ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಭ್ರಷ್ಟಾಚಾರ ವಿರೋಧಿ ಲೋಕಾಯುಕ್ತ ಸಂಸ್ಥೆಯನ್ನು ಹೊಂದಲು ದೆಹಲಿ ಸಜ್ಜಾಗಿದೆ. ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಾಧೀಶರಾದ ರೇವಾ ಖೇತ್ರಪಾಲ್ ಅವರನ್ನು ದೆಹಲಿ ಲೋಕಾಯುಕ್ತರಾಗಿ ನೇಮಕ ಮಾಡಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ದೆಹಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅವರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದ್ದ ೫ ಮಂದಿಯ ಹೆಸರಿನಲ್ಲಿ ಲೆ.ಜಂಗ್ ಅವರು ಖೇತ್ರಪಾಲ್ ಅವರನ್ನು ನೇಮಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ದೆಹಲಿ ಸರ್ಕಾರ ಸೂಚಿಸಿದ್ದ ಹೆಸರನ್ನು ತಿರಸ್ಕರಿಸಿದ್ದ ಮುಖ್ಯ ನ್ಯಾಯಾಧೀಶರು, ಇನ್ನಷ್ಟು ಹೆಸರುಗಳನ್ನು ಸೂಚಿಸುವಂತೆ ಮನವಿ ಮಾಡುವುದರೊಂದಿಗೆ ಇದರ ಜವಾಬ್ದಾರಿಯನ್ನು ಲೆ.ಜಂಗ್ ಹಾಗೂ ವಿರೋಧ ಪಕ್ಷ ನಾಯಕ ಗುಪ್ತಾಗೆ ಒಪ್ಪಿಸಿದ್ದರು.
ದೆಹಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಕಾಯ್ದೆ 1995ರ ಪ್ರಕಾರ ಓರ್ವ ವ್ಯಕ್ತಿ ಕಚೇರಿಗೆ ಪ್ರವೇಶಿಸುವ ದಿನಾಂಕದಿಂದ ಐದು ವರ್ಷಗಳ ಅವಧಿಗೆ ನೇಮಕಗೊಂಡಿರುತ್ತಾರೆ. ಒಂದು ಬಾರಿ ನೇಮಕಗೊಂಡವರು ಮರು ನೇಮಕಕ್ಕೆ ಅರ್ಹರಾಗಿರುವುದಿಲ್ಲ.
2013ರ ನವೆಂಬರ್ನಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಮನಮೋಹನ್ ಸಾರಿನ್ ತಮ್ಮ ಅವಧಿ ಪೂರ್ಣಗೊಂಡ ಬಳಿಕ ಕಚೇರಿ ತೊರೆದಿದ್ದು, ಅನಂತರ 2 ವರ್ಷಗಳ ಕಾಲ ಎಎಪಿ ಪಕ್ಷ ಭ್ರಷ್ಟಾಚಾರ ವಿರೋಧಿ ಲೋಕಾಯುಕ್ತರನ್ನು ನೇಮಿಸಿಲ್ಲ ಎಂಬ ವಿವಾದಕ್ಕೆ ಗುರಿಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.