ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯನ್ನು ಬಿಜೆಪಿ ವಿರೋಧಿಸಲಿದೆ; ಇದರ ಸಂಬಂಧ ಅಗತ್ಯ ಹೋರಾಟಗಳನ್ನೂ ನಡೆಸಲಿದೆ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯನ್ನು ಕೂಡಲೇ ಮಾಡಬೇಕೆಂದು ಅವರು ಇದೇವೇಳೆ ಆಗ್ರಹಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಬೆಂಗಳೂರಿನ ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ನಿಮ್ಮ ಬೆಂಗಳೂರು ನಮ್ಮ ಕೊಡುಗೆ ಎಂದೇ ಜಾಹೀರಾತಿನಲ್ಲಿ ಹಾಕುತ್ತಾರೆ. ಅವರಿಗೆ ನಮ್ಮ ಬೆಂಗಳೂರು ಎನ್ನಲು ಇಷ್ಟವಿಲ್ಲ. ಬೆಂಗಳೂರಿನಿಂದ ಬರುವ ಆದಾಯ ಮಾತ್ರ ಬೇಕು ಎಂದು ಟೀಕಿಸಿದರು. ಈಗ ಆಕ್ಟ್ರಾಯ್ ಇಲ್ಲ. ಮುಂಬೈ ಮುನಿಸಪಲ್ ಕಾರ್ಪೊರೇಷನ್ಗೆ 25 ಸಾವಿರ ಕೋಟಿ ವರ್ಷಕ್ಕೆ ಹಣ ಬರುತ್ತದೆ. ಅವರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮಾಡುತ್ತಾರೆ. ಬಿಬಿಎಂಪಿ ಮೂಲಕ ಸಂಗ್ರಹಿಸಿದ ಹಣದ ಶೇ 10 ಕೊಟ್ಟರೆ ಸಾಕು; ಒಂದೇ ಒಂದು ರೂಪಾಯಿ ಬರುವುದಿಲ್ಲ. ಪ್ರತಿಬಾರಿ ಸರಕಾರಕ್ಕೆ ಹೋಗಿ ಅನುದಾನ ಕೇಳಬೇಕಿದೆ. ಅವರು ಕೊಟ್ಟಾಗ ಭಿಕ್ಷೆಯಂತೆ ಪಡೆದು ಕೆಲಸ ಮಾಡಬೇಕಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಬಿಎಂಪಿ ಚುನಾವಣೆ ಮುಂದೂಡಲು ರಾಜ್ಯ ಸರಕಾರವು ಅಫಿಡವಿಟ್ ಹಾಕಲು ಮುಂದಾಗಿದೆ ಎಂದು ಅವರು ಆರೋಪಿಸಿದರು. ಗ್ರೇಟರ್ ಬೆಂಗಳೂರು ರಚನೆಗೆ ಮಸೂದೆ ಮಾಡಿ ಅದನ್ನು ಮಂಜೂರು ಮಾಡಲು ಚರ್ಚೆ ಆರಂಭಿಸಿದ್ದಾರೆ ಎಂದ ಅವರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಶೇಷ ಇತಿಹಾಸವುಳ್ಳದ್ದು. 1949ರಲ್ಲಿ ಬಿಸಿಸಿ ಅಸ್ತಿತ್ವಕ್ಕೆ ಬಂತು. ಅದಾದ ಬಳಿಕ 1996ರಲ್ಲಿ 87 ಡಿವಿಜನ್ ಇದ್ದ ಬಿಸಿಸಿಯನ್ನು ಮೇಲ್ದರ್ಜೆಗೆ ಏರಿಸಿದ ದೇವೇಗೌಡರು, 100 ವಾರ್ಡ್ ಮಾಡಿದ್ದರು ಎಂದು ವಿವರಿಸಿದರು.
2007ರಲ್ಲಿ ನಮ್ಮ ಸಮ್ಮಿಶ್ರ ಸರಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು 7 ಸಿಎಂಸಿ, 1 ಟಿಎಂಸಿ, 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿ 198 ವಾರ್ಡ್ ರಚಿಸಿದ್ದರು ಎಂದು ತಿಳಿಸಿದರು. 2 ಚುನಾವಣೆಗಳೂ ನಡೆದವು ಎಂದರು.
