ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇಶದ ಚಿಂತನೆ ಇಲ್ಲ. ಅವರು ಬರೀ ಗ್ಯಾರಂಟಿ ವಿಚಾರಗಳಲ್ಲೇ ಮುಳುಗಿ ಹೋಗಿದ್ದಾರೆ ಎಂದು ಹುಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಇಂದಿಲ್ಲಿ ಟೀಕಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಅವರು ರಾಜ್ಯದ ವಿಷಯಗಳನ್ನಷ್ಟೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನು ಮಾಡಲಿದೆ ಎಂಬುದನ್ನು ಅವರು ಹೇಳಲಿ ಎಂದರು. ಕಾಂಗ್ರೆಸ್ನವರಿಗೆ ರಾಹುಲ್ ಗಾಂಧಿ ನೇತತ್ವದಲ್ಲಿ ಚುನಾವಣೆ ಎದುರಿಸುವ ಧೈರ್ಯವೇ ಇಲ್ಲ. ರಾಹುಲ್ ಹೆಸರು ಹೇಳಿದರೆ ಎಲ್ಲಿ ಮತಗಳು ತಪ್ಪಿಹೋಗುತ್ತವೆ ಎಂಬ ಭಯ ಅವರಲ್ಲಿ ಆವರಿಸಿದೆ ಎಂದರು.
ಕಾಂಗ್ರೆಸ್ ಬಹುಮತ ಬರುವಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಿಯೇ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲು ಅಗತ್ಯವಾಗಿದ್ದ ಸಂಖ್ಯೆಯಷ್ಟು ಸೀಟುಗಳನ್ನು ಆ ಪಕ್ಷಕ್ಕೆ ಗೆಲ್ಲಲಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಆ ಸಂಖ್ಯೆ ಮತ್ತಷ್ಟು ಕುಸಿಯಲಿದೆ. ಚುನಾವಣೆ ನಂತರ ಕಾಂಗ್ರೆಸ್ ಅಧೋಗತಿಗೆ ಇಳಿಯಲಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಎಷ್ಟು ಅನುದಾನ ಬಿಡುಗಡೆ ಮಾಡಿತು ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಮಹೇಶ ಟೆಂಗಿನಕಾಯಿ ಅವರು ಒತ್ತಾಯಿಸಿದರು. ಕಾಂಗ್ರೆಸ್ನವರಿಗೆ ಯಾವ ವಿಷಯ ಮಾತನಾಡಬೇಕು ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದರು. ಪ್ರಜ್ವಲ್ ರೇವಣ್ಣ ಕುರಿತು ಕೇಳಿದ ಪ್ರಶ್ನೆಗೆ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಎಂದರು.
ಪ್ರಧಾನಿ ಮೋದಿ ಸೇರಿದಂತೆ ಯಾರ ಮೇಲೆಯೂ ಒಂದು ಸಣ್ಣ ಕಳಂಕ ಇಲ್ಲ. ಭ್ರಷ್ಟಾಚಾರದ ಆರೋಪವಿಲ್ಲ ಎಂದ ಅವರು ದೇಶದ ಜನರಿಗೆ ಮೋದಿ ಅವರನ್ನೆ ಮತ್ತೆ ಪ್ರಧಾನಿ ಮಂತ್ರಿ ಎಂದು ಆಯ್ಕೆ ಮಾಡುವಲ್ಲಿ ಸ್ಪಷ್ಟತೆ ಇದೆ ಎಂದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಪ್ರಣಾಳಿಕೆ ಪತ್ರವನ್ನೂ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮ ಕುರಿತಾದ ಕರಪತ್ರಗಳನ್ನೂ ತಲುಪಿಸಿದ್ದಾರೆ. ಪಕ್ಷದ ಶಾಸಕರು, ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಸಭೆಗಳನ್ನು ಆಯೋಜಿಸಿ ಈ ಕುರಿತು ವಿವರ ನೀಡಿ ಮತದಾರರ ಮನವೊಲಿಸುವ ಕಾರ್ಯವನ್ನು ಸಮರ್ಥವಾಗಿ ಮಾಡಿದ್ದಾರೆ ಎಂದರು. ಎಲ್ಲರೂ ಇದೀಗ ಅಧಿಕ ಮತದಾನ ಆಗುವಂತೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದ ಸಂಚಾಲಕರಾದ ಎಂ.