ಬೆಂಗಳೂರು: ಅದಕ್ಷ, ಅಸಮರ್ಥ ಗೃಹ ಸಚಿವರನ್ನು ಕೂಡಲೇ ಸಚಿವಸಂಪುಟದಿಂದ ವಜಾ ಮಾಡಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಗೃಹ ಸಚಿವರು ಈ ದೇಶ ಕಂಡ ಅಸಮರ್ಥ ಗೃಹ ಸಚಿವರಲ್ಲಿ ಮೊದಲಿಗರು. ಇವರ ಆಡಳಿತದಲ್ಲಿ ಇಷ್ಟೊಂದು ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳು ನಡೆದಿವೆ. ದರೋಡೆಗಳೂ ನಡೆಯುತ್ತಿದ್ದು, ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಈ ಸರಕಾರ ಬಂದ ಬಳಿಕ ಪೊಲೀಸ್ ಇಲಾಖೆಯಿಂದ ಸಕ್ರ್ಯುಲರ್ ಅನ್ನುವುದೇ ಮರೆತುಹೋಗಿದೆ ಎಂದು ಟೀಕಿಸಿದರು.
ಹಿಂದೆ ರಾಜ್ಯದಲ್ಲಿ ಒಂದು ಅಪರಾಧ ಪ್ರಕರಣ ನಡೆದರೂ, ಎಲ್ಲೋ ಒಂದು ದರೋಡೆ, ಅತ್ಯಾಚಾರ ನಡೆದರೆ ಎಲ್ಲ ಪೊಲೀಸ್ ಠಾಣೆಗೆ ಸುತ್ತೋಲೆ ಕಳುಹಿಸಲಾಗುತ್ತಿತ್ತು. ತಾವು ಗಸ್ತನ್ನು ತೀವ್ರಗೊಳಿಸಬೇಕು; ಸಂಶಯಿತರನ್ನು ತಪಾಸಣೆಗೆ ಒಳಪಡಿಸಿ; ರೌಡಿಗಳ ಪರೇಡ್ ಮಾಡಬೇಕು ಎಂದು ಸುತ್ತೋಲೆ ಕಳಿಸುತ್ತಿದ್ದರು. ಹೊಸ ಸರಕಾರ ಬಂದ ಬಳಿಕ ಪೊಲೀಸ್ ಇಲಾಖೆಗೆ ಕ್ರಿಯಾಶೀಲವಾಗಲು ಒಂದೇ ಒಂದು ಸುತ್ತೋಲೆ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಡಿಜಿಪಿಗೆ ಗೃಹ ಸಚಿವರೇ ಸೂಚನೆ ಕೊಡುತ್ತಿಲ್ಲ ಎಂದಾದಾಗ ಡಿಜಿ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ಸಿನ ಕಚೇರಿಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಟೀಕಿಸಿದರು. ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಲು 3 ಕಾರಣಗಳು ಇರಬೇಕೆಂದು ಸುಪ್ರೀಂ ಕೋರ್ಟ್ ಬಹಳಷ್ಟು ಸಲ ಹೇಳಿದೆ. ಆರೋಪಿ ತಲೆ ಮರೆಸಿಕೊಳ್ಳುವ ವ್ಯಕ್ತಿ ಆಗಿದ್ದರೆ ಕೂಡಲೇ ಬಂಧಿಸಬೇಕು. ಆತ ಸಾಕ್ಷ್ಯ ನಾಶ ಮಾಡುವ ಅವಕಾಶಗಳಿದ್ದರೆ, ಇಲ್ಲವೇ ಫಿರ್ಯಾದಿದಾರ ಅಥವಾ ದೂರುದಾರನ ಮೇಲೆ ಪ್ರಭಾವ ಬೀರಿ ಆತನಿಗೆ ಅಪಾಯ ತಂದೊಡ್ಡುವ ಸ್ಥಿತಿ ಇದ್ದರೆ ಬಂಧಿಸಬೇಕು ಎಂದು ತಿಳಿಸಿದೆ ಎಂದು ಪಿ.ರಾಜೀವ್ ಅವರು ತಿಳಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಪ್ರಕರಣದಲ್ಲಿ ಅವರು ತಲೆ ಮರೆಸಿಕೊಳ್ಳುವುದು, ಸಾಕ್ಷ್ಯ ನಾಶ ಮಾಡುವುದು ಇರಲಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಅವರನ್ನು ಬಂಧಿಸುವ ಉದ್ದೇಶದಿಂದ 70 ಜನ ಪೊಲೀಸರನ್ನು ಈ ಸರಕಾರ ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು.
ಹರೀಶ್ ಪೂಂಜ ಅವರು ಹಿಂದೆ ಬೇರೊಬ್ಬರು ಪ್ರತಿಭಟನಾ ಭಾಷಣದಲ್ಲಿ ಯಾವ ರೀತಿ ಉಲ್ಲೇಖಿಸಿದ್ದರು ಎಂದುದನ್ನು ಭಾಗಶಃ ಇಟ್ಟುಕೊಂಡು ಸುಳ್ಳು ಆರೋಪವನ್ನು ಅಥವಾ ತಪ್ಪು ಅಭಿಪ್ರಾಯ ಸೃಷ್ಟಿಸಲು ಷಡ್ಯಂತ್ರ ಮಾಡಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಅಪರಾಧದ ಉದ್ದೇಶ ಇರಲಿಲ್ಲ. ಈ ರೀತಿ ಕೆಲಸ ಮಾಡುವ ಈ ಸರಕಾರವು ಸುಧಾಕರ್ ಅವರ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಾಗಿದ್ದರೂ ಅವರನ್ನು ಬಂಧಿಸÀಲಿಲ್ಲ. ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಮಾರಣಾಂತಿಕವಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಬೆಳಗಾವಿಯ ಪೃಥ್ವಿ ಎಂಬವರು ದೂರು ದಾಖಲಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಪೆನ್ ಡ್ರೈವ್ ಹಂಚುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಇದೆ ಎಂದು ಬಂದರೂ ಕೂಡ ಈ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನು ಕರೆದು ವಿಚಾರಣೆ ಮಾಡಿಲ್ಲ. ಬಿಜೆಪಿಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಮಾಡುವುದರಲ್ಲಿ ಈ ಸರಕಾರ ಬ್ಯುಸಿಯಾಗಿದೆ ಎಂದು ತಿಳಿಸಿದರು.
