ಮಂಗಳೂರು : ಬಡತನ ನಿರ್ಮೂಲನೆ, ಸಮಾಜದಲ್ಲಿ ಸಮಾನತೆಗೆ ಶಿಕ್ಷಣ ಪ್ರಮುಖ ಅಸ್ತ್ರ. ಶಿಕ್ಷಣಕ್ಕೆ ಆದ್ಯತೆ ನೀಡುವ ಕೃಷ್ಣ ಜೆ. ಪಾಲೆಮಾರ್ ಅವರ ಗುಣ ಶ್ಲಾಘನೀಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.
ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆ ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾಭವನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಬಹುಮುಖ ಪ್ರತಿಭೆ. ಕೈಗಾರಿಕೋದ್ಯಮಿ, ಬಿಲ್ಡರ್, ಶಿಕ್ಷಣ ಕ್ಷೇತ್ರ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅರ್ಹರಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸಿದ್ದಾರೆ ಎಂದರು.













ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಸಾಮುದಾಯಿಕ ಒಳಗೊಳ್ಳುವಿಕೆ, ವಿಚಾರ ಸಂಕಿರಣಗಳು, ಆರ್ಥಿಕ ಸಂವಾದಗಳು, ಕೌಶಲ್ಯಾಭಿವೃದ್ಧಿ ಕುರಿತಾದ ಕಾರ್ಯಕ್ರಮಗಳು ನಡೆಯಲಿ. ಸಾಮಾಜಿಕ ಜಾಗೃತಿ, ಸೌಹಾರ್ದಾತೆಗೆ ಕೇಂದ್ರವಾಗಲಿ. ಇಲ್ಲಿ ವಿವಾಹಕ್ಕೊಳಗಾದವರಿಗೆ ಶ್ರೇಯಸ್ಸು ಉಂಟಾಗಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಕರ್ತವ್ಯನಿಷ್ಠೆ, ಉತ್ತಮ ನಡವಳಿಕೆ, ತಂದೆ ತಾಯಿ ಆಶೀರ್ವಾದ ಇದ್ದರೆ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಕೃಷ್ಣ ಪಾಲೆಮಾರ್ ಅವರ ಜೀವನವೇ ದೃಷ್ಟಾಂತವಾಗಿದೆ. ಒಂದು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ತನ್ನ ಕೈಂಕರ್ಯದ ಮೂಲಕ ಏಕಕಾಲದಲ್ಲಿ ನಾಲ್ಕು ಸಭಾಭವನಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದು, ಅದರಿಂದ ಬಂದ ಆದಾಯವನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಸಂಕಲ್ಪ ತೊಟ್ಟಿರುವುದು ಅಪೂರ್ವ ಸಂಗತಿ. ಈ ಮೂಲಕ ರಾಷ್ಟ್ರದ ಪ್ರಗತಿಗೂ ಅವರು ಕೊಡುಗೆ ನೀಡಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಇರುವ ಅವರ ವ್ಯಕ್ತಿತ್ವ ‘ಕೋಟಿಗೊಬ್ಬ ಪಾಲೆಮಾರ್’ ಎನ್ನುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ತುಳುನಾಡಿನ ಸೌಂದರ್ಯದ ಕಿರೀಟವಾಗಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ಮೂಡಿಬಂದಿದೆ. ಆರ್ಥಿಕ ವ್ಯವಸ್ಥೆ ಚಲನಶೀಲವಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಂದು ಉದ್ಘಾಟನೆಗೊಂಡಿರುವ ನಾಲ್ಕು ಸಭಾಭವನಗಳು ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ. ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ, ಬದ್ದತೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮೂಲಕ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಪಾಲೆಮಾರ್ ಅವರು ತೋರಿಸಿಕೊಟ್ಟಿದ್ದಾರೆ. ಪಾಲೆಮಾರ್ ಅವರ ವ್ಯಕ್ತಿತ್ವ ಯುವಜನತೆಗೆ ಮಾದರಿಯಾದುದು. ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬಿಡುಗಡೆ ಆಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲ್ಯಾಂಡ್ ಲಿಂಕ್ಸ್ ಗ್ರೂಪ್ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಜನರ ಪ್ರೀತಿ, ವಿಶ್ವಾಸದಿಂದ ಈ ಕಾರ್ಯಸಾಧನೆ ಆಗಿದೆ. ಪಾಲೆಮಾರ್ ಕನ್ವೆನ್ಶನ್ ಸೆಂಟರ್ ವಿಕಾಸ್ ಎಜುಕೇಶನ್ ಟ್ರಸ್ಟ್ನಡಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ವಿದ್ಯೆಗೆ ಪ್ರೋತ್ಸಾಹ ನೀಡಲಾಗುವುದು. ಬಡವರ್ಗದ ಜನರಿಗೆ ಉಪಯೋಗ ಆಗುವ ದೃಷ್ಟಿಯಿಂದ ನಾಲ್ಕು ಸಭಾಂಗಣಗಳನ್ನು ನಿರ್ಮಿಸಲಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅತಿಥಿಗಳಾಗಿದ್ದರು. ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದರು.
ಈ ವೇಳೆ ವಿವಿಧ ಸೇವಾ ಕಾರ್ಯ ನಡೆಸಲಾಯಿತು. ಶಕ್ತಿನಗರದ ಭಿನ್ನಸಾಮರ್ಥ್ಯದ ಮಕ್ಕಳ ಶಾಲೆ ಸಾನಿಧ್ಯದ ವಿದ್ಯಾರ್ಥಿಗಳಿಗೆ, ಸ್ನೇಹದೀಪ ಸಂಸ್ಥೆ ಸಂಸ್ಥಾಪಕಿ ತಬಸ್ಸುಮ್, ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್ಎಸ್ಎಲ್ಸಿಯಲ್ಲಿ ಅತ್ಯಽಕ ಅಂಕ ಗಳಿಸಿದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮೀ ಭಾರ್ಗವ್, ದಿವ್ಯಾಂಗ ಕಲಾವಿದ ಕೌಶಿಕ್ ಆಚಾರ್ಯ, ಸಮಾಜ ಸೇವಕಿ ಗೀತಾ ಶೆಟ್ಟಿ ಹಾಗೂ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ಟ್ರಸ್ಟಿ ಜೆ. ಕೊರಗಪ್ಪ ಅವರಿಗೆ ಗೌರವಾಭಿನಂದನೆ ಅರ್ಪಿಸಲಾಯಿತು. ಇಂಜಿನಿಯರ್ ಪ್ರವೀಣ್ಕುಮಾರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ನಿತಿನ್ ಸಾಲ್ಯಾನ್, ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್, ಮೋರ್ಗನ್ಸ್ ಗೇಟ್ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೆಮಾರ್ ಫಾರ್ಮ್ಸ್ ಸಭಾಭವನ, ಜೆಪ್ಪಿನಮೊಗರು ಕಡೆಕಾರ್ನ ನೇತ್ರಾವತಿ ಸಭಾಭವನವನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು.
ಉದ್ಘಾಟನೆಗೊಂಡ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ ಎಂದು ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 7411394759, 7483574759, 9148435759 ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



