ಬೆಂಗಳೂರು: ಕಾಂಗ್ರೆಸ್ ಸರಕಾರವು ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಬದಲಾಗಿ ‘ಬಿರಿಯಾನಿ ಬೆಂಗಳೂರು’ ಮಾಡಲು ಹೊರಟಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಬೆಂಗಳೂರಿನ ಬೀದಿನಾಯಿಗಳಿಗೆ ವರ್ಷಕ್ಕೆ 2.80 ಕೋಟಿ ಖರ್ಚು ಮಾಡಿ, ಚಿಕನ್ ಬಿರಿಯಾನಿ ಕೊಡುವ ಔಚಿತ್ಯ ಏನು? ಇದಕ್ಕೆ ಯಾರು ಯೋಜನೆ ನಿರೂಪಿಸಿದ್ದಾರೆ? ಎಂದ ಅವರು, ದಯಮಾಡಿ ಬಿಬಿಎಂಪಿ ಕಮೀಷನರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು ಸ್ಪಷ್ಟನೆ ಕೊಡಬೇಕೆಂದು ಮನವಿ ಮಾಡಿದರು.
ನಾಯಿಗಳಿಗೆ ಆಹಾರ ಹಾಕುವುದಕ್ಕೆ ನಮ್ಮ ತಕರಾರಿಲ್ಲ. ಬೆಂಗಳೂರಿನ ಬೀದಿನಾಯಿಗಳಿಗೆ ಹಲವಾರು ವರ್ಷಗಳಿಂದ ಎನ್ಜಿಒಗಳು, ದಾನಿಗಳು, ಯಾರೋ ಮನೆಯವರು, ಹೋಟೆಲ್ ಮಾಲೀಕರು ಆಹಾರ ನೀಡುತ್ತಿದ್ದರು. ಆದರೆ, ದುಡ್ಡು ಹೊಡೆಯಲು ಹಾಗೂ ಜನರ ತೆರಿಗೆ ಹಣವನ್ನು ಪೋಲು ಮಾಡುವ ರೀತಿಯಲ್ಲಿ ಯೋಜನೆ ಇದ್ದು, ಇದರ ಹಿಂದಿನ ಮರ್ಮ ಏನು? ಇದಕ್ಕೆ ಯಾರು ಸಹಕಾರ ಕೊಟ್ಟಿದ್ದಾರೆ ಎಂದು ಕೇಳಿದರು.
2023ರ ಸರ್ವೇ ಪ್ರಕಾರ ಮೂರುವರೆಯಿಂದ 4 ಲಕ್ಷ ಬೀದಿನಾಯಿಗಳಿವೆ ಎಂದು ತಿಳಿಸಲಾಗಿತ್ತು. ನಾಯಿಗಳಿಗೆ ಲಸಿಕೆ ಕೊಡುವುದು, ಸಂತಾನಹರಣ ಆಪರೇಷನ್ ಮಾಡುವುದು ಬಿಬಿಎಂಪಿಯ ಕೆಲಸ. ಅದಕ್ಕಾಗಿಯೇ ಒಂದು ಇಲಾಖೆ ಇದ್ದು, ಅವರು ಅದನ್ನು ನಿರ್ವಹಿಸುತ್ತಾರೆ. ಬೀದಿನಾಯಿಗಳ ಕಾಟದಿಂದ ಗ್ರಾಮೀಣ ಪ್ರದೇಶ, ಸ್ಲಂಗಳಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಹೊರಕ್ಕೆ ಬರಲು ಭಯ ಪಡುವಂತಾಗಿದೆ ಎಂದು ದೂರಿದರು.
ಹಿರಿಯ ನಾಗರಿಕರು ಉದ್ಯಾನಗಳಲ್ಲಿ ವಾಕಿಂಗ್ ತೆರಳಲು ಭಯಪಡುತ್ತಿದ್ದಾರೆ. ಬಡ ಮಕ್ಕಳ ಬಿಸಿ ಊಟಕ್ಕೆ 12.45 ರೂ. ಖರ್ಚು ಮಾಡುತ್ತಿದ್ದಾರೆ. ಆದರೆ, ನಾಯಿಗಳಿಗೆ 22 ರೂ. ಖರ್ಚು ಮಾಡುತ್ತಾರೆ. ಬಡಮಕ್ಕಳಿಗಿಂತ ಪೌಷ್ಟಿಕ ಆಹಾರವನ್ನು ನಾಯಿಗೆ ಕೊಡುವುದಾದರೆ, ಬಡ ಮಕ್ಕಳ ಗತಿ ಏನು ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಆ ನಾಯಿಗಳ ಪುಣ್ಯ, ಈ ನಾಯಿಗಳ ಪಾಪವಾದರೂ ಏನು?
