ಮೈಸೂರು: ದಕ್ಷಿಣ ಭಾರತದ ಜನಪ್ರಿಯ ಆಟಗಳಲ್ಲಿ ಈ ಲಗೋರಿ ಕೂಡ ಒಂದು. ಗದ್ದೆಯ ಬಯಲೋ, ಮನೆಯಂಗಳದಲ್ಲೋ ಅಥವಾ ಶಾಲಾ ಮೈದಾನದಲ್ಲೋ ಎಳೆಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಡುವ ಪಕ್ಕಾ ದೇಸಿ ಆಟ ಇದು. ಇತ್ತೀಚಿನ ವಿದ್ಯಾಮಾನಗಳಲ್ಲಿ ದೇಸೀ ಆಟಗಳು ಮಕ್ಕಳನ್ನು ತನ್ನಡೆಗೆ ಸೆಳೆಯುವಲ್ಲಿ ವಿಫಲವಾಗ್ತಾ ಇದೆ. ಟಿವಿ. ಮೊಬೈಲ್ ಅದ್ರಲ್ಲಿ ಬರುವ ಆನ್ ಲೈನ್ ಗೇಮ್ಸ್, ಮಕ್ಕಳ ಮೇಲಿನ ಪೋಷಕರ ಅತಿಯಾದ ಕಾಳಜಿ ಈ ಎಲ್ಲಾ ಕಾರಣಗಳಿಂದ ಈಗಿನ ಪೀಳಿಗೆಗೆ ದೇಸೀ ಆಟಗಳ ಬಗ್ಗೆ ಗೊತ್ತೇ ಇಲ್ಲದಂತಾಗಿದೆ.
ಹೀಗಾಗಿ ಲಗೋರಿ ಆಟವನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಅದಕ್ಕೆ ಹೆಚ್ಚಿನ ಪ್ರಚಾರವನ್ನು ನೀಡುವ ಗುರಿಯನ್ನು ರಾಷ್ಟ್ರೀಯ ಕ್ರೀಡಾ ಸಂಘಟನೆ ಕ್ರೀಡಾ ಭಾರತಿ ಹೊಂದಿದೆ. ಇದನ್ನು ಮುನ್ನೆಲೆಗೆ ತರಬೇಕು ಎನ್ನುವ ಪಣತೊಟ್ಟಿರುವ ಕ್ರೀಡಾ ಭಾರತಿ ಕರ್ನಾಟಕದಿಂದ ಮೈಸೂರಿನಲ್ಲಿ ನಡೆಯುವ ರಾಜ್ಯ ಕ್ರೀಡಾ ಸಮ್ಮೇಳನ-2025ರ ನಿಮಿತ್ತ ಜ.4ರಂದು ಮೈಸೂರು ಅರಮನೆಯಲ್ಲಿ ಲಗೋರಿ ಆಟ ಆಯೋಜನೆ ಮಾಡಲಾಗಿದೆ.
ಮೈಸೂರು ಅರಮನೆಯಲ್ಲಿ ಲಗೋರಿ ಆಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಸಂಸದರೂ ಆಗಿರುವ ಮೈಸೂರು ಮಹಾರಾಜರೇ ಈ ಆಟಕ್ಕೆ ಚಾಲನೆ ನೀಡುತ್ತಿದ್ದಾರೆ. ವಿಶೇಷ ಏನೆಂದರೆ ಮೈಸೂರು ಅರಮನೆಯ ಮಹಾರಾಜ ಯದುವೀರದತ್ತ ಒಡೆಯರ್ ಸಹಿತ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಗಣ್ಯಾತಿಗಣ್ಯರು ಅಲ್ಲಿ ಲಗೋರಿ ಆಟವಾಡಲಿದ್ದಾರೆ. ಜ.4ರಂದು ಬೆಳಗ್ಗೆ 8.30ಕ್ಕೆ ಗಣ್ಯರ ಲಗೋರಿ ಆಟ ಆರಂಭವಾಗಲಿದೆ.
ಕರ್ನಾಟಕದಲ್ಲಿ ಲಗೋರಿ, ಡಿಕೋರಿ ಎಂಬುದಾಗಿ, ಆಂಧ್ರಪ್ರದೇಶದಲ್ಲಿ ಲಿಂಗೋಚ್, ತಮಿಳುನಾಡಿನಲ್ಲಿ ಅಡಿಕ ಆಟಂ ಮತ್ತು ಮಹಾರಾಷ್ಟ್ರದಲ್ಲಿ ಲಿಂಗೋರಚ್ಯ ಎಂದು ಈ ಆಟಕ್ಕೆ ಹೆಸರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.