ಧಾರವಾಡ: ಆರ್ಎಸ್ಎಸ್ ತನ್ನ ಸ್ವಯಂಸೇವಕರಿಗೆ ಕಠಿಣ ಪ್ರಶಿಕ್ಷಣ ನೀಡುವ ಮೂಲಕ ಸ್ವಯಂಸೇವಕರಲ್ಲಿ ಸಾಹಸಿ ಪ್ರವೃತ್ತಿಯ ಜೊತೆಗೆ ರಾಷ್ಟ್ರಭಕ್ತಿ ಮೊಳಗುವಂತೆ ಮಾಡುತ್ತದೆ. ಮುಂಬರುವ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಾ ಸಾಹಸದ ಮತ್ತು ಶೌರ್ಯದ ಇತಿಹಾಸ ಬರೆಯೋಣ ಎಂದು ನಿವೃತ್ತ ಬ್ರೀಗೇಡಿಯರ್ ಶ್ರೀ ಸುಧೀಂದ್ರ ಇಟ್ನಾಳ ಹೇಳಿದರು.
ಅವರು ಧಾರವಾಡದ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಎಸ್ಎಸ್ ತನ್ನ ಸ್ವಯಂಸೇವಕರಿಗೆ ಈ ಬಗೆಯ ವರ್ಗಗಳಿಂದ ಪ್ರಶಿಕ್ಷಣ ನೀಡುವ ಮೂಲಕ ಪ್ರತಿ ಸ್ವಯಂಸೇವಕರನ್ನು ಶಾರೀರಿಕ,ಮಾನಸಿಕ ಮತ್ತು ಬೌದ್ಧಿಕವಾಗಿ ಸಶಕ್ತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಸೈನ್ಯವು ಕೂಡಾ ತಮ್ಮ ಸೇನಾ ತರಬೇತಿಯಲ್ಲಿ ಸೈನಿಕರಿಗೆ ಕಠಿಣವಾದ ತರಬೇತಿ ನೀಡುತ್ತದೆ. ಅದರ ಪರಿಣಾಮ ಆ ಸೈನಿಕರು ಪ್ರಕೃತಿ ವಿಕೋಪ, ಯುದ್ಧ, ಗಲಭೆ ಹೀಗೆ ಅನೇಕ ಕಷ್ಟಕರ ಸಮಯದಲ್ಲಿ ರಾಷ್ಟ್ರ ರಕ್ಷಣೆಗಾಗಿ ಹೋರಾಡುತ್ತಾರೆ. ಕೇವಲ ಶಾರೀರಿಕ ಪ್ರಶಿಕ್ಷಣ ನೀಡಿದರೆ ಸಾಲದು, ಮಾನಸಿಕ ಮತ್ತು ಬೌದ್ಧಿಕ ಪ್ರಶಿಕ್ಷಣ ಕೂಡಾ ಅವಶ್ಯವಾಗಿರುತ್ತದೆ. ಏಕೆಂದರೆ ಸೈನಿಕ ಮೊದಲು, ಸದಾ ಚಂಚಲವಾಗಿರುವ ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸುವ ಬಗೆ ಕಲಿತರೆ, ಎಂತಹ ವಿಪತ್ತಿನಿಂದ ಕೂಡಾ ಪಾರಾಗಬಲ್ಲನು ಎಂದರು.
