
ಒಂದು ಕಾಲದಲ್ಲಿ ಅಮೆರಿಕದ ಸೆನೆಟ್ ಸಭಾಂಗಣದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಪಠಣ ಮಾಡಿದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ ಕಣ್ಣು ಕೆಂಪಾಗುತ್ತಿತ್ತು, ಹಿಂದೂ ಪ್ರಾರ್ಥನೆಗಳನ್ನು ಶಾಪ ಎಂದೇ ಅವರು ಕರೆಯುತ್ತಿದ್ದರು, ಯೇಸುವಿಗೆ ಮಾಡಿದ ಅವಮಾನ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ, ಅದೇ ಅಮೆರಿಕಾದಲ್ಲಿ ಪ್ರತಿನಿಧಿಗಳು ಹಿಂದೂ ಧರ್ಮಗ್ರಂಥವಾದ ಶ್ರೀಮದ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಸ್ವೀಕರಿಸುತ್ತಿದ್ದಾರೆ.
2007 ರಲ್ಲಿ ಸೆನೆಟ್ನಲ್ಲಿ ಹಿಂದೂ ಪ್ರಾರ್ಥನೆಗಳು ನಡೆದಾಗ ಕ್ರಿಶ್ಚಿಯನ್ ಮಿಷನರಿಗಳು ಸೃಷ್ಟಿಸಿದ್ದ ಗದ್ದಲ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಜುಲೈ 12, 2007 ರಂದು ನೆವಾಡಾ ಡೆಮಾಕ್ರಟಿಕ್ ಸೆನೆಟ್ನಲ್ಲಿ ಬಹುಮತ ಪಡೆದಿದ್ದ ಹ್ಯಾರಿ ರೀಡ್ ಅವರು ಒಕ್ಲಹೋಮ ರಾಜ್ಯ ಸೆನೆಟ್ನಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸಲು ಹಿಂದೂ ಅರ್ಚಕ ರಾಜನ್ ಜೆಡ್ ಅವರನ್ನು ಆಹ್ವಾನಿಸಿದಾಗ ದೊಟ್ಟ ಮಟ್ಟದಲ್ಲೇ ಪ್ರತಿಭಟನೆಗಳು ಭುಗಿಲೆದ್ದಿದ್ದವಿ. ಅಮೆರಿಕದಲ್ಲಿ ಅದೇ ಮೊದಲ ಬಾರಿಗೆ ಅರ್ಚಕರೊಬ್ಬರು ಸೆನೆಟ್ನಲ್ಲಿ ಹಿಂದೂ ಪ್ರಾರ್ಥನೆಯ ನೇತೃತ್ವ ವಹಿಸಲು ಅಧಿಕೃತವಾಗಿ ಆಹ್ವಾನಿಸಲ್ಪಟ್ಟಿದ್ದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗಿತ್ತು. ಹಣೆಯ ಮೇಲೆ ತಿಲಕ ಮತ್ತು ಕೇಸರಿ ನಿಲುವಂಗಿಯನ್ನು ಧರಿಸಿದ ರಾಜನ್ ಜೆಡ್ ಗಾಯತ್ರಿ ಮಂತ್ರವನ್ನು ಪಠಿಸಲು ಪ್ರಾರಂಭಿಸುತ್ತಿದ್ದಂತೆ, ಸೆನೆಟ್ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ “ಯೇಸು ಕ್ರಿಸ್ತನನ್ನು ಹೊರತುಪಡಿಸಿ ಬೇರೆ ದೇವರು ಇಲ್ಲ” ಎಂದು ಕೂಗರಾಂಭಿಸಿದರು.
