
ಪ್ರಯಾಗದ ಮರಳುಗಳ ಮೇಲೆ ಪ್ರತಿ ಚಳಿಗಾಲದಲ್ಲಿ ಮತ್ತೊಮ್ಮೆ ಜಾಗೃತವಾಗುವ ಒಂದು ಅನಂತ ಕಥೆಯಿದೆ — ಮಾಘ ಮೇಳದ ಕಥೆ. ಸಂಗಮದ ಮಂಜು ತೆರವಾಗುತ್ತಿದ್ದಂತೆಯೇ, ಲಕ್ಷಾಂತರ, ಕೋಟ್ಯಂತರ, ಭಕ್ತರು ಬರಿಗಾಲಿನಲ್ಲಿ ಸಂಗಮಕ್ಕೆ ಇಳಿದು ಬರುತ್ತಾರೆ. ಗಂಗೆ-ಯಮುನೆ-ಸರಸ್ವತಿಯ ಮಿಲನದಲ್ಲಿ ಸ್ನಾನ ಮಾಡುವ ಆ ಘಳಿಗೆಯಲ್ಲಿ, ಸಮಯವೇ ನಿಂತುಹೋಗುವಂತೆ ತೋರುತ್ತದೆ. ಇದು ಕೇವಲ ಒಂದು ಮೇಳವಲ್ಲ, ಸನಾತನ ಧರ್ಮದ ಜೀವಂತ ಉಸಿರು, ಸಾವಿರಾರು ವರ್ಷಗಳಿಂದ ನಿರಂತರವಾಗಿ ಹರಿಯುತ್ತಿರುವ ಆತ್ಮದ ನದಿ.
ಆದರೆ ಈ ಪವಿತ್ರ ಭೂಮಿಯಲ್ಲಿ ಕಳೆದ ಎರಡು ಶತಮಾನಗಳಿಂದ ಇನ್ನೊಂದು ನದಿಯೂ ಹರಿಯುತ್ತಿದೆ. ಅದುವೇ ಶಾಂತವಾಗಿ, ಆಳವಾಗಿ ಹರಿಯುವ ಹೋರಾಟದ ನದಿ.
1840ರ ಸುಮಾರಿಗೆ ಅಮೆರಿಕನ್ ಪ್ರೆಸ್ಬಿಟೇರಿಯನ್ ಮಿಷನರಿ ಪಾದ್ರಿ ಜೋಸೆಫ್ ಓವನ್ ಪ್ರಯಾಗ್ರಾಜ್ಗೆ ಕಾಲಿಟ್ಟಾಗ, ಅವನ ಕಣ್ಣಿಗೆ ಮಾಘ ಮೇಳ ಕೇವಲ ಧಾರ್ಮಿಕ ಮೇಳವಾಗಿ ಕಾಣಲಿಲ್ಲ. ಅದು ಒಂದು “ಸುವರ್ಣ ಭೂಮಿ”ಯಾಗಿ ಸಾವಿರಾರು ಜನರು ಒಟ್ಟಿಗೆ ಸೇರುವ ಘಳಿಗೆಯಲ್ಲಿ ಮತಾಂತರಗೊಳ್ಳಬಹುದಾದ ಅಪಾರ ಸಾಧ್ಯತೆಯ ಭೂಮಿಯಾಗಿ ತೋರಿತು. ಆದರೆ ಅವನ ಊಹೆಗೂ ಮೀರಿದ, ಹೆಚ್ಚು ಪ್ರಾಚೀನವೂ, ಆಳವಾದದ್ದೂ ಆದ ನಾಗರಿಕತೆ ಸಂಗಮ ಅದಾಗಿತ್ತು.
