ಬೆಂಗಳೂರು: ಪಂಚಮಸಾಲಿ ಸಮಾಜದ ಶಾಂತಿಯುತ ಪ್ರತಿಭಟನೆ, ಹೋರಾಟಗಾರರ ಮೇಲೆ ಸರಕಾರವು ಲಾಠಿಚಾರ್ಜ್ ನಡೆಸಿ ಅಮಾನವೀಯವಾಗಿ ವರ್ತಿಸಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಡಿ ಪಂಚಮಸಾಲಿಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿ ಎಂದು ಆಗ್ರಹಿಸಿದರು. ನಿನ್ನೆ ನಡೆದ ಲಾಠಿಚಾರ್ಜ್ ಸಂಬಂಧ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸುವಂತೆ ಒತ್ತಾಯವನ್ನು ಮುಂದಿಟ್ಟರು.
ಬೆಳಗಾವಿಯಲ್ಲಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆಗ ನಡೆಸಿದ ಲಾಠಿಚಾರ್ಜ್ನಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ರೈತರು ಗಾಯಗೊಂಡಿದ್ದಾರೆ. ಸರಕಾರದ್ದು ಸರ್ವಾಧಿಕಾರಿ ನಡೆ, ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಖಂಡಿಸಿದರು.
ಪಂಚಮಸಾಲಿ ಸಮುದಾಯದ ಬೇಡಿಕೆ ಇವತ್ತು ನಿನ್ನೆಯದಲ್ಲ; 2 ಎ ಮೀಸಲಾತಿ ಸಂಬಂಧ ಈ ಸರಕಾರ ಬಂದ ಆರಂಭದಿಂದ ಅವರ ಬೇಡಿಕೆಗಳನ್ನು ಪುನರುಚ್ಚಾರ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದಾಗ 2 ಸಿ, 2 ಡಿ ಅಡಿ ಎರಡು ರೀತಿ ಮೀಸಲಾತಿ ಕೊಟ್ಟು, ಅದರಡಿಯಲ್ಲಿ ವಿವಿಧ ಸಮುದಾಯಗಳನ್ನು ಒಟ್ಟು ಸೇರಿಸಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿತ್ತು ಎಂದು ವಿವರಿಸಿದರು.
2 ಸಿಗೆ ಶೇ 4 ಮೀಸಲಾತಿ ಇದ್ದುದನ್ನು ಶೇ 6 ಮಾಡಿದ್ದು, 2 ಡಿ ಅಡಿ ಶೇ 5 ಇದ್ದುದನ್ನು ಶೇ 7 ಮಾಡಿದ್ದರು. ಪಂಚಮಸಾಲಿಗಳನ್ನೂ 2 ಡಿ ವ್ಯಾಪ್ತಿ ಒಳಗಡೆ ತರುವ ಕೆಲಸ ಮಾಡಲಾಗಿತ್ತು. ಅದನ್ನು ಈ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡಿಲ್ಲ. 2 ಎ ಮೀಸಲಾತಿ ಬಗ್ಗೆಯೂ ಸರಿಯಾಗಿ ಸ್ಪಂದಿಸಿಲ್ಲ; ಈ ಮೂಲಕ ಹೋರಾಟಕ್ಕಿಳಿಯುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ್ದೇ ಆಳುವ ಕಾಂಗ್ರೆಸ್ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿಗರು ವಿಪಕ್ಷದಲ್ಲಿದ್ದಾಗ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಬಂಧಿಸಿ ಮೊಸಳೆ ಕಣ್ಣೀರು ಸುರಿಸಿದ್ದರು. ಇವರ ಪಕ್ಷದ ಮುಖಂಡರು ರಾಜೀನಾಮೆ ಕೊಡುವ ಮಾತನಾಡಿದ್ದರು. ಲಾಠಿಚಾರ್ಜ್ ಆಗಿದೆ; ಸ್ವಾಮೀಜಿಗಳನ್ನು ಬಂಧಿಸಿದ್ದೀರಿ. ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ರಾಜೀನಾಮೆ ಕೊಡುವವರೆಲ್ಲ ಎಲ್ಲಿ ಬಿಲ ಸೇರಿಕೊಂಡಿದ್ದೀರಿ? ಎಂದು ಸಿ.ಟಿ. ರವಿ ಅವರು ಪ್ರಶ್ನಿಸಿದರು.
ಇವರೆಲ್ಲ ಯಾವ ಮುಖ ಇಟ್ಟುಕೊಂಡು ಜನರಿಗೆ ಮುಖ ತೋರಿಸುತ್ತಾರೆ ಎಂದು ಕೇಳಿದರು. ಮನವಿ ಸ್ವೀಕರಿಸಲು ಸಾಧ್ಯವಾಗದಷ್ಟು ಮುಖ್ಯಮಂತ್ರಿಗಳು ಸರ್ವಾಧಿಕಾರಿ ಆಗಿಬಿಟ್ಟರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಲಾಠಿಚಾರ್ಜ್ ಮಾಡಿಸುವುದೇ ಸಮಾಜವಾದವೇ ಎಂದರು.