ಒಂದು ವಲಯದಲ್ಲಿ 500 ನಾಯಿಗೆ ಆಹಾರ ಹಾಕುವುದಾಗಿ ಹೇಳುತ್ತಾರೆ. 8 ವಲಯಗಳಲ್ಲಿ 4 ಸಾವಿರ ನಾಯಿಗಳಿಗೆ ಆಹಾರ ನೀಡುವ ಹೇಳಿಕೆ ಕೊಟ್ಟಿದ್ದಾರೆ. ಉಳಿದ ಲಕ್ಷಾಂತರ ನಾಯಿಗಳೇನು ಪಾಪ ಮಾಡಿವೆ ಎಂದು ಸಿ.ಕೆ. ರಾಮಮೂರ್ತಿ ಅವರು ಪ್ರಶ್ನೆ ಮಾಡಿದರು. ಆಹಾರ ಪಡೆಯುವ ನಾಯಿಗಳು ಮಾಡಿದ ಪುಣ್ಯವೇನು ಎಂದರು.
ಆ ನಾಯಿಗೆ ತಂಗಳನ್ನ, ಈ ನಾಯಿಗೆ ಬಿರಿಯಾನಿ ಹಾಕುತ್ತೀರಿ. ನಾಯಿ ನಾಯಿಯಲ್ಲೇ ಭೇದ ಮಾಡುವುದೇಕೆ ಎಂದು ಕೇಳಿದರು. ಬ್ರ್ಯಾಂಡ್ ಬೆಂಗಳೂರಿನ ಮೊದಲನೇ ಮೆಟ್ಟಿಲಾಗಿ ನಾಯಿಗಳಿಗೆ ಬಿರಿಯಾನಿ ಕೊಡಲಿದ್ದು, ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಈ ಯೋಜನೆ ರೂಪಿಸಿದ ಮಹಾತ್ಮನಿಗೆ ಪ್ರಶಸ್ತಿ ಕೊಡಬೇಕು. ಇಲ್ಲಿನವರೆಗೆ ನಾಯಿಪ್ರಿಯರು, ಎನ್.ಜಿ.ಒ.ಗಳು ಆಹಾರ ಹಾಕಿದ್ದಾರೆ. ಇದೀಗ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸರಕಾರಿ ಶಾಲೆ ಮಕ್ಕಳಿಗೆ ಶೂ ಕೊಡಲು ದುಡ್ಡಿಲ್ಲದೇ ದಾನಿಗಳನ್ನು ನೋಡುತ್ತಿರುವುದಾಗಿ ಶಿಕ್ಷಣ ಸಚಿವರೇ ಹೇಳಿದ್ದಾರೆ. ಇನ್ನೊಂದೆಡೆ ನಾಯಿಗೆ ಬಿರಿಯಾನಿ ಹಾಕುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಕೇಳಿದರು. ಈ ಯೋಜನೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಗುಂಡಿ, ಕಸದ ವಿಲೇವಾರಿ ಕಡೆಗಣಿಸಿ..