1830ರ ದಶಕದಲ್ಲಿ ಲುಧಿಯಾನದಲ್ಲಿ ಪ್ರಾರಂಭವಾದ ಮಿಷನರಿ ಚಟುವಟಿಕೆಗಳು ಕ್ರಮೇಣ ಅಲಹಾಬಾದ್ಗೆ (ಇಂದಿನ ಪ್ರಯಾಗ್ರಾಜ್) ತಲುಪಿದವು. 1841ರ ಹೊತ್ತಿಗೆ ಓವನ್ ಹಿಂದಿ, ಸಂಸ್ಕೃತ, ಪರ್ಶಿಯನ್ ಭಾಷೆಗಳನ್ನು ಕಲಿತು, ಕ್ರಿಶ್ಚಿಯನ್ ಸಾಹಿತ್ಯ — ಕರಪತ್ರಗಳು, ಬೈಬಲ್ ಅನುವಾದಗಳನ್ನು ಮೇಳದ ಮೈದಾನದಲ್ಲಿ ಹರಡಲು ಆರಂಭಿಸಿದ. 1847ರಲ್ಲಿ ಚರ್ಚ್ ಮಿಷನರಿ ಮುದ್ರಣಾಲಯ ಸ್ಥಾಪನೆಯಾಯಿತು. ಭೂಮಿ ಪಡೆದು ಶಿಬಿರಗಳನ್ನು ನಿರ್ಮಿಸಿ, ಸ್ಥಳೀಯರನ್ನು “ಪಾದ್ರಿ”ಗಳಾಗಿ ಪರಿವರ್ತಿಸಿ, ಹಳ್ಳಿಗಳಿಗೆ ಕಳುಹಿಸುವ ಹೊಸ ತಂತ್ರವೂ ಹುಟ್ಟಿತು.
ಆದರೆ ಈ ಪ್ರಯತ್ನಗಳ ನಡುವೆಯೂ, ಸಂಗಮದ ತೀರದಲ್ಲಿ ಶಂಖಧ್ವನಿ, ಮಂತ್ರೋಚ್ಚಾರ, “ಹರ ಹರ ಗಂಗೆ” ಘೋಷಣೆಗಳು ಎಂದಿಗೂ ಕಡಿಮೆಯಾಗಲಿಲ್ಲ. ಅಖಾರಗಳ ಮೆರವಣಿಗೆಗಳು, ಸಾಧುಗಳ ಶಿಬಿರಗಳು, ಯಾತ್ರಿಕರ ಅವಿರತ ಸ್ನಾನ — ಎಲ್ಲವೂ ಅಚಲವಾಗಿ ಮುಂದುವರೆಯಿತು.
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೇ ಈ ಹೋರಾಟ ಭುಗಿಲೆದ್ದಿತ್ತು. ಮಿಷನರಿಗಳನ್ನು ವಸಾಹತುಶಾಹಿ ದಬ್ಬಾಳಿಕೆಯ ಭಾಗವೆಂದು ಕಂಡ ಕ್ರಾಂತಿಕಾರಿಗಳು ಅಲಹಾಬಾದ್ನ ಮಿಷನ್ ಮುದ್ರಣಾಲಯವನ್ನು ಸುಟ್ಟುಹಾಕಿದರು. ಮಿಷನರಿಗಳು ಭಯಭೀತರಾಗಿ ಕೋಟೆಯಲ್ಲಿ ಆಶ್ರಯ ಪಡೆದು, ನಂತರ ಕಲ್ಕತ್ತಾಗಿ ಪಲಾಯನ ಮಾಡಿದರು. ಆ ಆರು-ಏಳು ತಿಂಗಳುಗಳ ಕಾಲ ಮಿಷನರಿ ಚಟುವಟಿಕೆಗಳು ಸ್ಥಗಿತಗೊಂಡಿತು, ಸಾಧುಗಳ ಶಿಬಿರಗಳು, ಯಾತ್ರಿಕರ ಸ್ನಾನ, ಮೇಳದ ಭಕ್ತಿಯ ಜೀವಂತತೆ ಯಾವುದೇ ಆತಂಕವಿಲ್ಲದೆ ಮುಂದುವರೆಯಿತು. ನಾಗರಿಕತೆ ಮತ್ತೊಮ್ಮೆ ತನ್ನ ಬಲವನ್ನು ತೋರಿಸಿತು.
ಕಾಲ ಬದಲಾಯಿತು. ರೂಪಗಳು ಬದಲಾದವು. ಆದರೆ ಪ್ರವೃತ್ತಿಗಳು ಹಾಗೆಯೇ ಉಳಿದವು. ಇಪ್ಪತ್ತನೇ-ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಈ ಶಾಂತ ಹೋರಾಟ ಮುಂದುವರೆಯಿತು. 2009ರಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಗಂಗೆಯನ್ನು ಅವಮಾನಿಸುವ ಕರಪತ್ರಗಳನ್ನು ವಿತರಿಸುತ್ತಿದ್ದ ನಾಲ್ಕು ಕ್ರಿಶ್ಚಿಯನ್ ಮಿಷನರಿಗಳನ್ನು ಹಿಡಿದರು. 2023ರಲ್ಲಿ ಮೂವರು ಇಸ್ಲಾಮಿಕ್ ಧರ್ಮಪ್ರಚಾರಕರು — ಮೌಲಾನಾ ಮಹಮೂದ್ ಹಸನ್ ಘಾಜಿ, ಮೊಹಮ್ಮದ್ ಮೋನಿಶ್ (ಅಲಿಯಾಸ್ ಆಶಿಶ್ ಗುಪ್ತಾ), ಸಮೀರ್ (ಅಲಿಯಾಸ್ ನರೇಶ್ ಸರೋಜ್) — ವಿದೇಶಿ ಅನುದಾನಿತ ಪುಸ್ತಕಗಳನ್ನು ಹಂಚುತ್ತಿದ್ದಕ್ಕಾಗಿ ಬಂಧಿತರಾದರು.
