ಬೆಂಗಳೂರು: ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಪರಿಣಾಮವಾಗಿ ಭಾರತವು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜೀ ಅವರು ಮೊನ್ನೆಗೆ 11 ವರ್ಷಗಳ ದೇಶಸೇವೆ ಪೂರೈಸಿದ್ದಾರೆ. 11 ವರ್ಷಗಳಿಗೂ ಹೆಚ್ಚು ಕಾಲ ಗುಜರಾತ್ ಮುಖ್ಯಮಂತ್ರಿಗಳಾಗಿ, ತದನಂತರ ದೇಶದ ಪ್ರಧಾನಿಗಳಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅಲ್ಲದೆ ಭಾರತವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವದ ಪರಿಣಾಮವಾಗಿ ಕಳೆದ 11 ವರ್ಷಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ನೀಡುತ್ತಿದ್ದು, ಇದರಿಂದ ಭಾರತವು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ವಿವರಿಸಿದರು. ನಮ್ಮ ಎನ್ಡಿಎ ಸರಕಾರ ತೆಗೆದುಕೊಂಡ ಡಿಜಿಟಲ್ ಇಂಡಿಯ, ಜನ್ಧನ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಮೇಕ್ ಇನ್ ಇಂಡಿಯ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಜಲಜೀವನ್ ಮಿಷನ್, ಸ್ಟಾರ್ಟಪ್ ಇಂಡಿಯ ಸೇರಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ನಿರಂತರವಾಗಿ ದೇಶಕ್ಕೆ ಕೊಟ್ಟಿದ್ದಾರೆ. ಇದರ ಪರಿಣಾಮವಾಗಿ ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಿದರು.
ಮೋದಿಜೀ ಅವರು ಕರ್ನಾಟಕ ರಾಜ್ಯಕ್ಕೂ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕಾರ್ಯಕ್ರಮಗಳು, ಹಣಕಾಸಿನ ಸಹಾಯವನ್ನು ನೀಡಿದ್ದಾರೆ. ಮೋದಿಜೀ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ 2014ರಿಂದ ಈಚೆಗೆ ನಮ್ಮ ರಾಜ್ಯದಲ್ಲಿ ರೈಲ್ವೆಗೆ 2,702 ಕೋಟಿ ರೂ. ಹಣವನ್ನು ಅಭಿವೃದ್ಧಿಗಾಗಿ ನೀಡಿದ್ದಾರೆ. ಎನ್ಡಿಎ 2 ಅವಧಿಯಲ್ಲಿ ಇಲೆಕ್ಟ್ರಿಫಿಕೇಶನ್ ಸೇರಿ ರೈಲ್ವೆ ಅಭಿವೃದ್ಧಿಗೆ 5 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ವಿವರಿಸಿದರು.
10 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಕೂಡ ನಮ್ಮ ರಾಜ್ಯಕ್ಕೆ ಕೊಡಲಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ- ಅನುದಾನ ನೀಡುತ್ತಿದ್ದಾರೆ. ರಾಜ್ಯದ ಜನರ ಪರವಾಗಿ ಮೋದಿಜೀ ಅವರಿಗೆ ಶುಭಾಶಯ- ಅಭಿನಂದನೆಗಳನ್ನೂ ಸಲ್ಲಿಸಿದರು.
ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಇತ್ತೀಚಿನ ದಿನಗಳಲ್ಲಿ ಅವಿವೇಕತನದ ನಿರ್ಧಾರಗಳನ್ನು ಪದೇಪದೇ ತೆಗೆದುಕೊಳ್ಳುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.
