ಬೆಂಗಳೂರು: ರಾಜ್ಯದ ಸಿಎಂ, ಗೃಹ ಸಚಿವರ ಕೃಪಾಕಟಾಕ್ಷದಿಂದ ಇವತ್ತು ಕರ್ನಾಟಕವು ಕರಾಳ ದಿನಗಳನ್ನು ಎದುರಿಸಬೇಕಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಜೀವಂತ ಇದೆಯಾ ಎಂಬ ಸಂಶಯ ಎಲ್ಲರಲ್ಲಿ ಮನೆಮಾಡುತ್ತಿದೆ. ