ಪಾಲ್ತಾಡಿ : ಸಾಮಾಜಿಕ ವ್ಯವಸ್ಥೆ ಸುಗಮವಾಗಲು ಜಾತಿ ವ್ಯವಸ್ಥೆ ರೂಪಿಸಲಾಯಿತು. ಆದರೆ ಇಂದು ಜಾತಿಯಿಂದಾಗಿ ಅಂತರ ಸೃಷ್ಟಿಯಾಗಿದೆ. ಅಂತರ ದೂರ ಮಾಡಿ ಸಾಮರಸ್ಯ ಮೂಡಿಸಬೇಕಾದ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲೆ ವತಿಯಿಂದ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಬೌದ್ಧಿಕ್ ನೀಡಿದರು.
ವ್ಯವಸ್ಥೆಯ ಏಳಿಗೆ ಬಯಸಬೇಕಾದ ಜಾತಿಗಳು ತಮ್ಮೊಳಗೆ ಅಂತರ ಸೃಷ್ಟಿಸಿಕೊಂಡಿರುವುದು ವಿಪರ್ಯಾಸ. ಇದನ್ನು ದೂರ ಮಾಡಿ, ಮತ್ತೆ ಜಾತಿಗಳ ನಡುವೆ ಸಾಮರಸ್ಯ ಮೂಡಿಸಬೇಕಾದ ಕೆಲಸ ನಡೆಯಬೇಕಿದೆ. ಜಾತಿ ವ್ಯವಸ್ಥೆ ತೊಡೆದು ಹಾಕಿದಾಗಲಷ್ಟೇ ರಾಷ್ಟ್ರ ನಿರ್ಮಾಣದ ಕಾರ್ಯ ಸುಗಮವಾಗಲು ಸಾಧ್ಯ ಎಂದರು.
ಹಿಂದು ಎಂದು ಕರೆಸಿಕೊಳ್ಳಲು ಮಹಾತ್ಮರು ಕೂಡ ನಾಚಿಕೆ ಪಡುತ್ತಿದ್ದರು. ಇಂತಹ ದೇಶಭಕ್ತಿಯ ಕೊರತೆಯಿಂದಾಗಿ ನಾವು ಗುಲಾಮ ಸ್ಥಿತಿ ಅನುಭವಿಸಿದೆವು. ಓಲೈಕೆಗಾಗಿ ಭವ್ಯ ಭಾರತದ ಸಂಸ್ಕೃತಿ ಮೂಲೆಗುಂಪಾಯಿತು. ಆದರೆ ಇಂದು ಕಾಲ ಬದಲಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ಹಿಂದುತ್ವದ ಕಡೆ ನೋಡುತ್ತಿದೆ. ವಿಶ್ವವೇ ಭಾರತದ ಕಡೆ ಆಕರ್ಷಿತವಾಗುತ್ತದೆ. ಸಂಸ್ಕಾರ, ಮೌಲ್ಯಗಳ ಬೋಧನೆಗೆ ಯುವಜನಾಂಗವೂ ಸಂಘದೆಡೆಗೆ ಆಗಮಿಸುತ್ತಿದೆ. ಯೋಗ ಮತ್ತು ಆಯುರ್ವೇದಕ್ಕೆ ವಿಶ್ವವೇ ತಲೆಬಾಗಿದೆ ಎಂದರು.
ಎಲ್ಲಾ ಮೊದಲುಗಳಲ್ಲೂ ಭಾರತದ ಕೊಡುಗೆಯಿದೆ. ವಿಶ್ವದ ದೊಡ್ಡಣ್ಣ ಎಂದು ಗುರುತಿಸಿಕೊಂಡ ಹಲವಾರು ದೇಶಗಳು ತೆರೆ ಮರೆಗೆ ಸಂದಿವೆ. ಆದರೆ ಭಾರತ ಇದೆಲ್ಲದಕ್ಕಿಂತ ಹೊರತಾಗಿ ಎಂದೆಂದೂ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಹಿಂದು ಸಾಂಸ್ಕೃತಿಕ ಮೌಲ್ಯ. ಜಾತಿಗೆ ಜಗದ್ಗುರುಗಳಾಗಿದ್ದ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಕುಳ್ಳಿರಿಸಿ ಹಿಂದುತ್ವವನ್ನು ಬಲಿಷ್ಠಗೊಳಿಸುವ ಕೆಲಸವನ್ನು ಸಂಘ ಮಾಡುತ್ತಿದೆ.
