ಬೆಂಗಳೂರು: ಸ್ಮಾರ್ಟ್ ಮೀಟರ್ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು; ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಿರೀಟಕ್ಕೆ ಈ ಭ್ರಷ್ಟಾಚಾರ ಹಗರಣವು ಮತ್ತೊಂದು ಹೊಸ ಗರಿ ಎಂದರು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಉತ್ತರವೇನು ಎಂದು ಪ್ರಶ್ನಿಸಿದರು. 15 ಸಾವಿರ ಕೋಟಿ ಎಂದರೆ ಸಣ್ಣ ಮೊತ್ತವಲ್ಲ. ಹಾಗಾಗಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಇದರ ಹಿಂದೆ ದ್ವೇಷ, ವೈಮನಸ್ಸು ಇಲ್ಲ; ಜನರ ಹಿತ ಕಾಪಾಡಲು ಮತ್ತು ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಈ ಕೆಲಸ ನಡೆದಿದೆ. ಸದನದಲ್ಲೂ ಇದನ್ನು ಗಮನ ಸೆಳೆಯುವ ಪ್ರಶ್ನೆ ಮೂಲಕ ಪ್ರಸ್ತಾಪಿಸಿದ್ದೇವೆ. ಆದರೆ, ಅವರು ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು. ಅರ್ಹತೆ ಇಲ್ಲದ ಗುತ್ತಿಗೆದಾರನಿಗೆ ಗುತ್ತಿಗೆ, ಬ್ಲ್ಯಾಕ್ ಲಿಸ್ಟೆಡ್ ಕಂಪೆನಿ ಜೊತೆ ಒಡಂಬಡಿಕೆ, ನಿಯಮಾವಳಿ ಉಲ್ಲಂಘನೆ ಮಾಡಿದ್ದನ್ನು ಹಾಗೂ ರಾಷ್ಟ್ರದಲ್ಲೇ ಗರಿಷ್ಠ- ದುಬಾರಿ ದರ ವಿಧಿಸುತ್ತಿರುವುದು, ಕಡ್ಡಾಯ ಇಲ್ಲದಿದ್ದರೂ ಕಡ್ಡಾಯ ಮಾಡಿದ್ದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೇವೆ ಎಂದು ಗಮನ ಸೆಳೆದರು.
ಎಲ್ಲ ಉಲ್ಲಂಘನೆಗಳನ್ನು ತಿಳಿಸಿದರೂ ಸ್ವಾರ್ಥಿಗಳಾಗಿ, ಎಟಿಎಂ ಸರಕಾರದಂತೆ ಹಗಲುದರೋಡೆ ಮಾಡಲು ಮುಂದಾದರು. ಏಪ್ರಿಲ್ನಲ್ಲೇ ಲೋಕಾಯುಕ್ತ ಪೊಲೀಸ್ಗೆ ದೂರು ಕೊಟ್ಟಿದ್ದೇವೆ. ನಂತರ ಮರು ಮನವಿ ನೀಡಿದ್ದೇವೆ. ತಡವಾದ ಕಾರಣ ಚುನಾಯಿತ ಪ್ರತಿನಿಧಿಗಳ ಕ್ರಿಮಿನಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಶಾಸಕರಾದ ನಾನು, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ಅವರು ಕೋರ್ಟಿನ ಬಾಗಿಲು ತಟ್ಟಿದ್ದೇವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ವಿವರಿಸಿದರು.
ಸರಕಾರಕ್ಕೆ ಕಣ್ಣು, ಕಿವಿ, ತಲೆ ಇದೆಯೇ? ಯಾರಾದರೂ ಇದರ ಕುರಿತು ಮಾತನಾಡಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮಾನ್ಯ ರಾಜ್ಯಪಾಲರಿಗೂ ಅರ್ಜಿ ಕೊಟ್ಟೆವು. ಮರು ಮನವಿ ಬಗ್ಗೆ ಸಲಹೆ ಬಂತು. ಅದರಂತೆ ಕೇಸು ದಾಖಲಿಸಿದೆವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೇಳಿದ್ದೇವೆ ಎಂದರು.
ಖಾಸಗಿ ದೂರು (ಪಿಸಿಆರ್) ಮಾಡಲು ಒಪ್ಪಿಗೆ ಲಭಿಸಿದೆ. ನಿನ್ನೆ ಸಂಜೆ ಇದರ ಮೌಖಿಕ ಆದೇಶ ಸಿಕ್ಕಿದೆ. ಲೋಕಾಯುಕ್ತರಿಗೂ ತಿಳಿಸಲು ಸೂಚಿಸಿದ್ದಾರೆ ಎಂದ ಅವರು, ಈಗಿನ ಗುತ್ತಿಗೆಯನ್ನು ಕೈಬಿಡಬೇಕು. ಅಧಿಕಾರ ದುರ್ಬಳಕೆ ಕಾಣುತ್ತಿದೆ. ಕೆ.ಜೆ.ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯವನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ ಎಲ್ಲಿದ್ದೀರಿ? ನಿಮ್ಮ ನಿಲುವೇನು? ಸ್ಪಷ್ಟನೆ ಏನು? ನಿಮ್ಮ ಮೇಲೆ, ನಿಮ್ಮ ಸರಕಾರದ ಮೇಲೆ ಸಾಕಷ್ಟು ಆಪಾದನೆಗಳಿವೆ ಎಂದು ಟೀಕಿಸಿದರು.
