ಬೆಂಗಳೂರು: ಕೊಪ್ಪಳದ ಗವಿಸಿದ್ದಪ್ಪ ನಾಯಕರ ಕೊಲೆ ಪ್ರಕರಣವನ್ನು ಎನ್.ಐ.ಎಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮುಸ್ಲಿಂ ಮತಾಂಧರಿಂದ ಹತ್ಯೆಯಾದ ಕೊಪ್ಪಳದ ಗವಿಸಿದ್ದಪ್ಪ ನಾಯಕ ಅವರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿ-ಜೆಡಿಎಸ್ ನಿಯೋಗವು ಇಂದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಕಾನೂನಿನಡಿ ಈ ಬಡ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಎರಡು ಎಕರೆ ಜಮೀನು ನೀಡಬೇಕು; ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಮಾಜಿ ಸಚಿವ ಶ್ರೀರಾಮುಲು, ರಾಜು ಗೌಡ, ಶಿವನಗೌಡ ನಾಯಕ, ಜನಾರ್ದನ ರೆಡ್ಡಿ ಅವರು ಸಂತ್ರಸ್ತನ ಕುಟುಂಬದವರನ್ನು ಭೇಟಿ ಮಾಡಿದ್ದಾರೆ ಎಂದರು. ಇಂಥ ಕೊಲೆಗಡುಕರಿಗೆ ಈ ಕಾಂಗ್ರೆಸ್ ಸರಕಾರದ ಬಗ್ಗೆ ವಿಪರೀತ ವಿಶ್ವಾಸ ಇದೆ. ಇದರಿಂದ ಮಂಗಳೂರು ಸೇರಿ ವಿವಿಧೆಡೆ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಟೀಕಿಸಿದರು.
ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಸರಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದೇವೆ ಎಂದರು. ಪ್ರಶ್ನೆಗೆ ಉತ್ತರಿಸಿದ ಅವರು, ಮೃತರು ಬಿಜೆಪಿ ಇರಲಿ; ಕಾಂಗ್ರೆಸ್ ಅಥವಾ ಜೆಡಿಎಸ್ ಕಾರ್ಯಕರ್ತನೇ ಇರಲಿ; ಬೇರೆ ಪಕ್ಷದಲ್ಲಿ ಹಿಂದೂ ಕಾರ್ಯಕರ್ತ ಇರಬಾರದು ಎಂದೇನಿಲ್ಲ. ಇದು ಬಹಳ ಗಂಭೀರವಾದ ವಿಚಾರ. ಇಡೀ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಸುದ್ದಿಯಾಗಿದೆ. ಇದಕ್ಕಾಗಿ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಡ ಹೇರುವುದಾಗಿ ತಿಳಿಸಿದರು.
ಸ್ಮಾರ್ಟ್ ಮೀಟರ್ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಸರಕಾರ ಬಂದಾಗಿನಿಂದ ಕೊಳ್ಳೆ ಹೊಡೆಯುವ, ಲೂಟಿ ಮಾಡುವ ಕೆಲಸ ನಡೆದಿದೆ. ವಿಪಕ್ಷ ನಾಯಕರು, ಡಾ.ಅಶ್ವತ್ಥನಾರಾಯಣ ಅವರು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಸಚಿವರ ವಿರುದ್ಧ ಪ್ರಾಸಿಕ್ಯೂಶನ್ಗೆ ಅನುಮತಿ ಕೋರಿದ್ದರು. ಆ ವಿಷಯದಲ್ಲೂ ಮತ್ತೊಮ್ಮೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳದ ಜನತೆ ಜಾತ್ಯತೀತವಾಗಿ ಎಲ್ಲರನ್ನೂ ಪ್ರೀತಿಸುವವರು. ಈ ಗ್ಯಾರಂಟಿ ಸರಕಾರ ಬಂದ ಬಳಿಕ ಬಡವರ, ಹಿಂದೂಪರ ಕಾರ್ಯಕರ್ತರ ಪ್ರಾಣಕ್ಕೆ ಗ್ಯಾರಂಟಿ ಇಲ್ಲದ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಹತ್ಯೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಗುಪ್ತಚರ ಇಲಾಖೆ ವಿಫಲತೆಗೆ ಮುಖ್ಯಮಂತ್ರಿಗಳೇ ಹೊಣೆಗಾರರು ಎಂದು ಆಕ್ಷೇಪಿಸಿದರು. ಈ ಸರಕಾರ ನಿದ್ರೆ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ದೂರಿದರು.
ಹಿಂದೂಪರ ಕಾರ್ಯಕರ್ತರ ಹತ್ಯೆ ಆದಾಗ ಗೃಹ ಸಚಿವರು, ‘ನನಗೆ ಗೊತ್ತಿಲ್ಲ; ನನಗೆ ಮಾಹಿತಿ ಇಲ್ಲ; ಇದು ಆಗಬಾರದಿತ್ತು’ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಈ ಸರಕಾರ ನಮ್ಮ ಭಾಗದಲ್ಲಿ ದ್ವೇಷ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ನೀವೆಲ್ಲ ಸೇರಿ ಇಡೀ ಕರ್ನಾಟಕದ ಎಲ್ಲ ಹಿಂದೂಪರ ಕಾರ್ಯಕರ್ತರನ್ನು ಕೊಲ್ಲುತ್ತೀರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮುಸ್ಲಿಂ ಹುಡುಗಿಯೊಬ್ಬಳನ್ನು ಕೊಲೆ ಮಾಡಿದ ಕಾರಣಕ್ಕೆ ಗವಿಸಿದ್ದಪ್ಪ ನಾಯಕ ಹತ್ಯೆಯಾಗಿದ್ದಾನೆ. ಯಾರೂ ಪ್ರೀತಿ ಮಾಡಬಾರದೇ? ಅದೇ ಹುಡುಗಿ ಬಂದು ಪ್ರೀತಿ ಮಾಡಿದ್ದಾಳೆ. ನನ್ನ ಮಗ ಅಲ್ಲಿಗೆ ಹೋಗಿಲ್ಲ ಎಂದು ಗವಿಸಿದ್ದಪ್ಪನ ತಂದೆ ತಿಳಿಸಿದರು.
ಮಸೀದಿ ಬಳಿ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿದ್ದಾರೆ. 4 ಜನ ಇದ್ದುದಲ್ಲ. 8-10 ಜನರಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸರಕಾರ, ಶಾಸಕರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು. ಎನ್.ಐ.ಎ. ತನಿಖೆ ಮಾಡಬೇಕು; ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ-ಜೆಡಿಎಸ್ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.