ಮೊನ್ನೆ ಮೋದಿಜೀ ಅವರ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ದೆಹಲಿಯಲ್ಲಿ ನಡೆಯಿತು. ಬಹುತೇಕ ಎಲ್ಲ ರಾಜ್ಯಗಳು ಮುಖ್ಯಮಂತ್ರಿಗಳೂ ಆ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸರಕಾರದ ಆಡಳಿತ ಇರುವ ಹಿಮಾಚಲ ಪ್ರದೇಶ, ತೆಲಂಗಾಣಗಳ ಮುಖ್ಯಮಂತ್ರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ, ದೂರದೃಷ್ಟಿತ್ವವನ್ನು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಸಭೆಯನ್ನು ಬಹಿಷ್ಕರಿಸಿದರೇ? ಹೋಗಲು ಸಾಧ್ಯ ಆಗಲಿಲ್ಲವೇ ಎಂಬುದು ನನಗೆ ತಿಳಿದಿಲ್ಲ ಎಂದರು. ನೀತಿ ಆಯೋಗದ ಸಭೆಗೆ ಹೋಗದೇ ರಾಜ್ಯಕ್ಕೆ ಅಪಚಾರ ಎಸಗಿದ್ದಾರೆ; ರಾಜ್ಯಕ್ಕೆ ದ್ರೋಹ ಬಗೆಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೇ, ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳೇ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ಅಪಪ್ರಚಾರ ಮಾಡುತ್ತ, ಕೇಂದ್ರ ಸರಕಾರದ ಜೊತೆ ಸಂಘರ್ಷದ ಹಾದಿ ತುಳಿಯುತ್ತ ರಾಜ್ಯಕ್ಕೆ ಅನ್ಯಾಯ ಮಾಡಲು ಹೊರಟಿದ್ದು ಸರಿಯಲ್ಲ; ಇದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಇರುವ ಜನೌಷಧಿ ಕೇಂದ್ರಗಳನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಮುಚ್ಚಲು ಹೊರಟಿರುವುದು ಮತ್ತು ಹೊಸ ಜನೌಷಧಿ ಕೇಂದ್ರಗಳಿಗೆ ಅವಕಾಶ ಇಲ್ಲವೆಂಬ ನಿರ್ಧಾರಕ್ಕೆ ಯಾವ ಮೂರ್ಖರು ಸಲಹೆ ನೀಡಿದ್ದಾರೋ ನನಗಂತೂ ತಿಳಿದಿಲ್ಲ ಎಂದು ವಿಜಯೇಂದ್ರ ಅವರು ಟೀಕಿಸಿದರು.
ರಾಜ್ಯದ ಸರಕಾರಿ ಆಸ್ಪತ್ರೆಗಳ ವ್ಯವಸ್ಥೆ ಏನಾಗಿದೆ? ನಮ್ಮ ಪ್ರಧಾನಿ ಮೋದಿಜೀ ಅವರು ದೇಶದ ಪ್ರತಿಯೊಬ್ಬ ಕಡುಬಡವರಿಗೂ ಅನುಕೂಲ ಆಗಬೇಕು; ಕೈಗೆಟಕುವ ದರದಲ್ಲಿ ಔಷಧಿ ಸಿಗಬೇಕೆಂಬ ಸದುದ್ದೇಶದಿಂದ ಜನೌಷಧಿ ಕೇಂದ್ರಗಳನ್ನು 2014ರಿಂದ ಅನುಷ್ಠಾನಕ್ಕೆ ತಂದಿದ್ದಾರೆ. ಅಂದಿನ ಕೇಂದ್ರ ಸಚಿವ ಅನಂತಕುಮಾರ್ ಅವರು ಮುತುವರ್ಜಿ ವಹಿಸಿ ರಾಜ್ಯದಲ್ಲೂ ಇದನ್ನು ಅನುಷ್ಠಾನಕ್ಕೆ ತಂದಿದ್ದರು ಎಂದು ವಿವರಿಸಿದರು. ಜನೌಷಧಿ ಕೇಂದ್ರಗಳಿಂದ ದೇಶದ ಬಡವರಿಗೆ ಸುಮಾರು 30-40 ಸಾವಿರ ಕೋಟಿ ಉಳಿತಾಯವಾಗಿದೆ ಎಂದರು. ಜನೌಷಧಿ ಕೇಂದ್ರಗಳಿಂದ ಬಡವರಿಗೆ ಅನುಕೂಲವಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧಿಗಳು ಸರಿಯಾಗಿ ಸಿಗುತ್ತಿಲ್ಲ; ವೈದ್ಯರು ಔಷಧಿ ಬರೆದುಕೊಡುತ್ತಿದ್ದಾರೆ. ಬಡವರು ಖಾಸಗಿ ಔಷಧಿ ಅಂಗಡಿಯಿಂದ ಖರೀದಿಸಬೇಕಿದೆ. ನೂರಾರು ಯುವಕರಿಗೂ ಉದ್ಯೋಗ ಲಭಿಸಿ ಪ್ರಯೋಜನವಾಗಿದೆ ಎಂದು ಗಮನ ಸೆಳೆದರು.