ಧರ್ಮಾಧಾರಿತ ಮೀಸಲಾತಿಯನ್ನು ನಮ್ಮ ಸಂವಿಧಾನವೂ ನಿರಾಕರಿಸಿದೆ. ಆಂಧ್ರ, ಪಶ್ಚಿಮ ಬಂಗಾಲ ಸರಕಾರಗಳು ಧರ್ಮಾಧಾರಿತ ಮೀಸಲಾತಿ ಕೊಡುವುದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅದು ಸಂವಿಧಾನಬಾಹಿರ ಎಂದು ತಿಳಿಸಿದೆ. ಹಾಗಾಗಿ ನೀವು ಬಿಜೆಪಿ ಸರಕಾರ ಜಾರಿಗೊಳಿಸಿದ್ದ 2 ಸಿ, 2ಡಿ ಯನ್ನಾದರೂ ಅನುಷ್ಠಾನಕ್ಕೆ ತನ್ನಿ ಎಂದು ಒತ್ತಾಯಿಸಿದರು. ಅಥವಾ 2 ಎ ಅಡಿ ಪಂಚಮಸಾಲಿಗಳಿಗೂ ಮೀಸಲಾತಿ ಕೊಡಿ ಎಂದು ಆಗ್ರಹಿಸಿದರು.
ನಮ್ಮ ಪಕ್ಷವು ಈ ಸಂಬಂಧ ವಿಧಾನಸಭೆ ಒಳಗಡೆಯೂ ಹೋರಾಟ ಮಾಡಲಿದೆ ಎಂದ ಅವರು, ಮುಖ್ಯಮಂತ್ರಿಗಳ ನಡವಳಿಕೆ ಪರಿಪಕ್ವವಾಗಿಲ್ಲ; ಪ್ರಜಾಪ್ರಭುತ್ವಕ್ಕೆ ತಕ್ಕದಾದ ನಡೆಯಲ್ಲ ಎಂದು ಖಂಡಿಸಿದರು. ಕಾಂಗ್ರೆಸ್ಸಿಗರು ತಪ್ಪಾಗಿದೆ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಒಂದು ಮಾತನ್ನೂ ಆಡಿಲ್ಲ; ಕ್ಷಮೆ ಕೇಳುವ ಔದಾರ್ಯವನ್ನೂ ಪ್ರದರ್ಶಿಸಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳಿಗೆ ಕೇರಳದ ವಯನಾಡಿನ ಸಂತ್ರಸ್ತರ ಬಗ್ಗೆ ಕಾಳಜಿ ಇರುವುದು ತಪ್ಪೆಂದು ಹೇಳುವುದಿಲ್ಲ; ಅಲ್ಲಿ ಅಗತ್ಯವಾದರೆ ಜಾಗ ಖರೀದಿಸಿ ಮನೆ ಕಟ್ಟಿಕೊಡುವ ಕುರಿತು ಸಿಎಂ ಪತ್ರ ಬರೆದಿದ್ದಾರೆ. ಇದು ಮಾನವೀಯ ಕಳಕಳಿ ಇರುವವರು ವರ್ತಿಸಬೇಕಾದ ಸಂಗತಿ. ಇದು ತಪ್ಪೆನ್ನಲಾರೆ. ನೀವು ಕೇವಲ ವಯನಾಡಿಗೆ ಮಾತ್ರ ನಿಮ್ಮ ದೃಷ್ಟಿ ಹರಿಸಿದ್ದು, ನಿಮ್ಮ ಮಾನಸಿಕ ಗುಲಾಮಗಿರಿಯ ಸಂಕೇತದಂತಿದೆ ಎಂದು ಆಕ್ಷೇಪಿಸಿದರು. ವಯನಾಡನ್ನು ಹಿಂದೆ ರಾಹುಲ್ ಗಾಂಧಿ, ಈಗ ಪ್ರಿಯಾಂಕ ಗಾಂಧಿ ಪ್ರತಿನಿಧಿಸುತ್ತಿದ್ದು, ಇದು ನಿಮ್ಮ ಸಹಜ ಮಾನವೀಯ ಕಳಕಳಿ ಎಂದು ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕದ ಎತ್ತಿನಹೊಳೆ ಸಂಬಂಧ ಬೇಲೂರಿನ ವಡ್ಡರಹಳ್ಳಿಯ ರೈತ ರಂಗಸ್ವಾಮಿ ಅವರು ಎತ್ತಿನಹೊಳೆಯ ಪರಿಹಾರ ಬಂದಿಲ್ಲ ಎಂದು ಅಲೆದಲೆದು ಸಾಕಾಗಿ, ಲಂಚ ಕೇಳಿದ ಅಧಿಕಾರಿಯ ನಡೆಯಿಂದ ಬೇಸತ್ತು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸಮಾವೇಶ ಮಾಡಿದ ನೀವು ಎತ್ತಿನಹೊಳೆ ದುರ್ಘಟನೆ, ಸರಣಿ ರೀತಿಯಲ್ಲಿ ಬಾಣಂತಿಯರ- ಹಸುಗೂಸುಗಳ ಸಾವು ಬಗ್ಗೆ ತೋರಿಸದ ಮಾನವೀಯ ಕಳಕಳಿ ವಯನಾಡಿಗೆ ಸೀಮಿತವಾದ ಮರ್ಮವೇನು ಎಂದು ಕೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.