ಸಾಧನೆಯಿಲ್ಲದೇ ಮರಣ ಹೊಂದಿದರೆ, ನಾವು ಸಾವಿರ ಅಗೌರವ ತೋರಿದಂತೆ, ಅದೇ ರೀತಿ ಆದರ್ಶ ರಹಿತವಾದ ಬದುಕಿದರೆ, ಬದುಕಿಗೆ ಅಪಮಾನ ತೋರಿದಂತೆ ಆಗುವುದು. ಹಾಗಾಗೀ ಸಾಧನೆ ಮತ್ತು ಆದರ್ಶ ಈ ಎರಡು ಸಂಗತಿಗಳು ಪ್ರತಿಯೊಬ್ಬರಿಗೂ ಅವಶ್ಯ. ಆರ್ಎಸ್ಎಸ್ನ ಸ್ವಯಂಸೇವಕರು ಪರೋಪಕಾರ ಮತ್ತು ರಾಷ್ಟ್ರ ಮೊದಲು ಎಂಬ ಭಾವ ಮೈಗೂಡಿಸಿಕೊಳ್ಳಲು ಈ ಬಗೆಯ ಪ್ರಶಿಕ್ಷಣ ವರ್ಗಗಳು ಬಹಳ ಉಪಯುಕ್ತವಾಗುತ್ತವೆ. ಆರ್ಎಸ್ಎಸ್ ಸ್ವಯಂಸೇವಕರು ಬಹಳ ರಾಷ್ಟ್ರಭಕ್ತಿಯನ್ನು ಹೊಂದಿರುತ್ತಾರೆ. ಆದ ಕಾರಣ ಸ್ವಯಂಸೇವಕರಂತೆ ರಾಷ್ಟ್ರಭಕ್ತಿ ಹೊಂದಿರುವವರು ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಂಡು ಸೈನ್ಯದ ಶಕ್ತಿಯನ್ನು ಹಿಗ್ಗಿಸಬೇಕು ಎಂದು ಕರೆ ನೀಡಿದರು.
ಆರ್ಎಸ್ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಪ್ರಾಂತ ಕಾರ್ಯವಾಹ ಶ್ರೀ ಕಿರಣ ಗುಡ್ಡದಕೇರಿ ಮಾತನಾಡಿ, ಆರ್ಎಸ್ಎಸ್ ಸಮಾಜದಲ್ಲಿ ಬೇರೂರಿದ ಬೇಧ ಭಾವವನ್ನು ತೊಡೆದು ಹಾಕಲು ಕಾರ್ಯನಿರ್ವಹಿಸುತ್ತದೆ. ಸಾಮರಸ್ಯದಿಂದ ಕೂಡಿದ ಸಮಾಜ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಆದ್ದರಿಂದ ಸಾಮರಸ್ಯ ಭರಿತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಮಾತೃಭಾಷೆ ಕಲಿಕೆ, ಸ್ವದೇಶಿ ವಸ್ತುಗಳ ಬಳಕೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ ಮುಕ್ತ ಸಮಾಜ ಈ ವಿಷಯಗಳ ಕುರಿತಾಗಿ ಕೂಡಾ ಗಮನ ಹರಿಸುವ ಅವಶ್ಯಕತೆಯಿದೆ. ಮನೆಯ ಮಕ್ಕಳಿಗೆ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ದೊರೆಯುವಂತೆ ಮಾಡಿದಾಗ ಆ ಮಕ್ಕಳ ಗ್ರಹಿಕೆಯ ಶಕ್ತಿ ಮತ್ತು ಬುದ್ಧಿಮತ್ತೆ ಚುರುಕಾಗುತ್ತದೆ ಎಂದು ವಿಜ್ಞಾನದ ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ. ಆದ್ದರಿಂದ ಮಾತೃಭಾಷೆ ಬಳಕೆ ಮತ್ತು ಕಲಿಕೆಗೆ ಅದ್ಯತೆ ನೀಡುವ ಬಗ್ಗೆ ಅವರು ಒತ್ತಾಯಿಸಿದರು.
