ಬೆಂಗಳೂರು: ಮಧ್ಯಮ ವರ್ಗ ಸೇರಿದಂತೆ ಎಲ್ಲ ಕ್ಷೇತ್ರದ ಜನರಿಗೆ ಅನುದಾನ ನೀಡಿದ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಈ ಬಜೆಟ್ನಿಂದ ಪ್ರತಿಯೊಬ್ಬ ಪ್ರಜೆಗೂ ಸಹಾಯ ಸಿಗಲಿದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಜಿ.ಎಸ್. ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಅವರು 8ನೇ ಕೇಂದ್ರ ಬಜೆಟ್ ಮಂಡಿಸಿದರು. ಸರ್ವಸಾಮಾನ್ಯವಾಗಿ ಕೃಷಿ, ಎಂಎಸ್ಎಂಇ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಉತ್ಪಾದನಾ ಕ್ಷೇತ್ರ, ಸಂಶೋಧನೆ, ರಫ್ತು, ಎಫ್ಡಿಐ ಸೇರಿ ಪ್ರತಿಯೊಂದು ಕ್ಷೇತ್ರಕ್ಕೂ ಎಲ್ಲ ರಾಜ್ಯಗಳಿಗೂ ಅನುದಾನ ಕೊಡಲಾಗಿದೆ ಎಂದು ವಿವರಿಸಿದರು.
ಕೃಷಿಗೆ 1,37,757 ಕೋಟಿ ಮೊತ್ತ ಮೀಸಲಿಟ್ಟಿದ್ದು, ಕರ್ನಾಟಕವೂ ಸೇರಿ ದೇಶದ 7.7 ಕೋಟಿ ಜನ ರೈತರಿಗೆ ಕಿಸಾನ್ ಕಾರ್ಡಿನಿಂದ ಪ್ರಯೋಜನ ಸಿಗಲಿದೆ. ಇದರ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆಯಡಿ ಎಲ್ಲ ರಾಜ್ಯಗಳ ಜೊತೆ ಭಾಗೀದಾರಿಕೆಯಲ್ಲಿ 100 ಜಿಲ್ಲೆಗಳಲ್ಲಿ 2 ಕೋಟಿ ರೈತರಿಗೆ ಅನುದಾನ ಸಿಗಲಿದೆ ಎಂದರು.
ಸಾಲ ಪಡೆಯುವವರಿಗೆ ನೆರವಾಗುವ ಸಿಬಿಲ್ ಸ್ಕೋರ್ ಮಾದರಿಯಲ್ಲಿ ಗ್ರಾಮೀಣ ಕ್ರೆಡಿಟ್ ಸ್ಕೋರ್ ಆರಂಭಿಸಿದ್ದು, ಸ್ವಸಹಾಯ ಸಂಘÀಗಳಿಗೆ ಪ್ರಯೋಜನ ಆಗುವಂತೆ ಮಾಡಿದ್ದಾರೆ. ಎಂಎಸ್ಎಂಇ ಮಿತಿಯನ್ನು 1 ಕೋಟಿಯಿಂದ 2.5 ಕೋಟಿಗೆ ಹೆಚ್ಚಿಸಿ ಮೈಕ್ರೋ ವ್ಯಾಪ್ತಿಯಡಿ ತಂದಿದ್ದಾರೆ. 25 ಕೋಟಿ ವ್ಯವಹಾರ ಇರುವವರನ್ನು ಸಣ್ಣ ಉದ್ಯಮವಾಗಿ, 125 ಕೋಟಿ ವ್ಯವಹಾರ ಇರುವವರನ್ನು ಮಧ್ಯಮ ಗಾತ್ರದ ಉದ್ಯಮ ಎಂದು ಪರಿಗಣಿಸಲು ಮುಂದಾಗಿದ್ದಾರೆ. ಸಾಲದ ಮಿತಿಯನ್ನೂ ಹೆಚ್ಚಿಸಿದ್ದಾರೆ. ಇದರಿಂದ ಗರಿಷ್ಠ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.
