ಬೆಳ್ತಂಗಡಿ : ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯವನ್ನು ತುಂಬಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಮುಕ್ತಿ ಸಂಸ್ಥೆಯು ಬಾಲಕಿಯರಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಿ ಪ್ರೋತ್ಸಾಹಿಸುತ್ತಿದೆ ಎಂದು ತಹಸೀಲ್ದಾರ್ ಪ್ರಸನ್ನ ಮೂರ್ತಿ ಹೇಳಿದರು.ಅವರು ಶುಕ್ರವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕಪುಚಿನ್ ಕೃಷಿಕಾ ಸೇವಾ ಕೇಂದ್ರ, ದಯಾಳ್ಬಾಗ್ ಗ್ರಾಮಾಭಿವೃದ್ದಿ ಯೋಜನೆ ವಿಮುಕ್ತಿ ಇದರ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮೂಲಭೂತ ಸೌಕರ್ಯಗಳಲ್ಲಿ ಒಂದು. ಸೈಕಲ್ ಪಡೆದ ಮಕ್ಕಳು ಅದನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಿ. ಸೈಕಲ್ ಯಾವ ರೀತಿಯಲ್ಲಿ ಮುಂದುವರೆಯುತ್ತದೆ ಅದೇ ರೀತಿ ಹೆಣ್ಣುಮಕ್ಕಳು ಕೂಡಾ ಮುಂದುವರಿಯಬೇಕು. ಹೆಣ್ಣು ಮಕ್ಕಳನ್ನು ನಿರಂತರವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದರು.
ಲಯನ್ಸ್ ಕ್ಲಬ್ನ ಉಪಾಧ್ಯಕ್ಷೆ ಸುಶೀಲಾ ಹೆಗ್ಡೆ ಮಾತನಾಡಿ ಪಂಚಾಯತ್ಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಉತ್ತಮ ರೀತಿಯ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇವತ್ತಿನ ಈ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಶಿಕ್ಷಣ ನೀಡಿದರೂ ಸಾಕಾಗುವುದಿಲ್ಲ. ಅವರಿಗೆ ಸಂಘ ಸಂಸ್ಥೆಗಳು, ಪೋಷಕರು ಪ್ರೋತ್ಸಾಹ ನೀಡಬೇಕು. ಹೆಣ್ಣು ಮಕ್ಕಳು ಮುಂದುವರಿಯಲು ಹಲವಾರು ಅಡೆತಡೆಗಳು ಇವೆ ಇದನ್ನು ಮೆಟ್ಟಿ ಮುನ್ನಡೆಯಬೇಕು. ಇಂದಿನ ಸೈಕಲ್ ವಿತರಣೆ ಕಾರ್ಯಕ್ರಮ ಇದಕ್ಕೆ ಪ್ರೇರಣೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನಸ್ ಅವರು, ಹೆಣ್ಣು ಮಕ್ಕಳು ಶಿಕ್ಷಣದಿಂದ ಸಮಾಜದಲ್ಲಿ ಸ್ಥಾನಮಾನ, ಸಂಪಾದನೆ ಗಳಿಸಬೇಕು. ಕಳೆದ ಬಾರಿ 300 ಕುಟುಂಬಗಳಿಗೆ ಸೋಲಾರ್ ದೀಪದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಬಾರಿ 50 ಕುಟುಂಬದ ಹೆಣ್ಣುಮಕ್ಕಳಿಗೆ ಸೈಕಲ್ ವಿತರಣೆಯನ್ನು ಮಾಡುತ್ತಿದ್ದೇವೆ. ಯಾವ ಮಗುವಿಗೆ ಈ ಸೈಕಲ್ ಸೌಲಭ್ಯವು ಸಿಕ್ಕಿದೆಯೋ ಆ ಮಗುವೇ ಸೈಕಲ್ ಉಪಯೋಗಿಸಬೇಕು. ಸೈಕಲ್ ಯಾವ ರೀತಿ ಮುಂದುವರಿಯುತ್ತದೋ ಅದೇ ರೀತಿ ನೀವು ಕೂಡಾ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯಬೇಕು. ಸೈಕಲ್ಗಳು ನಿಮ್ಮ ಶಿಕ್ಷಣಕ್ಕೆ ಪೂರಕವಾಗಿ ನಿಮ್ಮ ಕುಟುಂಬವನ್ನು ಚೆನ್ನಾಗಿ ರೂಪಿಸಲಿ ಎಂದರು.
ಸಹ ನಿರ್ದೆಶಕರಾದ ಫಾ. ಅಮರ್ ಆಂಟನಿ ಲೋಬೋ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕರ್ತೆ ಜಲಜಾ ಸ್ವಾಗತಿಸಿದರು. ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘದ ಮೇಲ್ವಿಚಾರಕಿ ರೋಹಿಣಿ ವಂದಿಸಿದರು. ಸಂಸ್ಥೆಯ ಲೆಕ್ಕಿಗ ಲವೀನಾ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.