ಬೆಂಗಳೂರಿನ ರಸ್ತೆ ಗುಂಡಿಗಳಿಂದ ಅಪಘಾತ ಹೆಚ್ಚಾಗುತ್ತಿದೆ. ಕಸ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಇದೆಲ್ಲವನ್ನೂ ಬಿಟ್ಟು ಈ ಯೋಜನೆ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು. ಈ ಸರಕಾರವು ತನ್ನ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಶಂಕುಸ್ಥಾಪನೆ ಕಾರ್ಯದ ವಿವರ ಕೊಡಬೇಕೆಂದು ರಾಮಮೂರ್ತಿ ಅವರು ಆಗ್ರಹಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 8ರಿಂದ 10 ಲಕ್ಷ ಬೀದಿನಾಯಿಗಳಿವೆ. ನಾಯಿ ಕಡಿತಕ್ಕೆ ಇಂಜೆಕ್ಷನ್ಗಾಗಿ ಜನರು ಕ್ಯೂ ನಿಲ್ಲುತ್ತಿದ್ದಾರೆ. ಪಾಲಿಕೆ ಶಾಲೆಗಳ ಅಭಿವೃದ್ಧಿ, ಮಕ್ಕಳು ಶಾಲೆಗೆ ಸರಿಯಾಗಿ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಬಿಟ್ಟು ನಾಯಿಗಳಿಗೆ ಆಹಾರ ಹಾಕಲು ಮುಂದಾಗಿದ್ದಾರೆ. ಈ ಆಹಾರವನ್ನು ಇಲಿ, ಹೆಗ್ಗಣಗಳು ತಿಂದು ಇಲಿಜ್ವರದಂಥ ಸಮಸ್ಯೆ ಕಾಡಲಿದೆ ಎಂದು ಟೀಕಿಸಿದರು.
ಕುರ್ಚಿಗಾಗಿ ಕಿತ್ತಾಟ, ದೆಹಲಿ ಯಾತ್ರೆ…
ಸಿಎಂ ಕುರ್ಚಿಗಾಗಿ ಕಿತ್ತಾಟ, ದೆಹಲಿ ಯಾತ್ರೆ ನಡೆದಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಿದ್ದಾರೆ. ನಾವು ಅಭಿವೃದ್ಧಿ ಸಂಬಂಧ ಪ್ರತಿ ಶಾಸಕರಿಗೆ 50 ಕೋಟಿ ಕೇಳಿದ್ದು, ಕೊಡುತ್ತಿಲ್ಲ ಎಂದು ದೂರಿದರು. ಬೀದಿ ಹಸುಗಳ ಸಂಬಂಧ ಕ್ರಮ ಕೈಗೊಳ್ಳುತ್ತಿಲ್ಲ. ಬೀದಿನಾಯಿ ನಿಯಂತ್ರಣ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು. ಅಗತ್ಯವಿದ್ದರೆ ಡಾಗ್ ಪಾರ್ಕ್ ಮಾಡಿ ಎಂದು ಅವರು ತಿಳಿಸಿದರು. ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಿ ಎಂದು ಆಗ್ರಹಿಸಿದರು.
ಆರೆಸ್ಸೆಸ್ನ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು 75 ವರ್ಷ ಆದವರು ರಾಜಕೀಯದಲ್ಲಿ ಯುವಕರಿಗೆ ಅವಕಾಶ ಕೊಡುವಂತೆ ತಿಳಿಸಿದ್ದಾರೆ. ಇದನ್ನು ಕಾಂಗ್ರೆಸ್ಸಿನವರು ಪ್ರಧಾನಿ ಮೋದಿಗೆ ಸಂಬಂಧಿಸಿ ಎಂದಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ, ಇದು ಮೋಹನ್ ಭಾಗವತ್ ಜೀ ಅವರ ಸಲಹೆ. ಹಳೆಬೇರು ಇರಬೇಕು; ಹೊಸ ಚಿಗುರು ಇರಬೇಕು, ಪ್ರಧಾನಿ ಬದಲಿಸಲು ಅವರೇನೂ ಹೇಳಿಲ್ಲ; ಯುವಕರನ್ನು ಈ ದೇಶದ ರಾಜಕಾರಣಕ್ಕೆ ಬರುವಂತೆ ತಿಳಿಸಿದ್ದಾರೆ ಎಂದು ವಿವರಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮಳೆಹಾನಿಯಿಂದ ಸಮಸ್ಯೆ ತೀವ್ರವಾಗಿದೆ. ಕರ್ನಾಟಕ, ಬೆಂಗಳೂರಿನ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸಚಿವರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು. ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕರು, ಶಾಸಕರು ಭೇಟಿ ಕೊಟ್ಟಿದ್ದಾರೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ಉಮೇಶ್ ಶೆಟ್ಟಿ, ಬಿ.ವಿ. ಗಣೇಶ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.