ಕೇಂದ್ರ ಸರಕಾರದ ಯೋಜನೆಗೆ ಕಲ್ಲು ಹಾಕುವುದು, ಬಡವರಿಗೆ ಅನ್ಯಾಯ ಮಾಡುವುದು ಸರಿಯೇ ಎಂದು ಕೇಳಿದರು. ಮೋದಿಯವರ ಫೋಟೊ, ಅವರು ಹಿಂದುಳಿದ ಸಮುದಾಯಕ್ಕೆ ಸೇರಿದ್ದನ್ನು ಇವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಈ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿದರು. ಇಲ್ಲವಾದರೆ ಬಿಜೆಪಿ, ಹೋರಾಟಕ್ಕೆ ಕರೆ ಕೊಡಲಿದೆ ಎಂದು ಎಚ್ಚರಿಸಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಯಾವ ಸಚಿವರಿಗೆ ಏನೆನ್ನಿಸುತ್ತದೋ ಅದನ್ನು ಕ್ಯಾಬಿನೆಟ್ನಲ್ಲಿ ಇಟ್ಟಾಗ ನಿರ್ಧರಿಸುತ್ತೀರಾ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ನಾಳೆ ವಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇರೆ ಇನ್ನೇನೋ ಹೆಸರಿಡಬೇಕು ಅನ್ನಿಸುತ್ತದೆ; ಶಿವಮೊಗ್ಗ ಜಿಲ್ಲೆಗೆ ಅಲ್ಲಿನ ಸಚಿವರು ಇನ್ನೇನೋ ಸಲಹೆ ಕೊಡುತ್ತಾರೆ. ಮಂತ್ರಿಗಳನ್ನು ಖುಷಿ ಪಡಿಸಲು ಹೆಸರು ಬದಲಿಸುವುದಾದರೆ ಅದಕ್ಕೇನು ಪಾವಿತ್ರ್ಯತೆ ಇದೆ ಎಂದು ಕೇಳಿದರು.