ವಿಹಿಂಪ, ಮಜ್ದೂರ್, ಎಬಿವಿಪಿ ಮೊದಲಾದ ಸಂಘದ ಅನೇಕ ವಿಭಾಗಗಳ ಸ್ವಯಂಸೇವಕರು ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸಂಘದ ಸಾಂಸ್ಕೃತಿಕ ವಿಚಾರಧಾರೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಬುದ್ಧಿಜೀವಿಗಳು ಪ್ರಚಾರ ಪಡೆಯಲು ಹಿಂದು ನಂಬಿಕೆಗಳನ್ನು ಘಾಸಿಗೊಳಿಸಿ, ಕೋಮು ಭಾವನೆಗೆ ಕೆರಳಿಸುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾರ್ದಿಕ್ ಹರ್ಬಲ್ಸ್ ಮಾಲೀಕ ಮುರಳೀಧರ ಎಂ, ಧನಾತ್ಮಕ ಚಿಂತನೆಯೇ ಸಂಘದ ಕಾರ್ಯಕರ್ತರಿಗೆ ಪ್ರೇರಣೆ. ಕೈಗೊಂಡ ಕಾರ್ಯಕ್ಕೆ ಚ್ಯುತಿ ಬಾರದಂತೆ ಗುರಿ ತಲುಪಿಸುವುದು ಸಂಘದ ಧ್ಯೇಯ. ಭಾರತಕ್ಕೆ ಸಂಘ ಗುರು ಸ್ಥಾನದಲ್ಲಿದೆ. ನಮಗೆ ಸಮರ್ಥ ನಾಯಕರಿದ್ದಾರೆ. ಸಂಘದ ಸಾಮಾನ್ಯ ಸ್ವಯಂಸೇವಕನಿಗೆ ಇಂದು ವಿಶ್ವವೇ ತಲೆಬಾಗುತ್ತಿದೆ. ನಾವು ಪ್ರಾಣಾರ್ಪಣೆ ಮಾಡುವ ಮೊದಲು, ಒಂದೊಳ್ಳೆ ಕಾರ್ಯವನ್ನು ಈ ನೆಲಕ್ಕಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಮುಖ್ಯಗುರು, ಶಿಬಿರಾಧಿಕಾರಿ ಗಿರಿಶಂಕರ್ ಸುಲಾಯ ಉಪಸ್ಥಿತರಿದ್ದರು. ಪುತ್ತೂರು ಜಿಲ್ಲಾ ಕಾರ್ಯವಾಹ ಸುಭಾಶ್ಚಂದ್ರ ಕಳೆಂಜ ವರದಿ ಮಂಡಿಸಿದರು. ಪುತ್ತೂರು ತಾಲೂಕು ಕಾರ್ಯವಾಹ ನವೀನ್ ಪ್ರಸಾದ್ ಕೈಕಾರ ವಂದಿಸಿದರು. ಬೆಳ್ತಂಗಡಿ ತಾಲೂಕು ಕಾರ್ಯವಾಹ ಲಕ್ಷ್ಮಣದಾಸ್ ಕಾರ್ಯಕ್ರಮ ನಿರೂಪಿಸಿದರು. ಹಿತೇಶ್, ಸ್ವಸ್ತಿಕ್ ವೈಯಕ್ತಿಕ ಗೀತೆ ಹಾಡಿದರು.
ಶಾರೀರಿಕ ಪ್ರದರ್ಶನ : ಕಡಬ, ಪುತ್ತೂರು, ಬೆಳ್ತಂಗಡಿ, ವೇಣೂರು, ಉಜಿರೆಗಳನ್ನೊಳಗೊಂಡ ಪುತ್ತೂರು ಜಿಲ್ಲೆಯ ನರಿಮೊಗರಿನಲ್ಲಿ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ನಡೆಯಿತು. 381 ಗ್ರಾಮಗಳು 452 ಮಂದಿ ಸಂಘದ ಪ್ರಾಥಮಿಕ ಶಿಕ್ಷಣ ಪಡೆದರು. ಪುರುಷರಕಟ್ಟೆ ಹಾಗೂ ನರಿಮೊಗರಿನಿಂದ ಏಕಕಾಲದಲ್ಲಿ ಆರಂಭಗೊಂಡ ಮೆರವಣಿಗೆ, ಸಾಂದೀಪನಿ ವಿದ್ಯಾಸಂಸ್ಥೆ ಆವರಣದಲ್ಲಿ ಸಂಗಮಗೊಂಡಿತು. ಸಮಾರೋಪದಲ್ಲಿ 2500ಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಶಾರೀರಿಕ ಪ್ರದರ್ಶನಗಳನ್ನು ಸಮಾರೋಪದಲ್ಲಿ ಪ್ರದರ್ಶಿಸಿದರು. ಗ್ರಾಮೀಣ ಆಟಗಳು ನೋಡುಗರನ್ನು ಮತ್ತೊಮ್ಮೆ ಗತಕಾಲಕ್ಕೆ ಕೊಂಡೊಯ್ದಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.