ಮೊದಲ ಬಾರಿ ಉದ್ಯಮಿಗಳಾಗುವ ಅದರಲ್ಲೂ ವಿಶೇಷವಾಗಿ 5 ಲಕ್ಷ ಮಹಿಳೆಯರಿಗೆ, ಅದರಲ್ಲೂ ಎಸ್ಸಿಎಸ್ಟಿ ಮಹಿಳೆಯರಿಗೆ 2 ಕೋಟಿ ರೂ. ಸಾಲ ಮುಂದಿನ 5 ವರ್ಷ ಲಭಿಸಲಿದೆ. ಶಿಕ್ಷಣ ಕ್ಷೇತ್ರದಡಿ ಈ ವರ್ಷ 10 ಸಾವಿರಕ್ಕಿಂತ ಹೆಚ್ಚು ವೈದ್ಯಕೀಯ ಸೀಟುಗಳು ಸೇರ್ಪಡೆ ಆಗಲಿವೆ. 75 ಸಾವಿರ ಸೀಟುಗಳು ಮುಂದಿನ 5 ವರ್ಷಗಳಲ್ಲಿ ಸೇರಲಿವೆ ಎಂದು ಹೇಳಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೆಂಟರ್ ಸ್ಥಾಪನೆಗೆ 500 ಕೋಟಿ ಮೀಸಲಿಟ್ಟಿದ್ದಾರೆ. ಕರ್ನಾಟಕವೂ ಸೇರಿ ದೇಶಾದ್ಯಂತ ಪ್ರತಿಯೊಂದು ಶಾಲೆಗೂ ಬ್ರಾಡ್ಬ್ಯಾಂಡ್ ಸಂಪರ್ಕ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೋಂ ಸ್ಟೇಗಳನ್ನು ಮುದ್ರಾ ಯೋಜನೆಯಡಿ ತಂದು ಮುದ್ರಾ ಸಾಲ ಕೊಡಲಿದ್ದಾರೆ. ಉಡಾಣ್ ಯೋಜನೆಯಡಿ 120 ಕಡೆ ವಿಮಾನನಿಲ್ದಾಣ (ಏರ್ ಫೆಸಿಲಿಟಿ) ಸಿಗಲಿದೆ ಎಂದು ಮಾಹಿತಿ ನೀಡಿದರು. 4 ಕೋಟಿಗಿಂತ ಹೆಚ್ಚು ಜನರಿಗೆ ಪ್ರಯೋಜನ ಲಭಿಸಲಿದೆ ಎಂದರು.
50 ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿ ನಡೆಯಲಿದೆ. ಅರ್ಬನ್ ಚಾಲೆಂಜ್ ಫಂಡಿನಡಿ 1 ಲಕ್ಷ ಕೋಟಿ ಬಜೆಟ್ ಮೊತ್ತ ಇದೆ. 2025-26ಕ್ಕೆ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಸ್ವಾಮಿ ಫಂಡಿನಡಿ 1 ಲಕ್ಷ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಸಂಶೋಧನೆ, ಇನೊವೇಶನ್, ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರಧಾನಮಂತ್ರಿ ರಿಸರ್ಚ್ ಫೆಲೋಶಿಪ್ ಯೋಜನೆಯಡಿ 10 ಸಾವಿರ ಮಕ್ಕಳಿಗೆ ಐಐಟಿ, ಐಐಎಸ್ಸಿನಡಿ ಸಂಶೋಧನೆಗೆ ಅವಕಾಶ ಕೊಡುತ್ತಿದ್ದಾರೆ. 20 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ನುಡಿದರು.
ಕೃಷಿ ವಿಕಾಸ್ ಯೋಜನೆಗೆ 8,500 ಕೋಟಿ, ಸಮಗ್ರ ಶಿಕ್ಷಾ ಯೋಜನೆಗೆ 41,250 ಕೋಟಿ, ಮತ್ಸ್ಯ ಸಂಪದಕ್ಕೆ 2,465 ಕೋಟಿ, ಆಯುಷ್ಮಾನ್ ಭಾರತ್- 4200 ಕೋಟಿ, ಆವಾಸ್ ಯೋಜನೆಗೆ 19,794 ಕೋಟಿ, ವಿಶೇಷವಾಗಿ ರೈಲ್ವೆಸ್ಗೆ ಹೊಸ ಲೈನ್ಗಳಿಗೆ 32,235 ಕೋಟಿ ನೀಡಿದ್ದು, ಅದರಲ್ಲಿ ಕರ್ನಾಟಕಕ್ಕೆ 7564 ಕೋಟಿ ಸಿಕ್ಕಿದೆ ಎಂದು ತಿಳಿಸಿದರು.
