ಬೆಳ್ತಂಗಡಿ : ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದರಲ್ಲಿ ನಮ್ಮ ಪಾಲೂ ಇರಬೇಕಾದರೆ ನಮ್ಮ ಸಂಸ್ಕೃತಿ, ಸಭ್ಯತೆಯ ಎಲ್ಲಾ ಗುಣಗಳನ್ನು ಅಳವಡಿಸುವ ಅಗತ್ಯವಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಹೇಳಿದರು.ಅವರು ಆದಿತ್ಯವಾರ ಬೆಳ್ತಂಗಡಿ ಹಳೆಕೋಟೆಯಲ್ಲಿನ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ವಿಭಾಗದ ಪ್ರಾರಂಭಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೌದ್ಧಿಕ್ ನೀಡಿದರು.
ಪಾಶ್ಚಾತ್ಯ ನಾಗರಿಕತೆಗೆ ನಾವು ಮಾರು ಹೋಗುತ್ತಿದ್ದೇವೆ. ಅವರದ್ದೆಲ್ಲವನ್ನು ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಸಭ್ಯತೆ, ಅಸಭ್ಯತೆಯ ಬಗ್ಗೆ ತಿಳುವಳಿಕೆ ಇಲ್ಲವಾಗಿದೆ. ನಮಗೆ ಸಾಂತಾಕ್ಲಾಸ್, ಜಿಂಗಲ್ಬೆಲ್ ಗೊತ್ತು ಆದರೆ ರಾಮನವಮಿ, ಭಜನೆಯ ಬಗ್ಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿಯೇ ತಂದೆ ತಾಯಿ ಇದ್ದರೂ ಬೇರೆ ಯಾರನ್ನೊ ಫಾದರ್ ಮದರ್ ಕರೆಯುವುದಕ್ಕೆ ಹೋಗುತ್ತಿದ್ದೇವೆ. ನೆಲದಲ್ಲಿ ಕೂತು ಊಟ ಮಾಡುವ ವೈಜ್ಞಾನಿಕತೆ ನಮಗೆ ಬೇಕಿಲ್ಲ. ಚಾಕಲೇಟು ತಿಂದು ಬೆರಳು ಚೀಪುವುದು ಸಭ್ಯತೆಯಾಗಿ ಕಂಡರೆ, ಬೆರಳುಗಳಿಂದ ಊಟ ಮಾಡುವುದು ಅಸಭ್ಯವಾಗಿ ಕಾಣುತ್ತೇವೆ ಎಂದ ಅವರು ನಮ್ಮ ಸಂಸ್ಕೃತಿಯ ಅಸಲಿಯತ್ತು, ವೈಜ್ಞಾನಿಕತೆ ಏನು ಎಂಬುದುನ್ನು ತಿಳಿಸುವ ಕೆಲಸ ಸಮಿತಿ ಮಾಡುತ್ತಿದೆಯಲ್ಲದೆ, ಯುವ ಶಕ್ತಿಯಲ್ಲಿನ ಗುಣಗಳ ಕೊರೆತೆಯನ್ನು ತುಂಬಿಸುವ, ಆ ಮೂಲಕ ಸಮಾಜವನ್ನು ಸಧೃಢ, ಸಶಕ್ತವನ್ನಾಗಿ ಮಾಡುವ ಕಾರ್ಯ ಸಮಿತಿ ಕಳೆದ ೮೦ ವರ್ಷಗಳಿಂದ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಯುರ್ವೆದಿಕ್ ವೈದ್ಯೆ ಸುಷ್ಮಾ ಡೋಂಗ್ರೆ ಅವರು ನಾವು ಸಮಾಜದಿಂದ ಏನು ಪಡೆದಿದ್ದೆವೆಯೋ ಅದನ್ನು ಹಿಂದಿರುಗಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಉತ್ತಮ ಪ್ರಜೆಯಾಗಲು ಹಿರಿಯರ ಹಿತನುಡಿಗಳು ಅಗತ್ಯ ಎಂಬುದನ್ನು ಮರೆಯಬಾರದು ಎಂದರು.
ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್ ಸ್ವಾಗತಿಸಿ ಪರಿಚಯಿಸಿದರು. ಶಿಬಿರಾಧಿಕಾರಿ ವೇದಾವತಿ ವರದಿ ನೀಡಿದರು. ಪ್ರತಿಮಾ ವೈಯಕ್ತಿಕ ಗೀತೆ ಹಾಡಿದರು. ಪ್ರೇಮಲತಾ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭಕ್ಕೆ ಮೊದಲು ಶಿಬಿರಾರ್ಥಿಗಳಿಂದ ಲಾಯಿಲ ವೆಂಕಟರಮಣ ದೇವಸ್ಥಾನದಿಂದ ವಾಣಿ ಶಾಲೆಯವರಿಗೆ ಘೋಷ್ ಸಹಿತ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಶಿಬಿರಾರ್ಥಿಗಳಿಂದ ಸೂರ್ಯ ನಮಸ್ಕಾರ, ಯೋಗ, ನೀ ಯುದ್ದ, ಯೋಗ ಛಾಪ, ಆಟಗಳ ಪ್ರಾತ್ಯಕ್ಷಿಕೆ ನಡೆಯಿತು. ಅ.11 ರಿಂದ 19 ರವರೆಗೆ ನಡೆದ ಶಿಬಿರದಲ್ಲಿ 180ಸೇವಿಕೆಯರು ಶಿಬಿರಾರ್ಥಿಗಳಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.