ಬೆಂಗಳೂರು: ಬಿಜೆಪಿ ಕರ್ನಾಟಕದಲ್ಲಿ ಸುಭದ್ರವಾಗಿ ಬೆಳೆದು ನಿಲ್ಲಲು ಯಡಿಯೂರಪ್ಪ, ಅನಂತಕುಮಾರ್ ಆದಿಯಾಗಿ ಹಿರಿಯರ ತಪಸ್ಸೇ ಕಾರಣ. ತನು, ಮನ, ಧನ ಅರ್ಪಿಸಿದ ಲಕ್ಷಾಂತರ ಕಾರ್ಯಕರ್ತರ ಅವಿರತ ಶ್ರಮ ಅದರ ಹಿಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಮಾಜಿ ಪ್ರಧಾನಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ಸ್ಮರಣಾರ್ಥ ಹಾಗೂ ಸುಶಾಸನ ದಿನದ ನಿಮಿತ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರದರ್ಶಿನಿ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿಯ ಕಟ್ಟಡ ನಮಗೆ ಕಾಣುತ್ತಿದೆ. ಪಕ್ಷ ಬೆಳೆದುನಿಂತಿರುವುದು ಗೋಚರಿಸುತ್ತಿದೆ. ಆದರೆ, ಅದರ ಅಡಿಪಾಯ ನಮ್ಮ ಕಣ್ಣಿಗೆ ಕಾಣಲಸಾಧ್ಯ ಎಂದು ವಿಶ್ಲೇಷಿಸಿದರು.
ಅಟಲ್ಜೀ, ಅಡ್ವಾಣಿಜೀ, ಮೋದಿಜೀ, ಅಮಿತ್ ಶಾ ಜೀ, ನಡ್ಡಾಜೀ ಅವರನ್ನು ನಾವು ನೆನಪಿಸಿಕೊಳ್ಳಬೇಕು. ಬೂತ್ ಮಟ್ಟದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ಪ್ರಧಾನಿಯಾಗುವ ಹಂತಕ್ಕೆ ಬೆಳೆದು ನಿಲ್ಲುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಆಶಯದಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ದೇಶಾದ್ಯಂತ ಮತ್ತು ರಾಜ್ಯದ ಎಲ್ಲ ಬೂತ್ಗಳಲ್ಲೂ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಹಿಂದೆ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ವಿಪಕ್ಷ ನಾಯಕರಾಗಿದ್ದರು. ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರ ಅಧಿಕೃತ ನಿವಾಸಕ್ಕೆ ಹಲವಾರು ಬಾರಿ ವಾಜಪೇಯಿ ಅವರು ಬಂದಿದ್ದರು ಎಂದು ವಿಜಯೇಂದ್ರ ಅವರು ನೆನಪಿಸಿಕೊಂಡರು.
ಅಟಲ್ಜೀ ಅವರು ಶಾಸಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶಿಕಾರಿಪುರಕ್ಕೆ ಭೇಟಿ ಕೊಟ್ಟಿದ್ದರು. 1999ರಲ್ಲಿ ಜೆ.ಎಚ್.ಪಟೇಲರ ಸರಕಾರದ ವಿರುದ್ಧ ಜನಾಂದೋಲನ ನಡೆದಿತ್ತು. ಯಡಿಯೂರಪ್ಪ, ಅನಂತಕುಮಾರ್, ರಾಮಚಂದ್ರ ಗೌಡ, ಶಂಕರಮೂರ್ತಿ ಮೊದಲಾದವರ ನೇತೃತ್ವದಲ್ಲಿ ಜನಾಂದೋಲನ ನಡೆದಿತ್ತು. ಹುಬ್ಬಳ್ಳಿ ಸಮಾವೇಶದಲ್ಲಿ 1.5 ಲಕ್ಷದಿಂದ 2 ಲಕ್ಷದಷ್ಟು ಜನಸ್ತೋಮ ಸೇರಿತ್ತು. ವಾಜಪೇಯಿ ಅವರಿಗೆ ಇಷ್ಟು ದೊಡ್ಡ ಸಮಾವೇಶ ಎಂಬುದು ನಂಬಲಾಗದ ಮಾತಾಗಿತ್ತು. ಭಾಷಣ ಮುಗಿಸಿ ಹೆಲಿಕಾಪ್ಟರ್ ಏರುವ ಮೊದಲು ಯಡಿಯೂರಪ್ಪ ಅವರನ್ನು ಬಾಚಿ ಅಪ್ಪಿಕೊಂಡಿದ್ದರು. ವಾಜಪೇಯಿ ಎಂದರೆ ಒಂದು ರೀತಿ ರೋಮಾಂಚನ ಆಗುತ್ತದೆ ಎಂದು ವಿಶ್ಲೇಷಿಸಿದರು.
ವಾಜಪೇಯಿ ಅವರ ಜೊತೆಗಿದ್ದು ಪಕ್ಷದ ಸಂಘಟನೆ ಮಾಡಿದ ಅನೇಕ ಹಿರಿಯರು ಇವತ್ತು ವೇದಿಕೆ ಮೇಲಿದ್ದಾರೆ ಎಂದು ತಿಳಿಸಿದರು. ವಾಜಪೇಯಿಯವರು ಒಬ್ಬ ಶ್ರೇಷ್ಠ ನಾಯಕ ಎಂದು ತಿಳಿಸಿದರು.
ರಾಜ್ಯದ ಬೆಳಗಾವಿಯ ಘಟನೆ ನೋಡಿದ್ದೀರಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ. ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರಕಾರವು ಬೆಳೆ ಹಾನಿ ಪರಿಶೀಲಿಸಲು ತಯಾರಿಲ್ಲ. ಪರಿಹಾರ ಕೊಡಲು ಸರಕಾರದ ಬಳಿ ಹಣ ಇಲ್ಲ ಎಂದು ಟೀಕಿಸಿದರು. ಇಲ್ಲಿನ ಹಣಕಾಸಿನ ದುಸ್ಥಿತಿ ಒಂದೆಡೆ ಇದ್ದರೆ ತೆಲಂಗಾಣದಲ್ಲೂ ಕಾಂಗ್ರೆಸ್ ಮುಖ್ಯಮಂತ್ರಿ ನನ್ನ ಕೈಯಲ್ಲಿ ಗ್ಯಾರಂಟಿ ಈಡೇರಿಸಲು ಅಸಾಧ್ಯ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯದ ಪರಿಸ್ಥಿತಿ ಬಗ್ಗೆ ‘ಆಲ್ ಈಸ್ ವೆಲ್’ ಎಂದು ಮುಖ್ಯಮಂತ್ರಿಗಳು ಭಾಷಣ ಬಿಗಿಯಬಹುದು. ಆದರೆ, ಸತ್ಯ ಏನೆಂದರೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಹಣಕಾಸಿನ ಕೊರತೆ ಎದ್ದು ಕಾಣುತ್ತಿದೆ. ಸರಕಾರಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ನಿನ್ನೆ ಕೂಡ ಆಡಳಿತ ಪಕ್ಷದ ಶಾಸಕ ರಾಜು ಕಾಗೆಯವರು ಈ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ ಎಂದು ತಿಳಿಸಿದರು.
ನಮ್ಮ ಸಮಸ್ಯೆಗಳು, ವ್ಯತ್ಯಾಸಗಳನ್ನು ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ, ಕಾರ್ಯಕರ್ತರ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗಬೇಕು. ವಾಜಪೇಯಿಯವರ ಪಕ್ಷ ಸಂಘಟನೆ, ಉತ್ತಮ ಆಡಳಿತದ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.