ಬೆಂಗಳೂರು: ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೇ ಕೊಡಬೇಕು. ಹಾಗಿದ್ದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಪಾದಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನಿಖೆಯನ್ನು ಸಿಬಿಐಗೆ ಕೊಡದೆ ಇದ್ದಲ್ಲಿ ಕೇಸನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ವ್ಯವಸ್ಥೆ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರಿಗೆ ಮಾನವೀಯತೆ ಇದ್ದರೆ ವಾಲ್ಮೀಕಿ ಜಯಂತಿಯನ್ನು ಪಶ್ಚಾತ್ತಾಪ ದಿನ ಎಂದು ಆಚರಣೆ ಮಾಡಬೇಕಿತ್ತು ಎಂದ ಅವರು, ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಎಲ್ಲ ಕಡತಗಳನ್ನು ಹೆಲಿಕಾಪ್ಟರ್ನಲ್ಲಿ ತುಂಬಿಕೊಂಡು ಬಂದವರನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು; ಮಾನ್ಯ ಸುರೇಶ್ ಅವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ಇಲ್ಲವಾದರೆ ಇ.ಡಿ. ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳನ್ನು ಬಂಧಿಸಲಿ ಎಂದು ಮನವಿ ಮಾಡಿದರು.
ಭ್ರಷ್ಟಾಚಾರ ಅಪರಾಧವಲ್ಲ ಎಂಬ ಮನಸ್ಥಿತಿಗೆ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷ ಬಂದ ಹಾಗಿದೆ. ಕುರಿಗಳನ್ನು ಕಾಯಲು ತೋಳನನ್ನು ಕಾಂಗ್ರೆಸ್ ಪಕ್ಷದ ಸರಕಾರ ನೇಮಿಸಿದಂತಿದೆ. ಇವತ್ತು ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಜೈಲಿನಿಂದ ಬಂದವರು ವಿಜೃಂಭಿಸಿ ಬರುತ್ತಿದ್ದಾರೆ; ನಿನ್ನೆ ತಾನೇ ವಾಲ್ಮೀಕಿ ಜಯಂತಿ ನಡೆದಿದೆ. ಸಿದ್ದರಾಮಯ್ಯನವರು ವಾಲ್ಮೀಕಿ ಜಯಂತಿ ಮಾಡುವಾಗ ನನಗೇ ನಾಚಿಕೆ ಅನಿಸಿತ್ತು. ವಾಲ್ಮೀಕಿ ನಿಗಮವನ್ನು ತಿಂದು ತೇಗಿದವರು ವಾಲ್ಮೀಕಿ ಜಯಂತಿ ಮಾಡುವುದು ಎಷ್ಟು ಸರಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಇಂದು ಬೆಳಿಗ್ಗೆ ಮುಡಾ ಕಚೇರಿ, ತಾಲ್ಲೂಕು ಕಚೇರಿ ಮತ್ತು ದೇವರಾಜು ಅವರ ಮನೆಗೆ ಇ.ಡಿ. ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮೂರು ಬಾರಿ ಮುಡಾ ಕಡತಗಳನ್ನು ಕೇಳಿದ್ದರೂ ಅಧಿಕಾರಿಗಳು ತಿರಸ್ಕರಿಸಿದ್ದೇ ಇದಕ್ಕೆ ಕಾರಣ ಎಂದು ವಿವರಿಸಿದರು.
ಈ ಹಗರಣದಲ್ಲಿ ಸತ್ಯ ಹೊರಗಡೆ ಬರುವುದು ರಾಜ್ಯ ಸರಕಾರಕ್ಕೆ ಬೇಕಾಗಿಲ್ಲ. ಮುಡಾ ನಿವೇಶನಗಳನ್ನು ಅವಶ್ಯಕತೆ ಇಲ್ಲದಿದ್ದರೂ ವಾಪಸ್ ಕೊಡಲಾಗಿದೆ. ಅಧ್ಯಕ್ಷರಾಗಿದ್ದ ಮರಿಗೌಡರನ್ನು ಎತ್ತಂಗಡಿ ಮಾಡಿಸಲಾಗಿದೆ. ಅಲ್ಲಿನ ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ಕಳುಹಿಸಲಾಗಿದೆ. ಮುಡಾದಲ್ಲಿ ಅಪಾರವಾದ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಇದೆಲ್ಲವೂ ತೋರಿಸುತ್ತದೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿ ಕುಟುಂಬವೇ ಪಾಲ್ಗೊಂಡ ಇಂಥ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶ ಸರಕಾರದ್ದು. ಮೊದಲು ಎಸ್ಐಟಿಗೆ ತನಿಖೆಯನ್ನು ಕೊಡಲಾಗಿತ್ತು. ಕೋರ್ಟ್ ಆದೇಶವಾಗಿದ್ದರೂ ಎಸ್ಐಟಿ ಈ ಕೇಸನ್ನು ವಾಪಸ್ ಪಡೆದಿಲ್ಲ; ಐಎಎಸ್ ಅಧಿಕಾರಿಗಳ ತಂಡ ತನಿಖೆ ಮಾಡಲಿದೆ ಎಂದು ಹೇಳಲಾಗಿತ್ತು. ಅದನ್ನೂ ವಾಪಸ್ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಲೋಕಾಯುಕ್ತ ಕೂಡ ತನ್ನ ಕೆಲಸ ಪ್ರಾರಂಭಿಸಿತ್ತು. ಆದರೆ, ಲೋಕಾಯುಕ್ತದ ಬಗ್ಗೆ ನನಗೆ ನನ್ನದೇ ಆದ ಅನುಮಾನವಿದೆ. ಇದುವರೆಗೂ ಕೂಡ ಯಾರನ್ನೂ ಕರೆದು ತನಿಖೆಗೆ ಒಳಪಡಿಸಿಯೇ ಇಲ್ಲ; ಕೋರ್ಟ್ ಆದೇಶಗಳನ್ನು ಮೀರಿ ಲೋಕಾಯುಕ್ತ ಇದರಲ್ಲಿ ಒಳಗೊಳ್ಳುತ್ತಿದೆ ಎಂದು ಅನುಮಾನ ಕಾಡುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.