ಹೊಸ ಉದ್ಯೋಗ ಸೃಷ್ಟಿಗೆ 20 ಸಾವಿರ ಕೋಟಿ ಮೀಸಲಿಟ್ಟಿದ್ದು, ಇದರಿಂದ ಯುವಜನರಿಗೆ ಉದ್ಯೋಗ ಲಭಿಸಲಿದೆ ಎಂದರು. ರಾಜ್ಯ ವಕ್ತಾರ ಮೋಹನ್ ವಿಶ್ವ ಅವರು ಮಾತನಾಡಿ, ತೆರಿಗೆ ಮಿತಿ 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಳವಾಗಿದ್ದು, ಅದರ ಬಗ್ಗೆಯೂ ಕಾಂಗ್ರೆಸ್ ಪಕ್ಷವು ಅಪಪ್ರಚಾರ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುಳ್ಳನ್ನು ನಿಜ ಮಾಡುವ ಕೆಲಸಕ್ಕೆ ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ವೇತನ ಮೊತ್ತ 12.75 ಲಕ್ಷ ಇದ್ದರೆ ಒಂದು ರೂಪಾಯಿ ತೆರಿಗೆ ಕಟ್ಟಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯನವರ ಭಾಷೆಯಲ್ಲಿ ಹೇಳುವುದಾದರೆ ಕಾಕಾ ಪಾಟೀಲ- ಮಹದೇವಪ್ಪರಿಗೆ 12.75 ಲಕ್ಷ ಇದ್ದಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ ಎಂದರು. ಈ ಮಿತಿಯಿಂದ ಹೆಚ್ಚಾದರೆ ಮಾತ್ರ ಸ್ಲ್ಯಾಬ್ ಜಾರಿಗೊಳ್ಳಲಿದೆ ಎಂದು ತಿಳಿಸಿದರು. 1 ಕೋಟಿ ಜನರು ತೆರಿಗೆ ವ್ಯಾಪ್ತಿಯಿಂದ ಹೊರಕ್ಕೆ ಬರಲಿದ್ದಾರೆ ಎಂದರು. ಇದು ತೆರಿಗೆ ವಿಷಯದಲ್ಲಿ ಕ್ರಾಂತಿ ಎಂದು ತಿಳಿಸಿದರು.
2014ರಲ್ಲಿ ಅಂದರೆ 10 ವರ್ಷದ ಹಿಂದೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಿಂಗಳಿಗೆ 17 ಸಾವಿರ ವೇತನವಿದ್ದರೆ ಆದಾಯ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇವತ್ತು ತಿಂಗಳಿಗೆ 1.06 ಲಕ್ಷ ವೇತನ ಬಂದರೂ ಟಿಡಿಎಸ್ ಆಗುವುದಿಲ್ಲ ಎಂದು ಮಾಹಿತಿ ಕೊಟ್ಟರು. ವರ್ಷಕ್ಕೆ 83 ಸಾವಿರ ಉಳಿತಾಯದ ಅವಕಾಶ ಸಿಕ್ಕಿದೆ ಎಂದರು. ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಕೇಂದ್ರ ಬಜೆಟ್ ಇದು ಎಂದು ವಿಶ್ಲೇಷಿಸಿದರು.
ರಾಜ್ಯ ವಕ್ತಾರ ನರೇಂದ್ರ ರಂಗಪ್ಪ ಅವರು ಮಾತನಾಡಿ, ಆರೋಗ್ಯದ ಕುರಿತು ಕಾಳಜಿ ವಹಿಸಿದ ಪ್ರಧಾನಿಯವರು 1 ಲಕ್ಷ ಕೋಟಿ ಮೊತ್ತವನ್ನು ಈ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಶೇ 191 ರಷ್ಟು ಮೊತ್ತ ಹೆಚ್ಚಳವಾಗಿದೆ ಎಂದು ತಿಳಿಸಿದರು.
200 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಜಿಲ್ಲೆಗಳಲ್ಲಿ ತೆರೆಯಲು ವಿಶೇಷ ನಿಧಿ ಮೀಸಲಿಟ್ಟಿದ್ದಾರೆ. ನ್ಯಾಷನಲ್ ಹೆಲ್ತ್ ಮಿಷನ್ಗೆ 37 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆಗಳ ಡಿಜಿಟಲೀಕರಣ- ಟೆಲಿ ಹೆಲ್ತ್ ಕಡೆ ಗಮನ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.