ಇಂದಿಗೂ ಸಾವಿರಾರು ಸಂಖ್ಯೆಯಲ್ಲಿ ಮಿಷನರಿ ತಂಡಗಳು ಸಕ್ರಿಯವಾಗಿವೆ ಎಂದು ವರದಿಗಳಿವೆ. ಆದರೆ ಪ್ರತಿ ವರ್ಷ ಮಾಘ ಮೇಳ ಪ್ರಾರಂಭವಾಗುತ್ತಿದ್ದಂತೆ, ಸಂಗಮದ ತೀರ ಕೇಸರಿ ಧ್ವಜಗಳಿಂದ ತುಂಬುತ್ತದೆ. ಸಂತರ ಶಿಬಿರಗಳು ಹೆಚ್ಚುತ್ತವೆ. ಭಕ್ತರ ಸಂಖ್ಯೆ ಕಡಿಮೆಯಾಗದೆ ಹೆಚ್ಚಾಗುತ್ತದೆ.
1840ರಿಂದ ಇಂದಿನವರೆಗೆ — ಮುದ್ರಣಾಲಯಗಳು, ವಿದೇಶಿ ನಿಧಿ, ಮತಾಂತರಗೊಂಡ ಪಾದ್ರಿಗಳು, ಶಿಬಿರಗಳು, ಸರ್ಕಾರಿ ಬೆಂಬಲ ಎಲ್ಲವನ್ನೂ ಮಾಘ ಮೇಳದಲ್ಲಿ ಮತಾಂತರ ನಡೆಸುವ ಸಲುವಾಗಿ ಪ್ರಯತ್ನಿಸಲಾಗಿದೆ. ಆದರೆ ಮಾಘ ಮೇಳ ನಿಂತಿಲ್ಲ. ಕುಂಭ ಮೇಳ ನಿಂತಿಲ್ಲ. ಸಂಗಮ ಶುದ್ಧವಾಗಿ ಉಳಿದಿದೆ. ಸನಾತನ ಧರ್ಮದ ಹರಿವು ಶತಮಾನಗಳಿಂದಲೂ ಅಡೆತಡೆಯಿಲ್ಲದೆ ಸಾಗುತ್ತಿದೆ.ಇಲ್ಲಿ ಎರಡು ಶಕ್ತಿಗಳ ಸಂಗಮವಿದೆ: ಒಂದು ಕೇವಲ ಎರಡು ನೂರು ವರ್ಷಗಳ ಹಳೆಯದು ಬಾಹ್ಯದಿಂದ ಬಂದದ್ದು. ಮತ್ತೊಂದು ಸಾವಿರಾರು ವರ್ಷಗಳ ಆಳದ್ದು ಭಾರತದ ಆತ್ಮದಿಂದ ಹುಟ್ಟಿದ್ದು. ಪ್ರತಿ ಚಳಿಗಾಲದಲ್ಲಿ, ಯಾತ್ರಿಕರು ಸಂಗಮಕ್ಕೆ ಇಳಿಯುವಾಗ, ಈ ಶಕ್ತಿಯು ನಿಜವಾಗಿಯೂ ಅಳಿಯದೆ ಉಳಿದಿದ, ಮತ್ತು ಎಂದಿಗೂ ಅಳಿಯಲಾರದ್ದಾಗಿದೆ ಎಂದು ಜಗತ್ತು ಮತ್ತೊಮ್ಮೆ ನೋಡುತ್ತದೆ. .ಇದು ಕೇವಲ ಮೇಳವಲ್ಲ. ಇದು ಸನಾತನದ ಅಮರತ್ವದ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



