ಬೆಂಗಳೂರು: ಸಿದ್ದರಾಮಯ್ಯನವರು ಮಹರ್ಷಿ ವಾಲ್ಮೀಕಿ ಜಯಂತಿಯ ಉತ್ತಮ ದಿನದಂದು ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮನವಿ ಮಾಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಜ್ ಶೀಟ್ ಸಿದ್ದರಾಮಯ್ಯನವರಿಗೆ ಜ್ಞಾನೋದಯಕ್ಕೆ ಒಂದು ದಾಖಲೆಯಂತಿದೆ ಎಂದು ಭಾವಿಸುವುದಾಗಿ ಹೇಳಿದರು. ಜಸ್ಟಿಸ್ ಗಜಾನನ ಭಟ್ ಅವರು ಕೊಟ್ಟ ಚಾರ್ಜ್ ಶೀಟ್ ಪ್ರತಿಯನ್ನು ಪ್ರದರ್ಶನ ಮಾಡಿದ ಅವರು, ಯಾರೇ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂಬುದನ್ನು ನ್ಯಾಯಾಂಗದ ತೀರ್ಪಿನ ಮುಖಾಂತರ ಬೈಲ್ ಅಪ್ಲಿಕೇಶನ್ ಆರ್ಡರ್ನಲ್ಲಿ ತೋರಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ಇದು ಬಹಳ ಚೆನ್ನಾಗಿದೆ. ಮಧ್ಯಾಹ್ನದ ವರೆಗೆ ಓದಿ; ವಾಲ್ಮೀಕಿ ಜಯಂತಿಯ ದಿನ ಸಾಯಂಕಾಲ ರಾಜೀನಾಮೆ ಕೊಡಿ. ಆ ಮೂಲಕ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿ ಎಂದು ಒತ್ತಾಯಿಸಿದರು.
ಇ.ಡಿ. ಚಾರ್ಜ್ ಶೀಟಿನಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಂದ ಕಾರು ಖರೀದಿ, ಕುಟುಂಬದ ವಿಮಾನ ಪ್ರಯಾಣದ ಟಿಕೆಟ್, ಪೆಟ್ರೋಲ್- ಡೀಸೆಲ್ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ ಪಾವತಿಸಿದ್ದನ್ನು ಉಲ್ಲೇಖಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಆಗಿರುವುದು ಜಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.
ಬಳ್ಳಾರಿ ಲೋಕಸಭಾ ಚುನಾವಣೆಗೋಸ್ಕರ 3 ಶಾಸಕರ ಮೂಲಕ 14.80 ಕೋಟಿ ರೂ. ಹಣ ಬಳಕೆಯಾದುದು ಗೊತ್ತಾಗಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣೇಶ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರ ಮೂಲಕ ಸುಮಾರು 15 ಕೋಟಿ ವಿತರಣೆ ಮಾಡಿದ್ದಾರೆ ಎಂದು ವಿವರಿಸಿದರು.
ಈಗಿನ ಸಂಸದ ತುಕಾರಾಂರನ್ನು ಗೆಲ್ಲಿಸಲು ಒಂದೊಂದು ಮತಕ್ಕೆ 200 ರೂ. ಕೊಟ್ಟ ಆರೋಪವಿದೆ. ತುಕಾರಾಂ ಅವರ ಸ್ಥಾನಕ್ಕೆ ಉಪ ಚುನಾವಣೆ ಬರುತ್ತಿದ್ದು, 200 ರೂ. ಕೊಟ್ಟದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಇಡೀ ಸಮಾಜದ ದುಡ್ಡನ್ನು ನಮಗೆ ಹಂಚಿದ ಕಾರಣ ಅವರಿಗೆ ಬುದ್ಧಿ ಕಲಿಸಬೇಕೆಂದು ಜನ ಕಾಯುತ್ತಿದ್ದಾರೆ ಎಂದು ಭಾವಿಸುವುದಾಗಿ ಹೇಳಿದರು.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಲೋಕಸಭಾ ಚುನಾವಣೆಯಲ್ಲಿ ಕೆಲಸ ನಿರ್ವಹಿಸಲು ಕಾರ್ಯಕರ್ತನಿಗೆ 10 ಸಾವಿರ ರೂಪಾಯಿ ವೆಚ್ಚವನ್ನು ಮಾಡಿದ್ದಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ ಲೋಕಸಭಾ ಚುನಾವಣೆಗೂ ಉಪಯೋಗಿಸಿದ್ದಾರೆ ಎಂಬ ಅಂಶಗಳು ಗೊತ್ತಾಗಿವೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ತಮ್ಮ ಸುದೀರ್ಘವಾದ 40 ವರ್ಷಗಳ ರಾಜಕಾರಣದಲ್ಲಿ ನಾನು ಸತ್ಯಹರಿಶ್ಚಂದ್ರ, ಸಜ್ಜನ ರಾಜಕಾರಣಿಯಾಗಿ ಕೆಲಸ ಮಾಡಿದವ ಎಂದಿದ್ದಾರೆ. ಆದರೆ, ವಾಲ್ಮೀಕಿ ನಿಗಮದ ಹಗರಣ ರಾಜ್ಯದ ಇತಿಹಾಸದಲ್ಲಿ ಯಾರೂ ಮರೆಯಲಾಗದ್ದು ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಈಚಿನ ದಿನಗಳಲ್ಲಿ ತಮ್ಮ ಕಡೆಯಿಂದ ಏನೋ ತಪ್ಪಾಗಿದೆ ಎಂದು ಸಾಬೀತು ಪಡಿಸಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿಯ ಹಗರಣದಲ್ಲಿ ಸುಮಾರು 89 ಕೋಟಿ ಅವ್ಯವಹಾರ ಆಗಿದೆ ಎಂದು ಜನತಾ ನ್ಯಾಯಾಲಯ ವಿಧಾನಸಭೆಯಲ್ಲೇ ಅವರು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.