ಈ ಸರಕಾರವು ರೈತರ ಮರಣಶಾಸನಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಆಕ್ಷೇಪಿಸಿದರು. ರೈತರ ಬದುಕಿನ ಜೊತೆ ಈ ಸರಕಾರ ಚೆಲ್ಲಾಟ ಆಡುತ್ತಿದೆ. ದೆಹಲಿ ವರೆಗೆ ಹೋಗಿ ಹೋರಾಟ ಮಾಡುವುದಾಗಿ ಬಿಂಬಿಸಿದ್ದರು. ಆ ನಂತರದಲ್ಲಿ ರಾಜ್ಯ ಸರಕಾರ ರೈತರಿಗೆ ಕೊಟ್ಟಿದ್ದೇನು? ಕೇಂದ್ರ ಸರಕಾರ ಕೊಟ್ಟ ಎನ್ಡಿಆರ್ಎಫ್ ಹಣವನ್ನು ಕೇವಲ 33 ಲಕ್ಷ ರೈತರಿಗೆ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಪಿ.ರಾಜೀವ್ ಅವರು ತಿಳಿಸಿದರು.
ಕೇಂದ್ರದಿಂದ ಬಂದ ಹಣ ಹಂಚಿಕೆ ಆಗುತ್ತಿದೆಯೇ ಹೊರತು ಇವರಿಂದ ಒಂದೇ ಒಂದು ರೂಪಾಯಿ ಇಲ್ಲ ಎಂದು ಟೀಕಿಸಿದರು. ಬಾಯಿ ಬಿಟ್ಟರೆ ಮುಖ್ಯಮಂತ್ರಿಗಳು ಸಂವಿಧಾನದ ಕುರಿತು ಮಾತನಾಡುತ್ತಾರೆ. ಬರ ಎನ್ನುವುದು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಕೇಂದ್ರ ಸರಕಾರಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಹೊಣೆ ರಾಜ್ಯ ಸರಕಾರಕ್ಕೆ ಇದೆ. ಹಾಗಿದ್ದರೆ ಈ ಸರಕಾರ ಜವಾಬ್ದಾರಿ ನಿಭಾಯಿಸಿದೆಯೇ ಎಂದು ಕೇಳಿದರು.
ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಸರಕಾರ ಇದ್ದಾಗ ಎನ್ಡಿಆರ್ಎಫ್ಗೆ ಪೂರಕವಾಗಿ ತನ್ನ ಬೊಕ್ಕಸದಿಂದ ಹಣ ಬಿಡುಗಡೆ ಮಾಡಿತ್ತು. ಇದೇ ಸರಕಾರದಲ್ಲಿ ದಾಖಲೆ ಇದೆ. ಬೆಳೆ ನಷ್ಟಕ್ಕೆ ನಿಗದಿತ ಮೊತ್ತಕ್ಕಿಂತ ಬಹುತೇಕ ದ್ವಿಗುಣ ಮೊತ್ತ ಕೊಟ್ಟಿದ್ದೆವು. ಪರಿಹಾರ ನೀಡಲು ನಿಮಗೇನು ಧಾಡಿ ಆಗಿದೆ? ನಿಮಗೇನು ಗರ ಬಡಿದಿದೆ? ಈ ಸರಕಾರದ ಕೈಯನ್ನು ಕಟ್ಟಿ ಹಾಕಿದ್ದು ಯಾರು? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಬರ ಪರಿಹಾರವಾಗಿ 3,454 ಕೋಟಿಯನ್ನು ಕೇಂದ್ರ ಸರಕಾರ ಕೊಟ್ಟಿದೆ. ಅದನ್ನು ಸಂಪೂರ್ಣ ಬಿಡುಗಡೆ ಮಾಡಿಲ್ಲ. ಹಿಂದೆ ಎಸ್ಡಿಆರ್ಎಫ್ ಮೂಲಕ ಕೊಟ್ಟಿದ್ದನ್ನು ಕಡಿತ ಮಾಡಿದರೆ ಎನ್ಡಿಆರ್ಎಫ್ ನಿಯಮಾವಳಿ ಉಲ್ಲಂಘಿಸಿದಂತೆ ಆಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸರಕಾರ ತಾನು ಕೊಡಬೇಕಾದ ಪರಿಹಾರದ ಮೊತ್ತದ ವಿಚಾರದಲ್ಲಿ ನುಣುಚಿಕೊಳ್ಳುವುದಲ್ಲದೆ, ಕೇಂದ್ರ ಸರಕಾರ ಕೊಟ್ಟಿದ್ದನ್ನೂ ಕಡಿತ ಮಾಡಿ ನೀಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ರಾಜ್ಯ ವಕ್ತಾರ ಹೆಚ್.ಎನ್. ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.