ಇತ್ತೀಚೆಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹಳಷ್ಟು ನಕಾರಾತ್ಮಕ ಬೆಳವಣಿಗೆಗಳನ್ನು ಕಂಡುಬರುತ್ತಿವೆ. ಮಕ್ಕಳ ಜನ್ಮ ನೀಡವುದರಿಂದ ಯುವ ದಂಪತಿಗಳು ವಿಮುಖರಾಗುತ್ತಿರುವುದು ಉತ್ತಮ ಸಂಗತಿಯಲ್ಲ. ಕೌಟುಂಬಿಕ ವ್ಯವಸ್ಥೆ ಸಮಾಜದ ಅತ್ಯಂತ ಚಿಕ್ಕ ಘಟಕ. ಆ ಘಟಕದ ಎಷ್ಟು ಪರಿಪೂರ್ಣ ಮತ್ತು ಸಶಕ್ತವಾಗುವುದು ಸಮಾಜ ಕೂಡಾ ಸಶಕ್ತ ಮತ್ತು ಸಮೃದ್ಧವಾಗುವುದು. ಸಂತಾನ ರಹಿತ ಬದುಕಿಗೆ ಮುಂದಾಗುತ್ತಿರುವ ಯುವಜನಾಂಗಕ್ಕೆ ಸಂತಾನದ ಮಹತ್ವ ತಿಳಿಸುವ ಅವಶ್ಯಕತೆಯಿದೆ. ಸಂತಾನ ರಹಿತ ಜೀವನವು ಹಿಂದು ಜನಸಂಖ್ಯಾ ಅಸಮತೋಲನ ಮತ್ತೊಂದೆಡೆ ಭಾರತೀಯ ಸಂಸ್ಕೃತಿ ವಿನಾಶಕ್ಕೆ ನಾಂದಿ ಹಾಡುತ್ತದೆ ಎಂದರು.
ನಿತ್ಯ ಶಾಖೆಗೆ ಸ್ವಯಂಸೇವಕರು ಒತ್ತು ನೀಡಿದ್ದಲ್ಲಿ ಸಮಾಜ ಎದುರಿಸುತ್ತಿರುವ ಈ ಬಗೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸಂಘ ಮತ್ತು ಸಮಾಜಕ್ಕೆ ಶಕ್ತಿ ಲಭಿಸುತ್ತದೆ. ಆದ್ದರಿಂದ ನಿತ್ಯ ನಿಯಮಿತ ಶಾಖೆಗೆ ಸ್ವಯಂಸೇವಕರು ಒತ್ತು ನೀಡಬೇಕು ಮತ್ತು ವ್ಯಕ್ತಿ ನಿರ್ಮಾಣ ಕಾರ್ಯಕ್ಕೆ ಶಕ್ತಿ ತುಂಬಬೇಕು ಎಂದರು.
ಈ ಸಂದರ್ಭದಲ್ಲಿ ವರ್ಗದ ಪ್ರಶಿಕ್ಷಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು. ಸಂಘದ ಶಾಖೆಯಲ್ಲಿ ಮಾಡಲಾಗುವ ವ್ಯಾಯಾಮ, ದಂಡವ್ಯಾಯಾಮ, ದೇಸಿ ಆಟಗಳನ್ನು ಪ್ರದರ್ಶಿಸಲಾಯಿತು.
ವಗಾ೯ಧಿಕಾರಿಯಾದ ಡಾ.ವೇದವ್ಯಾಸ ದೇಶಪಾ೦ಡೆ, ಹಿರಿಯರಾದ ಶ್ರೀ ಸು ರಾಮಣ್ಣ, ಶ್ರೀ ವಿ. ನಾಗರಾಜ, ಪ್ರಾ೦ತ ಕಾಯ೯ವಾಹರಾದ ಶ್ರೀ ರಾಘವೇ೦ದ್ರ ಕಾಗವಾಡ, ಪ್ರಾ೦ತ ಪ್ರಚಾರಕರಾದ ಶ್ರೀ ನರೇಂದ್ರ ಮತ್ತು ಶಿಬಿರಾಥಿ೯ಗಳು ಮತ್ತಿತರ ಪ್ರಮುಖ ಕಾಯ೯ಕತ೯ರು, ಹಿತೈಷಿಗಳು, ಮಾತೆಯರು, ಮಾಧ್ಯಮ ಪ್ರತಿನಿಧಿಗಳು
ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.