವರಿ ಅನುದಾನವನ್ನು ನೀಡಲು ನಿರ್ಧರಿಸಲಾಯಿತು.
ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮತ್ತು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.