ಬೆಳ್ತಂಗಡಿ : ಬುದ್ದಿ ಜೀವಿಗಳು ಮತ್ತು ವಿಚಾರವಾದಿಗಳೆನಿಸಿಕೊಂಡವರು ಧರ್ಮದ್ರೋಹ ಮಾಡುವುದನ್ನು ನಿಲ್ಲಿಸಿ ಎಂದು ಹಿಂದೂ ಸಂಘಟನೆಗಳ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಎಚ್ಚರಿಸಿದ್ದಾರೆ.ಅವರು ಮಂಗಳವಾರ ಧರ್ಮ ರಕ್ಷಾ ಸಮಿತಿ, ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಧರ್ಮಜಾಗರಣ, ಹಿಂದು ಜನಜಾಗೃತಿ ಸಮಿತಿಯ ಕಾರ್ಯಕರ್ತರು ಬೆಳ್ತಂಗಡಿ ಅಂಬೇಡ್ಕರ ಭವನದ ಬಳಿ ಸಭೆ ಸೇರಿ ಬಳಿಕ ಮೆರವಣಿಗೆಯ ಮೂಲಕ ಬಂದು ತಾಲೂಕು ಕಚೇರಿಯ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು.
ಮೂಡುಬಿದರೆಯ ಪ್ರಶಾಂತ ಹತ್ಯೆ ಹಿಂದೆ ಮತೀಯವಾದಿಗಳ ಕೈವಾಡವಿರುವುದು ಗೋಚರಿಸುತ್ತಿದ್ದರೂ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಾಹಿತಿ ಕಲಬುರ್ಗಿ ಹತ್ಯೆ ಮಾಡಿದವರನ್ನು ಬಂಧಿಸುವುದು ಬಿಟ್ಟು ಸನಾತನ ಸಂಸ್ಥೆಯ ಸಾಧಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಕಾರಣದಿಂದ ಸನಾತನ ಸಂಸ್ಥೆಯನ್ನು ನಿಷೇಧಿಸಲು ಹೊರಟಿದ್ದಾರೆ. ಹಿಂದೂ ಪರ ಸಂಘಟನೆಗಳ ಮೇಲೆ ನಿರಾಂತಕವಾಗಿ ಆರೋಪ ಹೋರಿಸಲಾಗುತ್ತಿದೆ ಎಂದರು.
ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು, ಕಳೆದ ಎರಡು ಮೂರು ವರ್ಷಗಳಿಂದ ವಿನಾಕಾರಣ ಹಿಂದೂ ಸಂಘಟನೆಗಳ ಮೇಲೆ ಆರೋಪಗಳನ್ನು ಹೊರಿಸಲಾಗುತ್ತಿದೆ. ಆರೋಪಗಳು ಮಿತಿ ಮೀರುತ್ತಲಿದ್ದು ಇನ್ನು ಸಹಿಸಲು ಸಾಧ್ಯವಿಲ್ಲ. ದುಷ್ಕರ್ಮಿಗಳ ಎಂಜಲು ಹಣವನ್ನು ತಿಂದು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸರಿಯಲ್ಲ. ಎಲ್ಲದಕ್ಕೂ ಪರಿಹಾರ ನೀಡುವವರು ಪ್ರಶಾಂತ ಪೂಜಾರಿ ಅವರ ಹತ್ಯೆಯಲ್ಲಿ ಸರಕಾರ ಎಳ್ಳಷ್ಟು ಗಮನ ಹರಿಸಲಿಲ್ಲ. ಅವರ ಕುಟುಂಬಕ್ಕೆ ಶೀಘ್ರವಾಗಿ ರೂ. ೨೫ ಲಕ್ಷ ಪರಿಹಾರ ನೀಡಬೇಕು ಮತ್ತು ಸನಾತನ ಸಂಸ್ಥೆಯನ್ನು ನಿಷೇಧಿಸುವ ಚಿಂತನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ ವಿಜಯಕುಮಾರ್ ಅವರು, ಯಾವುದೋ ಕ್ಷುಲ್ಲುಕ ವಿಚಾರವನ್ನಿಟ್ಟುಕೊಂಡು ಸನಾತನ ಸಂಸ್ಥೆಯನ್ನು ನಿಷೇಧ ಮಾಡಲು ಹೊರಟಿರುವುದು ಖಂಡನೀಯ. ಈ ಬಗ್ಗೆ ಕಾನೂನು ಹೋರಾಟವನ್ನು ಮಾಡುತ್ತೇವೆ. ನಿಷೇಧ ಮಾಡುತ್ತೇವೆ ಎಂದು ಹೊರಟರೆ ತೀವ್ರವಾದ ಪ್ರತಿಭಟನೆ ಮಾಡಲು ಸಿದ್ದರಿದ್ದೇವೆ. ಕೇಂದ್ರ ಸರಕಾರದ ಗೃಹ ಸಚಿವರಿಗೆ ಮನವಿ ನೀಡಲಾಗುವುದು ಎಂದರು.
ಧರ್ಮ ಜಾಗರಣ ವಿಭಾಗ ಸಂಚಾಲಕ ದಿನಕರ ಅದೇಲು, ಬಜರಂಗದಳ ಜಿಲ್ಲಾ ಸಂಯೋಜಕ ಭಾಸ್ಕರ ಧರ್ಮಸ್ಥ್ತಳ, ಧರ್ಮ ರಕ್ಷಾ ಸಮಿತಿ ಕಾನರ್ಪ ಇದರ ಸಂಯೋಜಕ ಜಯರಾಜ್ ಸಾಲಿಯಾನ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ವಿಹಿಂಪದ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ತಾರಾನಾಥ, ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ತಾಲೂಕು ಸಂಚಾಲಕ ದಿನೇಶ್ ಮುಗುಳಿ, ಸಹ ಸಂಚಾಲಕ ರಮೇಶ್, ಜಿಲ್ಲಾ ಗೋರಕ್ಷಾ ಪ್ರಮುಖ್ ಶ್ರೀನಿವಾಸ್, ವಕೀಲರಾದ ವಸಂತ ಮರಕಡ, ಉದಯ ಬಂದಾರು, ಹಿಂದೂ ಮುಖಂಡರಾದ ಪದ್ಮನಾಭ ಶೆಟ್ಟಿಗಾರ್, ಉಮೇಶ್ ಕುಲಾಲ್ ನೇತೃತ್ವ ವಹಿಸಿದ್ದರು.
ಈ ಸಂದರ್ಭ ತಹಸೀಲ್ದಾರರ ಮೂಲಕ ಕೇಂದ್ರ ಗೃಹಸಚಿವರಿಗೆ ಸನಾತನ ಸಂಸ್ಥೆಯನ್ನು ನಿಷೇಧಿಸುವುದನ್ನು ವಿರೋಧಿಸಿ ಹಾಗು ರಾಜ್ಯದ ರಾಜ್ಯಪಾಲರಿಗೆ ಮೂಡುಬಿದರೆಯಲ್ಲಿ ಪ್ರಶಾಂತ ಹತ್ಯೆ ಮಾಡಿದವರುನ್ನು ಬಂಧಿಸುವಂತೆ ಮನವಿಗಳನ್ನು ಸಲ್ಲಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.