ಮೊನ್ನೆ ಮೊನ್ನೆ ಯಲ್ಲಮ್ಮ ತಾಯಿಯ ಗುಡಿಗೆ ಹೋದಾಗ ಅವರ ಪತ್ನಿಯ ಹೆಸರಿನಲ್ಲಿ ಅರ್ಚನೆ ಮಾಡಿ ಅವರ ಹೆಸರಿನಲ್ಲಿ ಆದ ಪಾಪ ಪರಿಹಾರಕ್ಕೆ ಪ್ರಾರ್ಥನೆ ಮಾಡಿದ್ದಾರೆ. ದಸರಾ ಉತ್ಸವದಲ್ಲಿ ಚಾಮುಂಡೇಶ್ವರಿಯ ಆ ದೇವಾಲಯಕ್ಕೆ ಹೋದಾಗ, 40 ವರ್ಷಗಳ ಆ ದೇವಾಲಯ ಭೇಟಿಯಲ್ಲಿ ಅತ್ಯಂತ ದೀನನಾಗಿ ತಾನೇ ಕೈಹಾಕಿ ಆ ಕುಂಕುಮವನ್ನು ಹಚ್ಚಿಕೊಂಡಿದ್ದನ್ನು ನೋಡಿದಾಗ ಪ್ರಾಯಶಃ ಸಿದ್ದರಾಮಯ್ಯರಿಗೆ ಜ್ಞಾನೋದಯ ಆದಂತೆ ಭಾಸವಾಗಿದೆ ಎಂದು ವಿಶ್ಲೇಷಿಸಿದರು.
ಸಿದ್ದರಾಮಯ್ಯನವರು ಎಲ್ಲ ಕಡೆ ತಪ್ಪು ಒಪ್ಪಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಹಗರಣವನ್ನು ಒಪ್ಪಿಕೊಂಡಿದ್ದಲ್ಲದೆ, ಪತ್ನಿ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ. ಚಾಮುಂಡೇಶ್ವರಿ ತಾಯಿ ಮುಂದೆ ಭಯಭಕ್ತಿಯಿಂದ ನಡೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು.
ಸಿದ್ದರಾಮಯ್ಯನವರು ರಾಜೀನಾಮೆ ಕೊಡದಿದ್ದರೆ ಬಹಳ ಕಷ್ಟ ಎಂಬ ಸ್ಥಿತಿ ರಾಜ್ಯದಲ್ಲಿದೆ. ದಿನನಿತ್ಯ ಒಂದೊಂದು ಡಜನ್ ಜನರು ಮಾನ್ಯ ರಾಜ್ಯಪಾಲರಲ್ಲಿಗೆ ಹೊಸ ದೂರಿನೊಂದಿಗೆ ಹೋಗುತ್ತಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ, ವಕ್ಫ್ ಬೋರ್ಡ್ ಹಗರಣದ ಕುರಿತು, ಅರ್ಕಾವತಿ ವಿಚಾರದಲ್ಲಿ ಸಿದ್ದರಾಮಯ್ಯನವರು ಮಾಡಿದ ಕರ್ಮಕಾಂಡವನ್ನು ಹೊರಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಇದರಿಂದ ಹೊರಕ್ಕೆ ಬರಬಹುದು ಎಂದು ಡಿ.ವಿ.ಸದಾನಂದಗೌಡ ಅವರು ತಿಳಿಸಿದರು.
ಹಳ್ಳಿಯಲ್ಲಿ ಒಂದು ಗಾದೆ ಇದೆ. ಕಂಬಳಿ ಗುದ್ದು ಹಾಕುವುದು ಎಂದು. ತಪ್ಪು ಮಾಡಿದ ವ್ಯಕ್ತಿಗೆ ಒಬ್ಬ ಕಂಬಳಿ ಹಾಕಿ ಮುಚ್ಚುತ್ತಾನೆ. ಪಕ್ಕದಲ್ಲಿರುವ ಎಲ್ಲರೂ ಬಂದು ಯಾರಿಗೂ ಗೊತ್ತಾಗದಂತೆ ಗುದ್ದು ಹಾಕುತ್ತಾರೆ. ಕರ್ನಾಟಕದಲ್ಲಿ ಈಗ ಸಿದ್ದರಾಮಯ್ಯನವರಿಗೆ ಕಂಬಳಿ ಗುದ್ದು ಬೀಳಲು ಆರಂಭವಾಗಿದೆ ಎಂದು ವಿಶ್ಲೇಷಿಸಿದರು.
ಇದೇವೇಳೆ ಅವರು ರಾಜ್ಯದ ಜನರಿಗೆ ವಾಲ್ಮೀಕಿ ಜಯಂತಿಯ ಶುಭಾಶಯ ಕೋರಿದರು. ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್, ಹೆಚ್. ವೆಂಕಟೇಶ್ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.