ಪ್ರತಿಭಟನಾಕಾರರಲ್ಲಿ ಡೇವಿಡ್ ಮುರ್ರೆ, ಅವನ ಪತ್ನಿ ಕ್ರಿಸ್ಟನ್ ಮತ್ತು ಲಾರಾ ಬೆಬೌಟ್ ಸೇರಿದ್ದರು. ಮೂವರು ಸೆನೆಟ್ನಲ್ಲಿ ಮೊಳಗಿದ ಮಂತ್ರಗಳನ್ನು ಶಾಪ ಎಂದು ಕರೆದರು ಮತ್ತು ಕೈಯಲ್ಲಿ ಬೈಬಲ್ಗಳನ್ನು ಹಿಡಿದು ಘೋಷಣೆಗಳನ್ನು ಕೂಗಲಾರಂಭಿಸಿದರು. ಆ ಎರಡು ನಿಮಿಷಗಳ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು ಮತ್ತು ಹಲವಾರು ಮಾಧ್ಯಮಗಳು ಇದನ್ನು ನೇರ ಪ್ರಸಾರ ಕೂಡ ಮಾಡಿದ್ದವು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು ಕೂಡ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಗೆ ಹೆಸರುವಾಸಿಯಾದ ಅಮೆರಿಕಕ್ಕೆ ಈ ಘಟನೆ ಒಂದು ಕಪ್ಪು ಚುಕ್ಕೆ ಆಗಿತ್ತು. ಪ್ರತಿಭಟನಾಕಾರರ ಬಂಧನದ ನಂತರವೂ ಕೂಡ ಹಿಂದೂ ಪ್ರಾರ್ಥನೆಗಳ ವಿರುದ್ಧ ಪ್ರತಿಭಟನೆಗಳು ಮುಂದುವರೆದವು.
ಜೂನ್ 2007 ರಲ್ಲಿ ಯುನೈಟೆಡ್ ಸ್ಟೇಟ್ಸ್ನಾದ್ಯಂತ ಸಂಘಟಿತ ಪ್ರತಿಭಟನೆಗಳು ಭುಗಿಲೆದ್ದವು. ಹಿಂದೂ ಪ್ರಾರ್ಥನೆ ಅಮೆರಿಕದ ಕ್ರಿಶ್ಚಿಯನ್ ಪರಂಪರೆಯ ಮೇಲಿನ ದಾಳಿ ಎಂದು ಮಿಷನರಿಗಳು ಬಣ್ಣಿಸಿದರು. ಅಮೇರಿಕನ್ ಫ್ಯಾಮಿಲಿ ಅಸೋಸಿಯೇಷನ್ನೊಂದಿಗೆ ಸಂಬಂಧ ಹೊಂದಿರುವ ಸುಮಾರು 2.2 ಮಿಲಿಯನ್ ಜನರು ಸೆನೆಟರ್ಗಳಿಗೆ ಇಮೇಲ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲೇ ಅಭಿಯಾನವನ್ನೇ ಪ್ರಾರಂಭಿಸಿದರು, ಹಿಂದೂ ಪ್ರಾರ್ಥನೆಯನ್ನು ಅಸಹ್ಯಕರವೆಂದು ಜರೆದರು.
ಸಂಘಟನೆಯ ಅಧ್ಯಕ್ಷ ಟಿಮ್ ವೈಲ್ಡ್ಮನ್ ಅವರು ರೀಡ್ ಅವರ ಕಚೇರಿಯ ಮೇಲೆ ಒತ್ತಡ ಹಾಕಲಾರಂಭಿಸಿದರು. ಸೆನೆಟ್ನಲ್ಲಿ ಹಿಂದೂ ಪ್ರಾರ್ಥನೆಗಳು ಕ್ರಿಶ್ಚಿಯನ್ನರ ನೈತಿಕ ಅವನತಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರು. ಇದಲ್ಲದೆ, ಸಂಸ್ಥೆಯ ಸದಸ್ಯರು ಸೆನೆಟರ್ಗಳಿಗೆ ಪ್ರತಿಭಟಿಸಲು 143,000 ಅರ್ಜಿಗಳನ್ನೂ ಕಳುಹಿಸಿ ಕೊಟ್ಟರು. ಅಮೇರಿಕನ್ ಫ್ಯಾಮಿಲಿ ಅಸೋಸಿಯೇಷನ್ ಜೊತೆಗೆ, ಅಮೆರಿಕದ ಅನೇಕ ಪ್ರಮುಖ ವ್ಯಕ್ತಿಗಳು ಸೆನೆಟ್ನಲ್ಲಿ ಹಿಂದೂ ಪ್ರಾರ್ಥನೆಯನ್ನು ವಿರೋಧಿಸಿದವರಲ್ಲಿ ಸೇರಿದ್ದಾರೆ, ಅವರಲ್ಲಿ ಮಾಜಿ ಯುಎಸ್ ನೌಕಾಪಡೆಯ ಚಾಪ್ಲಿನ್ ಗಾರ್ಡನ್ ಕ್ಲಿಂಗೆನ್ಸ್ಮಿಡ್ಟ್ ಕೂಡ ಒಬ್ಬರು. ಅವರು ಜುಲೈ 10, 2007 ರಂದು ಹಿಂದೂ ಪ್ರಾರ್ಥನೆಯನ್ನು ಪ್ರತಿಭಟಿಸಲು ಸೆನೆಟ್ ಕಚೇರಿಯನ್ನು ಪ್ರವೇಶಿಸಿದ್ದರು, ಇದು ಅವರ ಕೋರ್ಟ್-ಮಾರ್ಷಲ್ಗೂ ಕಾರಣವಾಗಿತ್ತು.
ಆದರೆ ಈಗ ಸಂಪೂರ್ಣ ಚಿತ್ರಣವೇ ಬದಲಾಗಿದೆ, ಎಲ್ಲರನ್ನೂ ಒಂದುಗೂಡಿಸುವ ಮತ್ತು ವಿಶ್ವ ಶಾಂತಿಯನ್ನು ಬಯಸುವ ಏಕೈಕ ಧರ್ಮ ಸನಾತನ ಧರ್ಮ ಎಂಬುದು ಅಮೆರಿಕನ್ನರಿಗೆ ಅರ್ಥವಾಗಿದೆ. ಅಮೆರಿಕ ಸಂಸತ್ತಿನಲ್ಲಿ ಭಗವದ್ಗೀತೆಯ ಶ್ಲೋಕಗಳ ಮೂಲಕ ಪ್ರಮಾಣವಚನ ಸ್ವೀಕರಿಸುವುದು ಈಗ ಸಮಾನ್ಯವಾಗಿದೆ.
ಜನವರಿ 2013 ರಲ್ಲಿ, ಮೊದಲ ಬಾರಿಗೆ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ 32 ನೇ ವಯಸ್ಸಿನಲ್ಲಿ ಅಮೆರಿಕ ಸಂಸತ್ತಿನ ಸದಸ್ಯರಾದರು. ಅವರು ಗೀತೆಯ ಮೇಲೆ ಕೈಯಿಟ್ಟು ಸಂಸತ್ತಿನಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ತುಳಸಿ ತಮ್ಮ ಈ ಪ್ರಮಾಣ ವಚನವನ್ನು ಗೀತೆಯ ನಿಸ್ವಾರ್ಥ ಕ್ರಿಯೆಯೊಂದಿಗೆ ಜೋಡಿಸಿದರು.
ತುಳಸಿ ಗಬ್ಬಾರ್ಡ್ ನಂತರ ಅಮೆರಿಕದಲ್ಲಿ ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸುವ ಸಂಪ್ರದಾಯ ಪ್ರಾರಂಭವಾಯಿತು. ಅವರ ನಂತರ, ಅಮೆರಿಕ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ (51) 2017 ರಲ್ಲಿ ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಸ್ವೀಕರಿಸಿದರು ಮತ್ತು 2019 ರಲ್ಲಿ ರಾಜಾ ಕೃಷ್ಣಮೂರ್ತಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ, 2025 ರ ಯುಎಸ್ ಫೆಡರಲ್ ಚುನಾವಣೆಯಲ್ಲಿ, ಸುಹಾಸ್ ಸುಬ್ರಮಣಿಯಂ (42) ಅಮೆರಿಕದ ಪೂರ್ವ ಕರಾವಳಿಯಿಂದ ಆಯ್ಕೆಯಾದ ಮೊದಲ ಭಾರತೀಯ-ಅಮೇರಿಕನ್ ಕಾಂಗ್ರೆಸ್ ಸದಸ್ಯರಾದರು. ಅವರು ಜನವರಿ 7, 2025 ರಂದು ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.