ನಾಗರಾಜ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ ಪಾಟೀಲ, ಹುಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ನೇತೃತ್ವದಲ್ಲಿ ಪಕ್ಷವು ಸುಸಂಘಟಿತವಾಗಿ ಕೆಲಸ ಮಾಡಿದೆ. ಬೂತ್ ಮಟ್ಟದ ಕಾರ್ಯಕರ್ತರವರೆಗೆ ಎಲ್ಲರೂ ಉತ್ಸಾಹದಿಂದ ಇದ್ದಾರೆ. ರಾಷ್ಟ್ರಮಟ್ಟದ ನಾಯಕರಾದ ಬಿಜೆಪಿ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ ಶಾ, ಕೇಂದ್ರ ಕಾನೂನು ಸಚಿವರಾದ ಶ್ರೀ ಅರ್ಜುನ ಮೇಘವಾಲ್, ಮಾಜಿ ಮುಖ್ಯಮಂತ್ರಿಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಹಾರಾಷ್ಟ್ರ ಮುಖ್ಯಮಂತ್ರಿಳಾದ ಶ್ರೀ ಏಕನಾಥ ಶಿಂಧೆ, ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಶ್ರೀ ಅಣ್ಣಾಮಲೈ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರ, ಶ್ರೀ ಬೈರತಿ ಬಸವರಾಜ, ಶ್ರೀ ಬಸವರಾಜ ಪಾಟೀಲ ಯತ್ನಾಳ ಮೊದಲಾದವರು ಈ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪ್ರಚಾರ ಮಾಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇಂದ್ರ ಸಚಿವ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಯವರು ಈ ಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವರೆಂಬ ವಿಶ್ವಾಸ ವ್ಯಕ್ತಪಡಿಸಿ, ಅವರು ದಿಂಗಾಲೇಶ್ವರ ಸ್ವಾಮೀಜಿ ಅವರ ವಿರೋಧವು ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲಾರದು ಎಂದರು.
ಹು-ಧಾ ಮಹಾನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಜೋಶಿ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ. 26 ಜಿಪಂ ಕ್ಷೇತ್ರಗಳಲ್ಲಿ ಮುಖಂಡರು, ಕಾರ್ಯಕರ್ತರು ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ತಮಗೆ ಕೊಟ್ಟ ಗುರಿಯನ್ನು ತಲುಪಲು ಎಲ್ಲರೂ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಗೆ ಎಲ್ಲಾ ಸಮಾಜಗಳೂ ಬೆಂಬಲ ವ್ಯಕ್ತಪಡಿಸಿವೆ ಎಂದರು.
ದೇಶದ ಜನರೆಲ್ಲ ಪ್ರಧಾನಿ ಮೋದಿ ಪರಿವಾರ. ನಮ್ಮ ಪಕ್ಷದ ಘೋಷಣೆಯೂ ʼನಮ್ಮ ಪರಿವಾರ, ಮೋದಿ ಪರಿವಾರʼ. ಹಾಗಾಗಿ ದಿ.೭ ರಂದು ಎಲ್ಲ ನಾಗರಿಕರೂ ತಮ್ಮ ಇಡೀ ಪರಿವಾರದ ಜೊತೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಮತದಾನದ ದಿನ ಎಲ್ಲರೂ ಸಾಧ್ಯವಾದಷ್ಟು ಮುಂಜಾನೆಯ ಹೊತ್ತಿನಲ್ಲೇ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಬೇಕೆಂದು ಮಹೇಶ ಟೆಂಗಿನಕಾಯಿಯವರು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.