ಬಿಬಿಎಂಪಿಗೆ ಶಾಪದ ರೂಪದಲ್ಲಿ ಆಡಳಿತಾಧಿಕಾರಿ ಬರುತ್ತಾರೆ. ಮುಂದಿನ ಚುನಾವಣೆಗೆ ಕಾನೂನಾತ್ಮಕ ಹೋರಾಟ ಅನಿವಾರ್ಯವಾಗಿದೆ. ಕಾಂಗ್ರೆಸ್ಸಿನವರು ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಅಧಿಕಾರ- ಒತ್ತು ಕೊಡಬೇಕೆನ್ನುತ್ತಾರೆ. ಗ್ರೇಟರ್ ಬೆಂಗಳೂರು ಅಥಾರಿಟಿ ಸಮಿತಿಯಲ್ಲಿ ಮುಖ್ಯಮಂತ್ರಿಗಳು ಚೇರ್ ಪರ್ಸನ್. ಜಿಲ್ಲಾ ಉಸ್ತುವಾರಿ ಸಚಿವರು ವೈಸ್ ಚೇರ್ಮನ್. ಕಮಿಷನರ್ ಕಾರ್ಯದರ್ಶಿ. ಹಲವಾರು ಸಚಿವರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ನಮ್ಮ ಶಾಸಕರು, ಸಂಸದರನ್ನೂ ಸದಸ್ಯರನ್ನಾಗಿ ಸೇರಿಸಿದ್ದಾರೆ. ಸಂವಿಧಾನದ ಬಗ್ಗೆ ಸದಾ ಮಾತನಾಡುವವರು ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಎಂಎಲ್ಎ, ಎಂಪಿ, ಕಾರ್ಪೊರೇಟರ್ಗಳಿಗೆ ಮತದಾನದ ಹಕ್ಕು ಕೊಟ್ಟಿಲ್ಲ; ಇದು ನಮ್ಮ ಸಂವಿಧಾನದ ವಿರುದ್ಧ; 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ಈ ಸಮಿತಿಗೆ ಮಾಜಿ ಮೇಯರ್, ಮಾಜಿ ಡೆಪ್ಯುಟಿ ಮೇಯರ್, ಬಿಬಿಎಂಪಿಯ ಮಾಜಿ ಸದಸ್ಯರನ್ನು ಸೇರಿಸಿಲ್ಲ; ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಸಿದ್ದರಾಮಯ್ಯನವರು 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮೆಟ್ರೊಪಾಲಿಟನ್ ಪ್ಲಾನಿಂಗ್ ಕಮಿಷನ್ ಮಾಡಿದ್ದರು. ಗ್ರೇಟರ್ ಬೆಂಗಳೂರು ಅಥಾರಿಟಿ ಸಮಿತಿಯಲ್ಲಿ ಇದ್ದವರೆಲ್ಲರೂ ಅದರಲ್ಲಿ ಸದಸ್ಯರಾಗಿದ್ದರು. ಮುಖ್ಯಮಂತ್ರಿಯೇ ಚೇರ್ ಪರ್ಸನ್ ಅಗಿದ್ದರು. ಅದು ಅಸ್ತಿತ್ವಕ್ಕೆ ಬಂದಾಗಿನಿಂದ ಇಂದಿನವರೆಗೆ ಒಂದು ಸಭೆಯನ್ನೂ ಮಾಡಿಲ್ಲ ಎಂದು ದೂರಿದರು.
ಅದನ್ನೇ ಮೆಲುಕು ಹಾಕಿ ಹೆಸರು ಬದಲಿಸಿ; ಗ್ರೇಟರ್ ಬೆಂಗಳೂರು ಅಥಾರಿಟಿ ಮಸೂದೆ ತರುತ್ತಿದ್ದಾರೆ. ಸಭೆ ನಡೆಸಲು ಸಿಎಂಗೆ ಪುರುಸೊತ್ತಿಲ್ಲ; ಅವರು ಮಾಡಲಾಗುವುದಿಲ್ಲ. ಇದೂ ಅದೇ ಆಗಲಿದೆ ಎಂದರಲ್ಲದೆ, 2020ರಲ್ಲಿ ಬಿಬಿಎಂಪಿ ಆಕ್ಟ್ ಮಾಡಿದ್ದರು. ಅದಕ್ಕೂ ಇದೇರೀತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಸಭೆಗಳೂ ನಡೆದಿದ್ದವು. 243 ವಾರ್ಡ್ ರಚಿಸಿದ್ದರು. ಅದನ್ನೂ ಒಂದೇ ಬೆಂಗಳೂರು ಕಲ್ಪನೆ ಇಟ್ಟುಕೊಂಡು ಮಾಡಿದ್ದರು ಎಂದು ತಿಳಿಸಿದರು.
ಬಿಬಿಎಂಪಿ ಆಕ್ಟ್ ಅಡಿಯಲ್ಲಿ ಒಂದು ಚುನಾವಣೆಯೂ ನಡೆದಿಲ್ಲ; ಕೋಟ್ಯಂತರ ರೂ. ದುಡ್ಡು ಖರ್ಚು ಮಾಡಿದ ಮೇಲೆ ಎಲ್ಲ ಬೋರ್ಡ್ ಬದಲಿಸಿದ್ದರು. ಕಾಂಗ್ರೆಸ್ ಸರಕಾರ ಇನ್ನೊಂದು ಡಿ ಲಿಮಿಟೇಶನ್ ಮಾಡಿದೆ. 225 ವಾರ್ಡ್ ಮಾಡಿದೆ. ಎಲ್ಲ ಬೋರ್ಡಿನಲ್ಲಿ ಹೊಸ ನಂಬರ್ ಬರೆಸಿದೆ ಎಂದು ಆಕ್ಷೇಪಿಸಿದರು.
ಬೆಂಗಳೂರಿನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆಯೇ? ಬೋರ್ಡ್ ಬದಲಿಸಿದರೂ ಆಡಳಿತದಲ್ಲಿ ಸುಧಾರಣೆ ಆಗಿಲ್ಲ ಎಂದ ಅವರು, ಬೆಂಗಳೂರಿನಲ್ಲಿ ಒಂದು ಕೋಟಿ ಜನಸಂಖ್ಯೆ ಇದೆ. ಟ್ರಾಫಿಕ್ ಸಮಸ್ಯೆ ಇದೆ. ಬೆಂಗಳೂರಿನಲ್ಲಿ 198 ವಾರ್ಡ್ಗಳಿಗೆ ಎ.ಇ. ಗಳಿಲ್ಲ. ಎ.ಇ.ಇ. ಗಳೂ ಇಲ್ಲ; ಎಷ್ಟೋ ವಲಯದಲ್ಲಿ ಎ.ಇ.ಇ. ಚೀಫ್ ಎಂಜಿನಿಯರ್ ಆಗಿದ್ದಾರೆ. ಎ.ಇ.ಇ., ಎಕ್ಸಿಕ್ಯೂಟಿವ್ ಎಂಜಿನಿಯರ್ ಇನ್ಚಾರ್ಜ್, ಅವನೇ ಸೂಪರಿಂಟೆಂಡೆಂಟ್ ಎಂಜಿನಿಯರ್ ಇನ್ಚಾರ್ಜ್ ಆಗಿದ್ದಾನೆ. ಚೀಫ್ ಇಂಜಿನಿಯರ್ ಇನ್ಚಾರ್ಜ್ ಅವನೇ ಇದ್ದಾನೆ ಎಂದು ತಿಳಿಸಿದರು.
ಯಾವ ಕಾರ್ಪೊರೇಷನ್ಗೆ ಎಷ್ಟು ಅನುದಾನ? ಈ ಕಾಮಗಾರಿ ಅನುಷ್ಠಾನ ಮಾಡಬೇಕೇ ಬೇಡವೇ? ಎಂಬುದನ್ನು ಅಥಾರಿಟಿ ನಿರ್ಧರಿಸಲಿದೆ. ಇದರ ಮೇಲೆ ಇನ್ನೊಂದು ಕಮಿಟಿ ಇರುತ್ತದೆ. ಈ ಕಮಿಟಿಗಳು ಕುಳಿತಿರಲು ನಮ್ಮ ಬಳಿ ಕಚೇರಿಗಳು ಬೇಕಲ್ಲವೇ ಎಂದು ತಿಳಿಸಿದರು.
5 ಪಾಲಿಕೆ ಮಾಡಿದರೆ ಒಂದು ಸಭೆ ನಡೆಸಲು ನಮ್ಮ ಬಳಿ ಕಚೇರಿ ಇರಬೇಕಲ್ಲವೇ? ಇದು ಒಳ್ಳೆಯದು ಮಾಡುವ ಉದ್ದೇಶದ್ದಲ್ಲ; ಇದೆಲ್ಲವೂ ಚುನಾವಣೆ ಮುಂದೂಡುವ ಪ್ರಯತ್ನ ಎಂದು ಆರೋಪಿಸಿದರು.
ಹಲವಾರು ವರ್ಷ ಕಳೆದರೂ ಇರುವ 110 ಹಳ್ಳಿಗೇ ಕುಡಿಯುವ ನೀರು ಕೊಡಲು ಆಗಿಲ್ಲ; ಮೂಲಭೂತ ಸೌಕರ್ಯ ಕೊಡಲು ಸಾಧ್ಯವಾಗಿಲ್ಲ. ನಾವು ಮುಂದೆ ಹೋದರೆ ರಿಯಲ್ ಎಸ್ಟೇಟ್ನವರಿಗೆ ರಸ್ತೆ, ಒಳಚರಂಡಿ, ಬೀದಿದೀಪ ಸೌಕರ್ಯ ಮಾಡಿಕೊಡಬೇಕಿದೆ. ಮಹದೇವಪುರದಂಥ ಪ್ರದೇಶದ ನಿಯತ್ತಾಗಿ ತೆರಿಗೆ ಕಟ್ಟುವವರಿಂದ ಎಲ್ಲೋ ಒಂದು ರೂ. ಬಾರದ ಜಾಗಕ್ಕೆ ಹಾಕಿದರೆ ಮಹದೇವಪುರದವರ ತೆರಿಗೆಗೆ ಏನು ಬೆಲೆ ಇದೆ ಎಂದು ಕೇಳಿದರು.
ಮಾಜಿ ಜಿಲ್ಲಾಧ್ಯಕ್ಷ ಸದಾಶಿವ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.