2007 ರಲ್ಲಿ ಪ್ರತಿಭಟನೆಗಳಿಗೆ ಗುರಿಯಾಗಿದ್ದ ಪಾದ್ರಿ ಜೆಡ್, ಜುಲೈ 2024 ರಲ್ಲಿ ಸೆನೆಟ್ನಲ್ಲಿ ಎರಡನೇ ಬಾರಿಗೆ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿಯವರೆಗೆ, 20 ಪ್ರಮುಖ ವಿದೇಶಿ ನಾಯಕರು ಮತ್ತು ಆಡಳಿತ ಅಧಿಕಾರಿಗಳು ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಅಮೆರಿಕ, ಯುಕೆ, ಆಸ್ಟ್ರೇಲಿಯಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ನಾಯಕರು ಸೇರಿದ್ದಾರೆ. ಅಮೆರಿಕದಲ್ಲಿ, ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್, ಪೂರ್ವ ಕರಾವಳಿಯ ಯುಎಸ್ ಪ್ರತಿನಿಧಿ ಸುಹಾಸ್ ಸುಬ್ರಮಣಿಯಂ, ಯುಎಸ್ ರಾಷ್ಟ್ರೀಯ ಗುಪ್ತಚರ (ಡಿಎನ್ಐ) ನಿರ್ದೇಶಕಿ ತುಳಸಿ ಗಬ್ಬಾರ್ಡ್, ಮೇರಿಲ್ಯಾಂಡ್ ಲೆಫ್ಟಿನೆಂಟ್ ಗವರ್ನರ್ ಅರುಣಾ ಮಿಲ್ಲರ್, ನೆದರ್ಲ್ಯಾಂಡ್ಸ್ನ ಯುಎಸ್ ರಾಯಭಾರಿ ಶೆಫಾಲಿ ರಜ್ದಾನ್ ದುಗ್ಗಲ್, ಸೆಂಟರ್ಸ್ ಫಾರ್ ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಆಡಳಿತಾಧಿಕಾರಿ ಸೀಮಾ ವರ್ಮಾ, ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಮತ್ತು ನ್ಯೂಜೆರ್ಸಿ ಟೌನ್ಶಿಪ್ ಕೌನ್ಸಿಲರ್ ಡಾ. ಸುಧಾಂಶು ಪ್ರಸಾದ್ ಸೇರಿದ್ದಾರೆ.
ಬ್ರಿಟನ್ನಲ್ಲಿ, ಮಾಜಿ ಪ್ರಧಾನಿ ಮತ್ತು ಹಣಕಾಸು ಸಚಿವ ರಿಷಿ ಸುನಕ್, ಮಾಜಿ ಕ್ಯಾಬಿನೆಟ್ ಸಚಿವ ಅಲೋಕ್ ಶರ್ಮಾ, ಲೇಬರ್ ಪಕ್ಷದ ಸಂಸದ ಕನಿಷ್ಕ ನಾರಾಯಣ್ ಮತ್ತು ಲೀಸೆಸ್ಟರ್ ಪೂರ್ವದ ಕನ್ಸರ್ವೇಟಿವ್ ಪಕ್ಷದ ಸಂಸದ ಶಿವಾನಿ ರಾಜಾ ಎಲ್ಲರೂ ಗೀತೆಯ ಮೇಲೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಅದೇ ರೀತಿ, ಆಸ್ಟ್ರೇಲಿಯಾದಲ್ಲಿ, ಸಂಸತ್ ಸದಸ್ಯರಾಗಿ ವರುಣ್ ಘೋಷ್, ಆಸ್ಟ್ರೇಲಿಯಾದ ರಾಜ್ಯದ ಖಜಾಂಚಿಯಾಗಿ ಡೇನಿಯಲ್ ಮುಖಿ ಮತ್ತು ಶಾಸಕಾಂಗ ಸಭೆಯ ಸದಸ್ಯರಾಗಿ ದೀಪಕ್ ರಾಜ್ ಗುಪ್ತಾ ಕೂಡ ಗೀತೆಯ ಮೇಲೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಈ ದೇಶಗಳ ಜೊತೆಗೆ, ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನ ಮಂತ್ರಿಯಾಗಿ ಕಮಲಾ ಪ್ರಸಾದ್, ಸಂಸತ್ ಸದಸ್ಯರಾಗಿ ಡಾ. ರುಡಾಲ್ ಮೂನಿಲಾಲ್ ಮತ್ತು ಡಾ. ರಿಷದ್ ಸೀಚರಣ್, ಅಟಾರ್ನಿ ಜನರಲ್ ಆನಂದ್ ರಾಮೋಲ್ಗನ್ ಅವರು ಗೀತೆಯನ್ನು ಕೈಯಲ್ಲಿ ಹಿಡಿದು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



