ನವದೆಹಲಿ: ಬಾಹ್ಯಾಕಾಶದಲ್ಲಿ ಸ್ವಂಯ ನಿಲ್ದಾಣ ಸ್ಥಾಪನೆ ಇಸ್ರೋದ ದೊಡ್ಡ ಕನಸು. ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಇದನ್ನು ಸಾಕಾರಗೊಳಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರು ಭರವಸೆ ನೀಡಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳ ವಿದ್ಯಾರ್ಥಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹಲವು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಉಪಗ್ರಹಗಳ ಉಡಾವಣೆಗೆ ಕರ್ನಾಟಕವೇ ನಿಯಂತ್ರಣ ಕೇಂದ್ರವಾಗಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
ದಕ್ಷಿಣ ಧ್ರುವದಲ್ಲಿ ಚಂದ್ರಯಾನ -3 ರ ಲ್ಯಾಂಡರ್ ಮತ್ತು ರೋವರ್ ಅತ್ಯುತ್ತಮ ಚಿತ್ರಗಳನ್ನು ತೆಗೆದಿದ್ದು, ಅಮೇರಿಕಾದ ನಾಸಾ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಕಡಿಮೆ ವೆಚ್ಚದಲ್ಲಿ ಇಸ್ರೋದ ಯೋಜನೆಗಳು ಕಾರ್ಯಗತವಾಗುತ್ತಿದೆ. ಜಿಪಿಎಸ್ಗೆ ಪರ್ಯಾಯವಾಗಿ ಭಾರತದ್ದೇ ಉಪಗ್ರಹ ಆಧಾರಿತ ದಿಕ್ಸೂಚಿ ನಾವಿಕ್ ಉಪಗ್ರಹ ಉಡಾವಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವಿಕ್ ಬಾಹ್ಯಕಾಶದಿಂದ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ಇದರಿಂದ ಚಂಡಮಾರುತ, ಭೂಕಂಪ ಮುನ್ಸೂಚನೆ ಸೇರಿದಂತೆ ಹವಾಮಾನ ಇಲಾಖೆಗೆ ಬೇಕಾದ ತಂತ್ರಜ್ಞಾನಗಳು ಲಭ್ಯವಾಗಲಿದೆ. ವೈದ್ಯಕೀಯ, ಶಿಕ್ಷಣ, ಕೃಷಿ, ಜಲ, ಸರ್ಕಾರಿ ಯೋಜನೆಗಳು ಸೇರಿದಂತೆ ಇಸ್ರೋ ಹಲವು ಸೇವೆಗಳನ್ನು ಈಗಾಗಲೇ ನೀಡಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ 250ಕ್ಕೂ ಹೆಚ್ಚು ನವ ಉದ್ಯಮಗಳು ಸ್ಥಾಪನೆಯಾಗಿದ್ದು, ಆತ್ಮನಿರ್ಭರ ಭಾರತದತ್ತ ದಾಪುಗಾಲು ಇಡುತ್ತಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಿಂದ 2047ಕ್ಕೆ 1500 ದಶಲಕ್ಷ ಡಾಲರ್ ಹಣವನ್ನು ಭಾರತದ ಆರ್ಥಿಕತೆಗೆ ನೀಡಲು ಗುರಿ ಹೊಂದಲಾಗಿದೆ ಎಂದಿದ್ದಾರೆ.
ಇಸ್ರೋದ ದೂರಗಾಮಿ ಚಿಂತನೆಗಳು ಮತ್ತು ಯೋಜನೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಎತ್ತರಕ್ಕೇರಿಸಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಅಮೇರಿಕಾದ ನಾಸಾ ಮತ್ತು ರಷ್ಯಾದ ರೋಸ್ಕೊಮೊಸ್ಗೆ ಸದಾ ಸ್ಪರ್ಧೆಯನ್ನು ನೀಡುತ್ತಾ ತನ್ನದೇ ಆದ ಯೋಜನೆಗಳಿಂದ ಇಸ್ರೋ ಇವತ್ತು ಜಗತ್ತಿನ ಗಮನ ಸೆಳೆದಿದೆ. 2047ರಲ್ಲಿ ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವನ್ನು ನಿರ್ಮಾಣ ಮಾಡುವ ಯೋಜನೆ ಯಶಸ್ವಿಯಾಗಲಿ; ಆ ಮೂಲಕ ಭಾರತದ ಬಾಹ್ಯಾಕಾಶ ಯೋಜನೆಗಳು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಲಿ ಎಂಬುವುದೇ ನಮ್ಮ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.