ಪಿ.ಸಿ.ಆರ್ ದಾಖಲಾದುದು ಗೊತ್ತಾದ ಮೇಲಾದರೂ ರಾಜೀನಾಮೆ ಕೊಡುವಿರಾ ಜಾರ್ಜ್ ಅವರೇ ಎಂದು ಕೇಳಿದರು. ನ್ಯಾಯಕ್ಕೆ ತಲೆ ಬಾಗುವುದಾಗಿ ಹೇಳಿದವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಸದನದಲ್ಲೂ ಈ ವಿಚಾರದ ಕುರಿತು ಹೋರಾಟ ಮಾಡುವ ಬಗ್ಗೆ ಪ್ರತಿಪಕ್ಷ ನಾಯಕರ ಜೊತೆ ಸಮಾಲೋಚನೆ ಮಾಡುವುದಾಗಿ ಪ್ರಶ್ನೆಗೆ ಉತ್ತರಿಸಿದರು.
ಜಾತಿ ಗಣತಿ ಕುರಿತ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಜೀ ಅವರ ಸರಕಾರವು ಜನಗಣತಿ ಜೊತೆಗೇ ಜಾತಿ ಗಣತಿ ಮಾಡುವ ಪ್ರಮುಖ ನಿರ್ಣಯ ಮಾಡಿದೆ. ರಾಜ್ಯ ಸರಕಾರಕ್ಕೆ ಜಾತಿ ಗಣತಿ ಅಧಿಕಾರ ಇಲ್ಲದೇ ಇದ್ದರೂ, ಅವಕಾಶ, ಸಿಬ್ಬಂದಿ, ಮಾಹಿತಿ ಇಲ್ಲದೇ ಏನೇ ಮಾಡಿದರೂ ಅದು ಕಾನೂನಾತ್ಮಕವಾಗಿ ಅದನ್ನು ಎತ್ತಿ ಹಿಡಿಯಲಾಗದು ಎಂದು ತಿಳಿಸಿದರು. 2014- 15ರಲ್ಲಿ ಮಾಡಿದ್ದ ಗಣತಿಯನ್ನು ಅವರೇ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು. ಸಾಕು ನಿಮ್ಮ ದೊಂಬರಾಟ; ಒಳ್ಳೆಯ ಆಡಳಿತ ಕೊಡಿ ಎಂದು ಆಗ್ರಹವನ್ನು ಮುಂದಿಟ್ಟರು.
ಜನರಿಗೆ ಅಭಿವೃದ್ಧಿ ಕೊಡಿ. ಗುಣಮಟ್ಟದ ಶಿಕ್ಷಣ ಕೊಡಿ. ತಂತ್ರಜ್ಞಾನ ಬಳಕೆ ಮಾಡಿ. ಒಕ್ಕಲೆಬ್ಬಿಸುವುದು, ಊರು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಬರುವಂತೆ ಮಾಡುವುದನ್ನು ಬಿಟ್ಟು ಬಿಡಿ. ಕೋವಿಡ್ ನಂತರವೂ ವಾಸವಿದ್ದಲ್ಲೇ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ನಾವು ಕಣ್ಮುಂದೆ ಕಂಡಿದ್ದೇವೆ. ಅದನ್ನು ಬಲಪಡಿಸುವ ಪ್ರಯತ್ನ ಮಾಡಿ. ರಾಜಕೀಯ ದೊಂಬರಾಟ ಬೇಡ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆದ ಕುರಿತು ರಾಹುಲ್ ಗಾಂಧಿಯವರು ಆಪಾದಿಸಿದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಪಕ್ಷವೇ ಇಲ್ಲಿ ಆಡಳಿತದಲ್ಲಿತ್ತು. ಇದು ಆಧಾರರಹಿತ ಹೇಳಿಕೆ; ಇದನ್ನು ಖಂಡಿಸುತ್ತೇವೆ. ಇದಕ್ಕೆ ಚುನಾವಣಾ ಇಲಾಖಾಧಿಕಾರಿಗಳು, ಸರಕಾರವೇ ಉತ್ತರ ಕೊಡಬೇಕಾಗುತ್ತದೆ ಎಂದು ನುಡಿದರು.
ವಿಧಾನಪರಿಷತ್ ಸದಸ್ಯÀ ಕೆ.ಎಸ್. ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು 3 ಬಾರಿ ಪ್ರತಿಭಟನೆ ಮಾಡಿದ್ದಾರೆ. ಹಣ ಮಾಡುವ ಏಕೈಕ ಉದ್ದೇಶಕ್ಕಾಗಿ ಸರಕಾರವು ಸ್ಮಾರ್ಟ್ ಮೀಟರನ್ನು ಅಳವಡಿಸಲು ಮುಂದಾಗಿದೆ ಎಂದು ಆರೋಪಿಸಿದರು. ಎಲ್ಲ ನಿಯಮ ಗಾಳಿಗೆ ತೂರಿ ಸ್ಮಾರ್ಟ್ ಮೀಟರ್ ಖರೀದಿ ಕುರಿತಂತೆ ಮುಖ್ಯಮಂತ್ರಿ, ಇಂಧನ ಸಚಿವರು ಉತ್ತರಿಸಬೇಕಿದೆ ಎಂದು ತಿಳಿಸಿದರು. ಜಾರ್ಜ್ ಅವರು ರಾಜೀನಾಮೆ ಕೊಡಬೇಕು; ಇಲ್ಲವಾದರೆ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.
ಶಾಸಕರಾದ ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಗೋಪಿನಾಥ್ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.