ರಾಜ್ಯ ಸರಕಾರಕ್ಕೆ ರಿಯಲ್ ಎಸ್ಟೇಟ್ ಒಂದೇ ಮಾನದಂಡವೇ ಎಂದರು. ರಿಯಲ್ ಎಸ್ಟೇಟ್ ಒಂದೇ ಮಾನದಂಡ ಎಂದುಕೊಂಡರೆ ಆ ಭಾಗದ ರೈತರ ಪರಿಸ್ಥಿತಿ ಏನಾದೀತು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಹಿಂದೆ ಮುಂದೆ ಆಲೋಚಿಸದೆ ಇಂಥ ನಿರ್ಧಾರ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮೈಸೂರು ಸ್ಯಾಂಡಲ್ ಸೋಪ್ ವಿಚಾರ ಹಗುರವಾಗಿ ತೆಗೆದುಕೊಳ್ಳುವ ವಿಷಯವಲ್ಲ; 1916ರಲ್ಲಿ ಮಹಾರಾಜರ ನಿರ್ಧಾರ ಇದರ ಹಿಂದಿದೆ. ರಾಜ್ಯ ಸರಕಾರ, ಯಾರೋ ಪರಿಣಿತರು ಹೇಳುತ್ತಾರೆಂದು 6.5 ಕೋಟಿ ಕೊಟ್ಟು ತಮನ್ನಾ ಭಾಟಿಯಾಗೆ ಬ್ರ್ಯಾಂಡ್ ಅಂಬಾಸಿಡರ್ ಮಾಡುವುದಾದರೆ ಸ್ವಲ್ಪವಾದರೂ ಸರಕಾರಕ್ಕೆ ಯೋಚನೆ ಬೇಡವೇ? ಎಂದರಲ್ಲದೆ, ಒಂದು ವರ್ಷಕ್ಕೆ 60 ಲಕ್ಷ ಲಾಭ ಮಾಡಲೂ ಸಾಧ್ಯವಾಗದು ಎಂದು ಸವಾಲು ಹಾಕಿದರು. ಇದರಲ್ಲಿ ರಾಜ್ಯದ ಹಿತಾಸಕ್ತಿ ಇದೆಯೇ? ರಾಜಕಾರಣಿಗಳ ಹಿತಾಸಕ್ತಿ ಇದೆಯೇ ಎಂದು ಕೇಳಿದರು.
ರಾಜ್ಯ ಸರಕಾರ ಹಣಕಾಸು ಕ್ರೋಡೀಕರಣದಲ್ಲಿ ಪರದಾಡುತ್ತಿದೆ. ದೇಶದ ಯಾವ ರಾಜ್ಯದಲ್ಲೂ ಇಲ್ಲದ ಎಕ್ಸೈಸ್ ನೀತಿ ಇಲ್ಲಿದೆ ಎಂದು ಟೀಕಿಸಿದರು. 200 ಶೇ, 250 ಶೇ ದರ ಏರಿಸಿದ್ದಾರೆ. ಇದರ ಪರಿಣಾಮ ಏನು? ಆದಾಯ ಹೆಚ್ಚಿಸಲು ಕುಡುಕರನ್ನು ಹೆಚ್ಚಿಸಲು ಸರಕಾರ ಹೊರಟಿದೆಯೇ ಎಂದರು.
ಮಂಡ್ಯದಲ್ಲಿ ಒಂದು ದುರ್ಘಟನೆ ನಡೆದಿದೆ. ಮಂಡ್ಯದಲ್ಲಿ ನಾಯಿ ಕಡಿದುದಕ್ಕೆ ಚಿಕಿತ್ಸೆಗೆ ಹೋಗುವಾಗ ಪೊಲೀಸರು ದ್ವಿಚಕ್ರ ವಾಹನ ತಡೆದಿದ್ದಾರೆ. ಕೀ ಕಿತ್ತುಕೊಳ್ಳುವಾಗ ಮಗು ಜಾರಿಬಿದ್ದು ಸತ್ತಿದೆ. ಯಾರು ಹೊಣೆಗಾರರು? ಪೊಲೀಸ್ ಟ್ರಾಫಿಕ್ ಇಲಾಖೆಗೂ ಟಾರ್ಗೆಟ್ ನೀಡಿದ್ದಾರೆ. ಅದರ ಪರಿಣಾಮವೇ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಇಂಥ ಅನಾಹುತಕ್ಕೆ ಯಾರು ಜವಾಬ್ದಾರಿ ಎಂದು ಕೇಳಿದರು.
