ಬೆಂಗಳೂರು: ಇಂದಿನ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಉಪ ಚುನಾವಣೆಗೆ ಸಂಬಂಧಿಸಿ ವಿಸ್ತøತವಾಗಿ ಚರ್ಚೆ ನಡೆಸಿದ್ದೇವೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚನ್ನಪಟ್ಟಣ, ಸೊಂಡೂರು ಮತ್ತು ಶಿಗ್ಗಾಂವಿ ಉಪ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆ ಆಗಬಹುದು. 3 ಉಪ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲುವ ದೃಷ್ಟಿಯಿಂದ ವಿಶೇóಷ ಪ್ರಯತ್ನ ಮಾಡಬೇಕು ಎಂಬ ಚರ್ಚೆ ನಡೆದಿದೆ ಎಂದರು.
ಅಭ್ಯರ್ಥಿ ಸಂಬಂಧಿಸಿ ಎನ್ಡಿಎ ಮಿತ್ರ ಪಕ್ಷವಾದ ಜೆಡಿಎಸ್ ಮತ್ತು ನಮ್ಮ ಕೇಂದ್ರೀಯ ನಾಯಕರ ಜೊತೆ ಸಮಾಲೋಚನೆ ಮಾಡಿ, ನಿರ್ಣಯಿಸಲು ಕೋರ್ ಕಮಿಟಿ ನಿರ್ಧರಿಸಿದೆ. ಈ ಹಿಂದೆ ಶ್ರೀನಿವಾಸ ಪೂಜಾರಿಯವರು ಚುನಾಯಿತರಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ಆ ಉಪ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೋಗಿ ಅಪೇಕ್ಷಿತರ ವರದಿ, 2 ಜಿಲ್ಲೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಬಂದಿದ್ದರು. ಇಲ್ಲಿ ಚರ್ಚಿಸಿದ್ದು, ಕೇಂದ್ರೀಯ ನಾಯಕತ್ವದ ಜೊತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ ಎಂದರು.
ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಚರ್ಚಿಸಲಾಗಿದೆ. ಈ ಸರಕಾರದ ಮೇಲೆ ನಿರಂತರವಾಗಿ ಬರುತ್ತಿರುವ ಆಧಾರಸಹಿತವಾದ ಭ್ರಷ್ಟಾಚಾರದ ಆರೋಪಗಳು, ಅದರ ವಿರುದ್ಧ ಇನ್ನಷ್ಟು ಜನಾಂದೋಲನ ರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಈ ಸರಕಾರದ ಹಿಂದೂ ವಿರೋಧಿ ನೀತಿ, ಗಣೇಶೋತ್ಸವದ ಮೇಲೆ ನಿರ್ಬಂಧ ಹೇರುತ್ತಿರುವುದು, ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಮುಖಂಡರ ಮೇಲೆ ದಿಗ್ಬಂಧನವನ್ನು ಹಾಕುತ್ತಿರುವುದು, ಓಲೈಕೆಯ ರಾಜಕಾರಣ ಕುರಿತು ಚರ್ಚಿಸಿದ್ದೇವೆ. ಈ ಸಂಬಂಧ ಪರಿವಾರ ಸಂಘಟನೆಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಹೋರಾಟ ನಡೆಸುವ ಚಿಂತನೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಡೆದಿದೆ ಎಂದರು.
ನಮ್ಮ ಶಾಸಕ ಮುನಿರತ್ನ ಅವರ ಮೇಲೆ ಎಸ್ಐಟಿ ರಚನೆ ಮಾಡಿದ್ದಾರೆ. ಇಂಥದ್ದೇ ಆಪಾದನೆಗಳು ಕಾಂಗ್ರೆಸ್ ಶಾಸಕರ ಮೇಲೆ ಬಂದಾಗ ಅವರಿಗೆ ಒಂದು ನೀತಿ, ಬಿಜೆಪಿ ಶಾಸಕರಿಗೆ ಮತ್ತೊಂದು ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸರಕಾರ ಪೂರ್ವಗ್ರಹ ಪೀಡಿತವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸತ್ಯಾಸತ್ಯತೆ ತನಿಖೆ ನಡೆಸುವುದು ಬೇರೆ. ಪೂರ್ವಗ್ರಹ, ರಾಜಕೀಯ ದ್ವೇಷದಿಂದ ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ನಡೆಸುವ ಸಂಚು ಬೇರೆ. ಈ ಸರಕಾರವು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸುವುದು ವ್ಯಕ್ತವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಾತನಾಡುವ ಇವರು ಸರ್ವಾಧಿಕಾರಿ, ಸಂವಿಧಾನಬಾಹಿರವಾಗಿ ದ್ವೇಷದ ನಡೆಯನ್ನು ತೋರುವ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಿಕಟಪೂರ್ವ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಪುದುಚೇರಿ ರಾಜ್ಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣ ಅವರು ಪಾಲ್ಗೊಂಡಿದ್ದರು ಎಂದು ವಿವರ ನೀಡಿದರು.
ಮುಖ್ಯಮಂತ್ರಿಗಳು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ರೀಡೂ ನಾನು ಮಾಡಿದ್ದೇನ್ರಿ. ಅದು ಸುಪ್ರೀಂ ಕೋರ್ಟ್ ಆದೇಶ’ ಎಂದಿದ್ದಾರೆ. ಇವರು (ಮುಖ್ಯಮಂತ್ರಿಗಳು) ಅರ್ಧಸತ್ಯವನ್ನಷ್ಟೇ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದೀರಿ. ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆಯೇ ಅದರ ತನಿಖೆಗೆ ಕೆಂಪಣ್ಣ ಆಯೋಗವನ್ನು ನೀವು ರಚಿಸಿದ್ದಿರಿ. ಬಂಡು ರಾಮಸ್ವಾಮಿ ಪ್ರಕರಣದಲ್ಲಿ 2010ರಲ್ಲಿ ತೀರ್ಪು ಕೊಡಲಾಗಿತ್ತು. 4 ವರ್ಷ ವರದಿಯನ್ನೂ ಕೊಡದೆ, ಈಗ ನೀವು ಬೇಕಾಬಿಟ್ಟಿ 880 ಎಕರೆಗೂ ಹೆಚ್ಚು ಡಿನೋಟಿಫಿಕೇಶನ್ ಮಾಡಿದ್ದೀರಿ ಎಂದು ಸಿ.ಟಿ.ರವಿ ಅವರು ಆಕ್ಷೇಪಿಸಿದರು.
ಆ ಪ್ರಕರಣದಲ್ಲಿ ಗ್ರೀನ್ ಬೆಲ್ಟ್ ಇದ್ದರೆ, ಶಿಕ್ಷಣ ಸಂಸ್ಥೆಗಳಿದ್ದರೆ, ಚಾರಿಟಬಲ್ ಸಂಸ್ಥೆ ನಡೆಸುತ್ತಿದ್ದರೆ, ಸ್ಮಶಾನ ಇದ್ದರೆ, ನರ್ಸರಿ ಇದ್ದರೆ, ಕಟ್ಟಡಗಳಾಗಿ ಅಭಿವೃದ್ಧಿ ಆಗಿದ್ದರೆ, ಬಿಡಿಎ ಬಡಾವಣೆಗೆ ಸಂಪರ್ಕವೇ ಇಲ್ಲದಿದ್ದರೆ (ದ್ವೀಪದ ಥರ) ಅದು ಕೇವಲ 6 ಗ್ರಾಮಕ್ಕೆ ಮಾತ್ರ (ಮನವಿದಾರರಿಗೆ ಮಾತ್ರ) ಡಿನೋಟಿಫಿಕೇಶನ್ಗೆ ಪರಿಗಣನೆ ಎಂದು ತಿಳಿಸಿದ್ದಾರೆ. ಕೆಂಪಾಪುರ, ಶ್ರೀರಾಮಪುರ, ವೆಂಕಟೇಶಪುರ, ನಾಗವಾರ, ಹೆಣ್ಣೂರು ಮತ್ತು ಚಳ್ಳಕೆರೆ ಅದರಡಿ 6 ಗ್ರಾಮಗಳು. ನೀವು ಅದನ್ನು ಬಿಟ್ಟು 16 ಹಳ್ಳಿಗಳಿಗೆ ಸಂಬಂಧಿಸಿದ, ಬಿಡಿಎ ಅಭಿವೃದ್ಧಿಪಡಿಸಿ, ಲೇ ಔಟ್ ಮಾಡಿ ನಿವೇಶನ ಹಂಚಿದ್ದ ಪ್ರದೇಶವನ್ನೂ ಡಿನೋಟಿಫಿಕೇಶನ್ ಮಾಡಿದ್ದೀರಿ. ನಿವೇಶನಕ್ಕೆ ಹಣ ಕಟ್ಟಿಸಿಕೊಂಡು ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಂಡು ಆಗಿತ್ತು. ಅದನ್ನೂ ಡಿನೋಟಿಫಿಕೇಶನ್ ಮಾಡಿ ನಿವೇಶನ ಹಂಚಿಕೆದಾರರು ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ಅವರಿಗೆ ಕೆಂಪೇಗೌಡ ಬಡಾವಣೆ, ಬೇರೆ ಬಡಾವಣೆ ತೋರಿಸುತ್ತಿದ್ದೀರಿ. ಅವರು ಅರ್ಕಾವತಿ ಬಡಾವಣೆಗೆ ಹಣ ಕಟ್ಟಿದ್ದರು. ಇದರಲ್ಲಿ ಯಾರ ಹಿತಾಸಕ್ತಿ ರಕ್ಷಿಸಿದ್ದೀರಿ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.