ಬೆಳಗಾವಿ: ಪರಮಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸ್ವಾಮೀಜಿ ಅವರ ಭೇಟಿ ವೇಳೆ ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಪಕ್ಷದ ಎಲ್ಲ ಮುಖಂಡರು ಇದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದೇನೆ. ಕೆಲವು ವೈಯಕ್ತಿಕ ಕಾರಣಕ್ಕೆ ಪಂಚಮಸಾಲಿ ಹೋರಾಟಕ್ಕೆ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಬೆಂಬಲ ಇಲ್ಲ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ, ಪಂಚಮಸಾಲಿ ಸಮಾಜಕ್ಕೆ 3 ಬಿ ಕೊಡಲಾಗಿತ್ತು. 3 ಬಿ ಕೊಟ್ಟ ಕಾರಣದಿಂದಲೇ ಸಮಾಜಕ್ಕೆ 2 ಎ ಸ್ಥಾನಮಾನ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ; ಯಡಿಯೂರಪ್ಪ ಅವರ ವಿರೋಧ ಇದೆ, ಅನ್ಯಾಯ ಮಾಡಿದರು- ಇವ್ಯಾವುದು ಕೂಡ ಸರಿಯಲ್ಲ; ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು. ಈ ತಪ್ಪು ಅಭಿಪ್ರಾಯಕ್ಕೆ ಅವಕಾಶ ಕೊಡಬಾರದೆನ್ನುವ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಸ್ವಾಮೀಜಿಗಳು ಮನಸ್ಸು ಬಿಚ್ಚಿ ಸಂತೋಷವಾಗಿ ಮಾತನಾಡಿದ್ದಾರೆ. ಸಾಕಷ್ಟು ತಪ್ಪು ಅಭಿಪ್ರಾಯಗಳಿತ್ತು; ಕಾಂಗ್ರೆಸ್ ಸರಕಾರ ಬಂದ ಬಳಿಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಹಿಂದೆ ಯಾವುದೇ ಸರಕಾರ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಸಹ ನಮ್ಮ ಸಮಾಜದ ಮೇಲೆ ಈ ರೀತಿ ದೌರ್ಜನ್ಯಗಳು ಆಗಿಲ್ಲ ಎಂದು ತಿಳಿಸಿದ್ದಾಗಿ ಹೇಳಿದರು.
ಕಾಂಗ್ರೆಸ್ ಸರಕಾರ ಬಂದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ; ಹೋರಾಟವನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ; ಖಂಡಿತ ನೀವೆಲ್ಲರೂ ಸಹಕಾರ ನೀಡಬೇಕೆಂದು ಹೇಳಿದ್ದಾರೆ. ನಾವು ಕೂಡ ಸಂಪೂರ್ಣ ಸಹಕಾರ, ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದೇನೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.