ಕಾಂಗ್ರೆಸ್ ಸರಕಾರವು ವಿಪಕ್ಷಗಳ ಮೇಲೆ ಸವಾರಿ ಮಾಡುತ್ತಿದೆ. ನಾಯಕರ ಮೇಲೆ ಸವಾರಿ ನಡೆಸುತ್ತಿದ್ದಾರೆ. ವಿಪಕ್ಷಗಳ ಶಾಸಕರ ಮೇಲೆ ಕೇಸ್ ಹಾಕಿ ಬೆದರಿಕೆ ಹಾಕುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಜಿಲ್ಲಾಡಳಿತದ ವಿಫಲತೆ, ಪೊಲೀಸ್ ಇಲಾಖೆ ಕೈಗೊಂಬೆ ಆಗಿರುವುದು- ಈ ವಿಷಯಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡಿದ್ದೇವೆ. ಕೆಲ ವಿಷಯ ಮಾತನಾಡಿದ ರವಿಕುಮಾರ್ ಬಳಿಕ ಕ್ಷಮೆ ಕೇಳಿದ್ದಾರೆ. ಅವರ ವಿರುದ್ಧ ಥರ್ಡ್ ಪಾರ್ಟಿ ಮೂಲಕ ದೂರು ಕೊಡಿಸಿ ಎಫ್ಐಆರ್ ಹಾಕಿದ್ದಾರೆ. ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ಮಾಡಿದ್ದಾರೆ. ಹಿಂದೆ ಹರೀಶ್ ಪೂಂಜಾರ ವಿರುದ್ಧ ಎಫ್ಐಆರ್ ಮಾಡಿದ್ದರು. ಸದನದಿಂದ 18 ಶಾಸಕರನ್ನು ಅಮಾನತು ಮಾಡಿ ಮೊನ್ನೆ ಅದನ್ನು ವಾಪಸ್ ಪಡೆದಿದ್ದಾರೆ. ಸರಕಾರದ ಒತ್ತಡಕ್ಕೆ ಮಣಿದು ಇದಾಗಿತ್ತು. ವಿಪಕ್ಷವನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದರು.
‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರಕಾರ’ ಎಂಬ ಕರಪತ್ರವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಸರಕಾರದ ದುಡ್ಡನ್ನು ಪೋಲು ಮಾಡಿ, ಸಾಧನೆ ಕುರಿತು ಜಾತ್ರೆ ಮಾಡಲು ಕಾಂಗ್ರೆಸ್ ಸರಕಾರ ಹೊರಟಿತ್ತು. ಈ ಸರಕಾರ ಕಳೆದ 2 ವರ್ಷಗಳಲ್ಲಿ ಮಾಡಿದ ಭ್ರಷ್ಟಾಚಾರ, ಬೆಲೆ ಏರಿಕೆ, ವಸೂಲಿ- ಇದೆಲ್ಲದರ ಪರಿಣಾಮವಾಗಿ ಜನರ ಶಾಪಕ್ಕೆ ಗುರಿಯಾಗಿದೆ., ಸರಕಾರದ ವೈಫಲ್ಯಗಳನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಲು ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದೆವು. ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಮಾನ ನಷ್ಟವಾದರೆ ಮೊಕದ್ದಮೆ ಹಾಕಬೇಕಲ್ಲವೇ ಎಂದು ಕೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಷ್ಟು ಹಣ ಕೊಟ್ಟಿದ್ದೀರಿ? ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಮಳೆ, ಬಿತ್ತನೆ ಬೀಜ, ರೈತರ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿಲ್ಲ; ಸರಕಾರಕ್ಕೆ ಕಾಳಜಿಯೂ ಇಲ್ಲ ಎಂದು ದೂರಿದರು. ಕೇಂದ್ರದ ಮೇಲೆ ಆರೋಪ- ಸಂಘರ್ಷದ ಹಾದಿಯನ್ನು ಬದಿಗಿಡಿ. ರಾಜ್ಯದ ಅಭಿವೃದ್ಧಿ, ರಾಜ್ಯದ ಬಡವರ, ದೀನದಲಿತರ, ರೈತರ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಒತ್ತಾಯಿಸಿದರು. ಮಾನನಷ್ಟ ಮೊಕದ್ದಮೆ ಎದುರಿಸಲು ಸಿದ್ಧ ಎಂದ ಅವರು, ರಾಜ್ಯದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಮಾಜಿ ಶಾಸಕ ವೈ. ಸಂಪಂಗಿ, ಶಾಸಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.