ಬೆಳಗಾವಿ: ಮೈಸೂರಿನ ಮುಡಾ ಹಗರಣ, ವಕ್ಫ್ ಅವ್ಯವಹಾರ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ಅವರ ವರದಿ, ನನ್ನ ಮೇಲಿನ 150 ಕೋಟಿಯ ಆರೋಪ- ಇವೆಲ್ಲವುಗಳ ಸಮಗ್ರ ಸಿಬಿಐ ತನಿಖೆಗೆ ನೀವೇ ಆದೇಶ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನನ್ನ ಮೇಲಿನ 150 ಕೋಟಿಯ ಆರೋಪವನ್ನೂ ಸಿಬಿಐ ತನಿಖೆಗೆ ಕೊಡಿ, ಅನ್ವರ್ ಮಾಣಿಪ್ಪಾಡಿಯವರ ವರದಿ ಸ್ವೀಕರಿಸಿ ಅದರ ಬಗ್ಗೆಯೂ ಸಿಬಿಐ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯರನ್ನು ಆಗ್ರಹಿಸಿದರು. ವಕ್ಫ್ ಜಾಗದ ವಿಚಾರದಲ್ಲಿ ಲಕ್ಷ ಲಕ್ಷ ಕೋಟಿಯ ಅವ್ಯವಹಾರ ಆಗಿದೆ ಎಂಬ ವರದಿ ಇದ್ದು ಅದರ ಸಮಗ್ರ ತನಿಖೆಯೂ ಆಗಲಿ ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದವರು ಕೆಲಸಕ್ಕೆ ಬಾರದ ಸಂಗತಿಗಳನ್ನು ಇವತ್ತು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಾಣಂತಿಯರ ಸಾವು, ಹಸುಗೂಸುಗಳ ಮರಣ, ಉತ್ತರ ಕರ್ನಾಟಕದ ವಿಚಾರಗಳು ಸದನದಲ್ಲಿ ಚರ್ಚೆ ಆಗಬಾರದೆಂಬ ಉದ್ದೇಶ ಇದರ ಹಿಂದಿದೆ ಎಂದು ಆಕ್ಷೇಪಿಸಿದರು.
ಯಡಿಯೂರಪ್ಪ ಅವರು ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಅವರನ್ನೇ ಗುರಿಯಾಗಿ ಇಟ್ಟುಕೊಂಡು ರಾಜಕೀಯವಾಗಿ ಮುಗಿಸುವ ದುರುದ್ದೇಶದಿಂದ ಅರೆಬರೆ ಬೆಂದ ಜಸ್ಟಿಸ್ ಕುನ್ಹ ಮಧ್ಯಂತರ ವರದಿಯನ್ನು ಇಟ್ಟುಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಮುನಿರತ್ನ ವಿಚಾರವನ್ನೂ ಚರ್ಚಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರೇ ಈ ರೀತಿ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆ ಇಲ್ಲ; ಇದ್ಯಾವುದೂ ಹೊಸದಲ್ಲ ಎಂದು ತಿಳಿಸಿದರು. ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಸಿಎಜಿ ವರದಿ ಸಂಬಂಧ 25 ಪ್ರಕರಣಗಳನ್ನು ಸಿದ್ದರಾಮಯ್ಯರ ಸರಕಾರವು ದಾಖಲಿಸಿ ಯಡಿಯೂರಪ್ಪ, ಬಿಜೆಪಿಯನ್ನು ಮುಗಿಸಲು ಪಿತೂರಿ ಮಾಡಲಾಗಿತ್ತು. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ತಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆಂದು ಯೋಚಿಸಿ ಈ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಮುಡಾ, ವಾಲ್ಮೀಕಿ ನಿಗಮದ ಹಗರಣಗಳು, ಅಬಕಾರಿ ಇಲಾಖೆ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದು, ವಿಲವಿಲ ಒದ್ದಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರು ನನ್ನ ಮೇಲೆ ಆರೋಪ ಮಾಡಿದ್ದು, ಇತ್ತೀಚೆಗೆ ಅವರ ಬಂಡವಾಳವೂ ಬಯಲಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ನೂರಾರು ಕೋಟಿಗೆ ಬೆಲೆಬಾಳುವ 5 ಎಕರೆ ನಿವೇಶನವನ್ನು ರಾಹುಲ್ ಖರ್ಗೆಯವರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದರು. ಪ್ರಿಯಾಂಕ್ ಖರ್ಗೆಯವರೇ ನೀವು ಅದನ್ನು ಹಿಂತಿರುಗಿಸಿಲ್ಲವೇ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.