ನವದೆಹಲಿ: ಆಸ್ಟ್ರೇಲಿಯ ಸರ್ಕಾರವು ಗೌತಮ್ ಅದಾನಿ ನೇತೃತ್ವದ ಬಹುಕೋಟಿ ರೂಪಾಯಿಯ ಅದಾನಿ ಎಂಟರ್ಪ್ರೈಸಸ್ನ ಕಲ್ಲಿದ್ದಲು ಗಣಿ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ. ಈ ನಡುವೆ ಪರಿಸರ ಕಾಳಜಿ ನಿರ್ವಹಿಸುವ ಕಟ್ಟುನಿಟ್ಟಿನ ನಿಯಮಗಳನ್ನೂ ಹೇರಿದೆ.
ಈ ಯೋಜನೆಗೆ ’ರಾಷ್ಟ್ರೀಯ ಪರಿಸರ ಕಾನೂನು’ ಅಡಿಯಲ್ಲಿ ಅನುಮೋದನೆ ನೀಡಲಾಗಿದ್ದು, 36 ಷರತ್ತುಗಳು ಒಳಪಟ್ಟಿವೆ ಎಂದು ಆಸ್ಟ್ರೇಲಿಯದ ಪರಿಸರ ಸಚಿವಾಲಯ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಕ್ವೀನ್ಸ್ಲ್ಯಾಂಡ್ನಲ್ಲಿ ವಿಶ್ವದ ಅತಿ ದೊಡ್ಡ ಕಲ್ಲಿದ್ದಲು ಗಣಿ ನಿರ್ಮಾಣವಾಗಲಿದ್ದು, ಪರಿಸರವಾದಿಗಳ ಟೀಕೆಗಳಿಗೆ ಗುರಿಯಾಗಿದೆ. ಹಡಗುಗಳ ಮೂಲಕ ಕಲ್ಲಿದಲು ಬಂದರು ಪ್ರದೇಶಕ್ಕೆ ಸಾಗಿಸುವ ಕ್ರಿಯೆಯಿಂದ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ರೀಫ್ನ ಸುತ್ತಲಿನ ಪ್ರದೇಶದ ಜನರ ಆರೋಗ್ಯ ಅಪಾಯಕ್ಕೆ ಸಿಲುಕಲಿದ್ದು, ಸಂಕುಲವನ್ನು ನಾಶಪಡಿಸುತ್ತದೆ ಎನ್ನಲಾಗಿದೆ.
ಪ್ರಸ್ತುತ ಕಲ್ಲಿದ್ದಲು ಬೆಲೆಗಳು ಕಡಿಮೆ ಇದ್ದು, ಈ ಗಣಿ ಪ್ರದೇಶವು ಬಂದರಿನಿಂದ 500 ಕಿ.ಮೀ. ದೂರವಿರುವುದರಿಂದ ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಅಧಿಕ ಇರಲಿದೆ ಎಂದು ಜೆಸ್ಸಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ನ ಇಂಧನ ಸಲಹೆಗಾರ ದೀಪೇಶ್ ದೀಪು ಹೇಳಿದ್ದಾರೆ.
ಆಗಸ್ಟ್ನಲ್ಲಿ ಆಸ್ಟ್ರೇಲಿಯದ ನ್ಯಾಯಾಲಯವೊಂದು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದರಿಂದ ಅದಾನಿ ಯೋಜನೆಗೆ ನೀಡಿದ್ದ ಪರಿಸರ ಅನುಮೋದನೆಯನ್ನು ಹಿಂಪಡೆದಿತ್ತು. ಜುಲೈ 2004ರಲ್ಲಿ ನೀಡಿದ ಅನುಮೋದನೆಯಿಂದ ಯೆಕಾ ಸ್ಕಿಂಕ್ ಹಾಗೂ ಒರ್ನಾಮೆಂಟಲ್ ಸ್ನೇಕ್ ಎಂಬ ಎರಡು ಜಾತಿಯ ಹಾವುಗಳ ಮೇಲೆ ಪ್ರಭಾವ ಬೀರಲಿದೆ ಎಂದು ನ್ಯಾಯಾಲಯ ಹೇಳಿತ್ತು.
ಸದ್ಯ ಇರುವ ಅನುಮೋದನೆಗಳ ನಿಶ್ಚಿತತೆಯ ಆಧಾರದ ಮೇಲೆ 10,000 ಉದ್ಯೋಗಗಳು, ರೈಲ್ವೆ ಮತ್ತು ಬಂದರು ಯೋಜನೆ, 22 ಬಿಲಿಯನ್ ಡಾಲರ್ ತೆರಿಗೆಯನ್ನು ಸಮುದಾಯ ಸೇವೆಗಳಲ್ಲಿ ತೊಡಗಿಸಬೇಕಾಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.
ಆಸ್ಟ್ರೇಲಿಯ ಸರ್ಕಾರ ನೀಡಿರುವ ಅನುಮೋದನೆ ತೀರಾ ಬೇಜವಾಬ್ದಾರಿಯುತ ಎಂದು ಸರ್ಕಾರೇತರ ಸಂಸ್ಥೆ ’ಆಸ್ಟ್ರೇಲಿಯನ್ ಕನ್ಸರ್ವೇಷನ್ ಫೌಂಡೇಷನ್’ ಅಧ್ಯಕ್ಷ ಜ್ಯೋಫ್ ಕಸಿನ್ಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.