ನವದೆಹಲಿ: ಇಂದು ದೇಶವ್ಯಾಪಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಈ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇದುವರೆಗೆ ಸಾಧಾರಣ ಮತದಾನ ವರದಿಯಾಗಿದೆ.
ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹರಡಿರುವ 96 ಸಂಸದೀಯ ಕ್ಷೇತ್ರಗಳು ನಾಲ್ಕನೇ ಹಂತದ ಚುನಾವಣಾ ವ್ಯಾಪ್ತಿಗೆ ಬರುತ್ತಿವೆ. ಇವುಗಳಲ್ಲಿ ಆಂಧ್ರಪ್ರದೇಶದಲ್ಲಿ 25, ತೆಲಂಗಾಣದಲ್ಲಿ 17, ಉತ್ತರ ಪ್ರದೇಶದಲ್ಲಿ 13, ಮಹಾರಾಷ್ಟ್ರದಲ್ಲಿ 11, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎಂಟು ಸ್ಥಾನಗಳು, ಬಿಹಾರದಲ್ಲಿ 5, ಜಾರ್ಖಂಡ್ ಮತ್ತು ಒಡಿಶಾದಲ್ಲಿ ತಲಾ ನಾಲ್ಕು ಸ್ಥಾನಗಳು ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಂದು ಸ್ಥಾನ ಸೇರಿದೆ.
ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ತೆಲಂಗಾಣದ 17 ಸಂಸದೀಯ ಕ್ಷೇತ್ರಗಳ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಾಲ್ಕನೇ ಹಂತದ ಚುನಾವಣೆಗೆ ಒಟ್ಟು ಒಂದು ಸಾವಿರದ 717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇಂದು ಇವಿಎಂಗಳಲ್ಲಿ ರಾಜಕೀಯ ಭವಿಷ್ಯವನ್ನು ಮುದ್ರೆಯೊತ್ತುತ್ತಿರುವ ಕೆಲವು ಪ್ರಮುಖ ಅಭ್ಯರ್ಥಿಗಳೆಂದರೆ ಬಿಜೆಪಿ ನಾಯಕರಾದ ಗಿರಿರಾಜ್ ಸಿಂಗ್, ಅರ್ಜುನ್ ಮುಂಡಾ, ಜಿ ಕಿಶನ್ ರೆಡ್ಡಿ, ಅಜಯ್ ಕುಮಾರ್ ಮಿಶ್ರಾ ಮತ್ತು ಜೆಡಿಯುನ ರಾಜೀವ್ ರಂಜನ್ ಸಿಂಗ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ನ ಮಹುವಾ ಮೊಯಿತ್ರಾ ಮತ್ತು ಶತ್ರುಘ್ನ ಸಿನ್ಹಾ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ.
1 ಲಕ್ಷದ 92 ಸಾವಿರ ಮತಗಟ್ಟೆಗಳಲ್ಲಿ 19 ಲಕ್ಷಕ್ಕೂ ಅಧಿಕ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಹಂತದಲ್ಲಿ ಸುಮಾರು 18 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.