ನವದೆಹಲಿ: ಇಂದು ದೇಶದಾದ್ಯಂತ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ ಮುಖ್ಯ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಕಳೆದ ವರ್ಷ ಇದೇ ದಿನದಂದು, ಚಂದ್ರಯಾನ-3 ಮಿಷನ್ನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಸಾಧಿಸಿದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 23 ಅನ್ನು ಬಾಹ್ಯಾಕಾಶ ದಿನವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ವರ್ಷ ಮೊದಲ ಬಾಹ್ಯಾಕಾಶ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಚಂದ್ರನ ದಕ್ಷಿಣ ಧ್ರವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ಭಾರತವು ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೇ ಚಂದ್ರಯಾನ ನಡೆಸಿದ ಕೆಲವೇ ಕೆಲವು ರಾಷ್ಟ್ರಗಳ ಗಣ್ಯ ಗುಂಪಿಗೆ ಸೇರ್ಪಡೆಗೊಂಡಿತು. ಚಂದ್ರನ ಮೇಲ್ಮೈಯಲ್ಲಿ ಇಳಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿತು.
ಸಾಫ್ಟ್ ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್ ಯಶಸ್ವಿ ನಿಯೋಜನೆ ಮಾಡಲಾಯಿತು. ಲ್ಯಾಂಡಿಂಗ್ ಸೈಟ್ ಅನ್ನು ಶಿವ ಶಕ್ತಿ ಪಾಯಿಂಟ್ ಎಂದು ಹೆಸರಿಸಲಾಯಿತು ಮತ್ತು ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಲಾಯಿತು. ರಾಷ್ಟ್ರೀಯ ಬಾಹ್ಯಾಕಾಶ ದಿನವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಗಮನಾರ್ಹ ಸಾಧನೆಗಳನ್ನು ಗುರುತಿಸುತ್ತದೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿನ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಪಯಣ 1960 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಸ್ಥಾಪಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಿರವಾದ ಪ್ರಗತಿಯನ್ನು ಭಾರತ ಸಾಧಿಸಿತು.
“ಚಂದ್ರನನ್ನು ಸ್ಪರ್ಶಿಸುತ್ತಾ ಜೀವನವನ್ನು ಸ್ಪರ್ಶಿಸುವುದು: ಭಾರತದ ಬಾಹ್ಯಾಕಾಶ ಪಯಣ” ಥೀಮ್ನಲ್ಲಿಈ ವರ್ಷ ಬಾಹ್ಯಾಕಾಶ ದಿನವನ್ನು ಅಚರಣೆ ಮಾಡಲಾಗುತ್ತಿದೆ, ಇದು ಸಮಾಜ ಮತ್ತು ತಂತ್ರಜ್ಞಾನದ ಮೇಲೆ ಬಾಹ್ಯಾಕಾಶ ಪರಿಶೋಧನೆಯ ಆಳವಾದ ಪ್ರಭಾವವನ್ನು ಒತ್ತಿಹೇಳುತ್ತದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ರಾಷ್ಟ್ರಪತಿ ರೋಬೋಟಿಕ್ಸ್ ಚಾಲೆಂಜ್ ಮತ್ತು ಭಾರತೀಯ ಅಂತರಿಕ್ಷ್ ಹ್ಯಾಕಥಾನ್ ವಿಜೇತರನ್ನು ಪುರಸ್ಕರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.