ನವದೆಹಲಿ: ದಾದ್ರಿಯಲ್ಲಿ ನಡೆದ ಹತ್ಯಾ ಘಟನೆಯನ್ನು ಖಂಡಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಇದನ್ನು ವಿರೋಧಿಸಿ ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವ ಸಾಹಿತಿಗಳ ವಿರುದ್ಧವೂ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಜೇಟ್ಲಿ, ದೇಶದಲ್ಲಿ ಅಶಾಂತಿ ತಲೆದೋರಿದೆ ಎನ್ನುತ್ತಾ ಸಾಹಿತಿಗಳು ಸೃಷ್ಟೀಕೃತ ಬಂಡಾಯವನ್ನು ತೋರಿಸುತ್ತಿದ್ದಾರೆ, ಹಿಂದಿನ ಸರ್ಕಾರದಿಂದ ಪುರಸ್ಕರಿಸಲ್ಪಟ್ಟ ಎಡ ಮತ್ತು ನೆಹರೂ ವಾದದ ಸಾಹಿತಿಗಳು ನರೇಂದ್ರ ಮೋದಿ ಸರ್ಕಾರವನ್ನು ಸಹಿಸಲಾಗದೆ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ ಎಂದಿದ್ದಾರೆ.
ಮೇ 2014ರಂದು ಮೋದಿ ಸರ್ಕಾರ ರಚನೆಯಾದ ಬಳಿಕ ಹಿಂದಿನ ಸರ್ಕಾರದಿಂದ ಪೋಷಣೆ ಪಡೆದ ಹಲವು ಸಾಹಿತಿಗಳು ಅಸ್ಥಿರ ಭಾವವನ್ನು ತಳೆದರು, ಅದೇ ಅಸ್ಥಿರ ಭಾವನೆ ಇದೀಗ ಮತ್ತೊಂದು ರಾಜಕೀಯ ವಾಸ್ತವತೆಯನ್ನು ಪ್ರದರ್ಶಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಪುನಶ್ಚೇತನದ ಯಾವುದೇ ಸೂಚನೆಯನ್ನು ತೋರಿಸುತ್ತಿಲ್ಲ, ಎಡ ಪಕ್ಷ ಪ್ರಾಮುಖ್ಯತೆಯನ್ನೇ ಕಳೆದುಕೊಂಡಿದೆ, ಹೀಗಾಗಿ ಇದೀಗ ಹಿಂದೆ ಪುರಸ್ಕಾರ ಪಡೆದವರು ಇನ್ನೊಂದು ತರನಾದ ರಾಜಕೀಯ ಮಾಡಲಾರಂಭಿಸಿದ್ದಾರೆ ಎಂದಿದ್ದಾರೆ.
ದಾದ್ರಿ ಘಟನೆ ಸಮಾಜವಾದಿ ಆಳುತ್ತಿರುವ ಉತ್ತರಪ್ರದೇಶದಲ್ಲಿ ನಡೆದಿದೆ. ಸಾಹಿತಿ ಕಲಬುರ್ಗಿಯವರ ಹತ್ಯೆ ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದಿದೆ. ಎನ್.ಧಬೋಲ್ಕರ್ ಅವರ ಹತ್ಯೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತವಿರುವ ಸಂದರ್ಭ ನಡೆದಿದೆ. ಮೋದಿ ಸರ್ಕಾರ ಬಂದ ಮೇಲೆ ಹಲವಾರು ಚರ್ಚ್ಗಳ ಮೇಲೆ ದಾಳಿ ನಡೆಯಿತು ಎಂದು ಪತ್ರಿಕೆಗಳು ವರದಿ ಮಾಡಿದವು. ಅವೆಲ್ಲವೂ ಬಳಿಕ ಅಪರಾಧ ಕೃತ್ಯಗಳು ಎಂಬುದು ಸಾಬೀತಾಯಿತು. ಹೀಗಾಗಿ ಏನೂ ಮಾತನಾಡಲು ಸಿಗದವರು ಈಗ ಕಲಬುರ್ಗಿ ಹತ್ಯೆ ಮುಂದಿಟ್ಟುಕೊಂಡು ಬಂಡಾಯವೇಳುತ್ತಿದ್ದಾರೆ.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ, 1984ರ ಸಿಖ್ ಹತ್ಯೆ ನಡೆದ ಸಂದರ್ಭದಲ್ಲಿ, ಭಗಲ್ಪುರ್ ದಂಗೆ ನಡೆದ ಸಂದರ್ಭದಲ್ಲಿ, ಯುಪಿಎ ಆಡಳಿತದಲ್ಲಿ ಸಾವಿರಾರು ಕೋಟಿ ಹಗರಣ ನಡೆದ ಸಂದರ್ಭದಲ್ಲಿ ಇವರಲ್ಲಿ ಎಷು ಮಂದಿ ಬಂಡಾಯವೆದ್ದಿದ್ದರು, ಪ್ರತಿಭಟನೆ ವ್ಯಕ್ತಪಡಿಸಿದ್ದರು ಎಂದು ಅವರು ಸಾಹಿತಿಗಳನ್ನು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.