ನವದೆಹಲಿ: ಗೋಮಾಂಸ ಸೇರಿದಂತೆ ಇತರ ವಿಷಯಗಳ ಬಗ್ಗೆ ದೇಶದಲ್ಲಿ ತಲೆದೋರುತ್ತಿರುವ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಹೊಣೆ ಮಾಡುತ್ತಿರುವುದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಿಷ್ಠಪಕ್ಷ ಮೆಕ್ಕಾದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಮೋದಿ ಕಾರಣವೆಂದು ಹೇಳಿ ಕೆಲವರು ಅವರನ್ನು ದೂಷಿಸಲಿಲ್ಲವಲ್ಲ ಅದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಉತ್ತರಪ್ರದೇಶದ ದಾದ್ರಿ ಘಟನೆಯ ಬಗ್ಗೆ ಪ್ರಧಾನಿಯವರು ಮೌನವಹಿಸಿದ್ದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಅವರು, ’ಒಂದು ವೇಳೆ ಅವರು ಮಾತನಾಡಿದರೆ, ಜನ ಅವರಕೆ ಮಾತನಾಡಿದರು ಎಂದು ಪ್ರಶ್ನಿಸುತ್ತಾರೆ. ಮಾತನಾಡದೇ ಇದ್ದರೆ, ಜನ ಅವರೇಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ, ಇಂತಹ ಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ’ ಎಂದರು.
ಗೋಮಾಂಸಕ್ಕೆ ಸಂಬಂಧಿಸಿದ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಪ್ರಮುಖ ರಾಜಕೀಯ ವಿಷಯವಲ್ಲ. ಕೆಲ ಮಾಧ್ಯಮಗಳು, ಕೆಲ ನಾಯಕರುಗಳು ಇದರಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಭಾರತದಲ್ಲಿ ಇಂತಹ ಘಟನೆಗಳ ಇತಿಹಾಸವೇ ಇದೆ.
1947ರಿಂದಲೂ ದೇಶದ ವಿವಿಧ ಮೂಲೆಯಲ್ಲಿ ಸಣ್ಣ ವಿಷಯಕ್ಕೆ ದಂಗೆಗಳಾಗುತ್ತಿದೆ. ಇದು ದುರಾದೃಷ್ಟ. ಇಂತಹುಗಳು ಆಗಬಾರದು. ಇದನ್ನು ತಡೆಯ ಬೇಕಾದ ಅಗತ್ಯವಿದೆ. ಕಾನೂನು ತನ್ನ ಕ್ರಮವನ್ನು ಜರುಗಿಸಲಿದೆ. ನಾವು ಯಾರಿಗೂ ಬೇಧಭಾವ ಮಾಡುವುದಿಲ್ಲ. ಎಲ್ಲರಿಗೂ ಅಭಿವೃದ್ಧಿ, ಎಲ್ಲರಿಗೂ ಶಿಕ್ಷಣ ನೀಡುತ್ತೇವೆ. ಇಂತಹ ಘಟನೆಗಳನ್ನು ತಡೆಯಲು ನಮ್ಮ ಸರ್ಕಾರ ಪ್ರಯತ್ನಿಸಲಿದೆ ಎಂದರು.
ಸರ್ಕಾರದಲ್ಲಿ ಮೋದಿಯೇ ಎಲ್ಲಾ ನಿರ್ಧಾರ ಕೈಗೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ತಾಯಿ ಮಗನ ಅಥವಾ ತಂದೆ ಮಗನ ಪಕ್ಷವಲ್ಲ. ಬಿಜೆಪಿ ಯಾರೊಬ್ಬರ ಆಸ್ತಿಯೂ ಅಲ್ಲ, ಅದು ನರೇಂದ್ರ ಮೋದಿಯವರ ಅಥವಾ ವಾಜಪೇಯಿಯವರ ಅಥವಾ ಗಡ್ಕರಿ, ಅಮಿತ್ ಷಾ ಅವರ ಪಕ್ಷವಲ್ಲ, ಇದು ಪ್ರಜಾಪ್ರಭುತ್ವ ಪಕ್ಷ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.