ಮಂಗಳೂರು: ಎತ್ತಿನಹೊಳೆ ವಿರೋಧಿ ಹೋರಾಟಗಾರರ ಎಲ್ಲಾ ಹೋರಾಟಕ್ಕೆ ಬಿಜೆಪಿ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಈ ವಿಷಯ ರಾಜಕಾರಣಗೊಳ್ಳಬಾರದು ಎಂಬ ಕಾರಣಕ್ಕೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದೇವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಎತ್ತಿನಹೊಳೆ ಯೋಜನೆಯ ಬಗ್ಗೆ ದಕ್ಷಿಣಕನ್ನಡ ಬಿಜೆಪಿ ಒಂದೇ ನಿಲುವನ್ನು ತಳೆದಿದೆ. ಈ ಭಾಗದ ಜನರ ಭಾವನೆಯನ್ನು ನಾಯಕರುಗಳಿಗೆ ಮನದಟ್ಟು ಮಾಡುವ ಕಾರ್ಯ ಮಾಡುತ್ತಿದ್ದೇವೆ’ ಎಂದರು.
’ಬಿಜೆಪಿಯಿಂದ ಹೋರಾಟ ರಾಜಕೀಯಗೊಳ್ಳಬಾರದು ಎಂಬ ಕಾರಣಕ್ಕೆ ಎಚ್ಚರಿಕೆ ಹೆಜ್ಜೆಯಿಡುತ್ತಾ ಬಂದಿದ್ದೇವೆ. ಇದೀಗ ಯೋಜನೆಯ ಕಾಮಗಾರಿಗಳು ವೇಗ ಪಡೆದುಕೊಂಡ ಹಿನ್ನಲೆಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ, ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುವ ಸಲುವಾಗಿ ಏಕೀಕೃತ ಹೋರಾಟಕ್ಕೆ ಧುಮುಕಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ. ಆದರೆ ದಕ್ಷಿಣಕನ್ನಡ ಜನರ ಭಾವನೆಗೆ ಸ್ಪಂದಿಸಿ, ಸತ್ಯದ ಅವಲೋಕನ ಮಾಡಿ, ತಜ್ಞರ ಸಲಹೆ ಪಡೆದು ಬಳಿಕ ಯೋಜನೆಯ ಬಗ್ಗೆ ನಿರ್ಧಾರಕೈಗೊಳ್ಳಬೇಕು’ ಎಂದರು.
ಕಾನೂನು ತಂಡ, ತಜ್ಞರ ತಂಡ ಮತ್ತು ಜನರಿಗೆ ಮಾಹಿತಿ ನೀಡುವ ತಂಡ ಹೀಗೆ ಬಿಜೆಪಿ ಮೂರು ತಂಡಗಳನ್ನು ರಚಿಸಿ ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟ ರೂಪಿಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ, ’ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಅ.10ರಿಂದ ನಾಲ್ಕು ದಿನಗಳ ಕಾಲ್ನಡಿಗೆ ಜಾಥಾ ನಡೆಸುತ್ತಿತ್ತು. ಅಂದು ಕಂಕನಾಡಿ ಬ್ರಹ್ಮಬೈದರ್ಕುಳ ಗರಡಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ, ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಕಾಲ್ನಡಿಗೆ ಆರಂಭಿಸಲಾಗುತ್ತಿದೆ. ಅ.13ರಂದು ಈ ಕಾಲ್ನಡಿಗೆ ಎತ್ತಿನಹೊಳೆಯಲ್ಲಿ ಸಮಾಪಣಗೊಳ್ಳಲಿದೆ’ ಎಂದರು.
ಸುಮಾರು 500ರಿಂದ ಸಾವಿರದವರೆಗೆ ಬಿಜೆಪಿ ಕಾರ್ಯಕರ್ತರು ಈ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಸಂಘಟನೆಗಳು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ನಿರಂತರ ನಾಲ್ಕು ದಿನ ಕಾಲ್ನಡಿಗೆ ನಡೆಯಲಿದ್ದು 120 ಕಿ.ಮೀ ದೂರ ಕ್ರಮಿಸಲಿದೆ ಎಂದರು.
ಈ ಕಾಲ್ನಡಿಗೆ ಜಾಥಾಗೆ ಸಕ್ಲೇಶಪುರದ ಜನರೂ ಬೆಂಬಲ ನೀಡಿದ್ದು, ಜಾಥಾ ಅಲ್ಲಿಗೆ ತಲುಪುತ್ತಿದ್ದಂತೆ ಅವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.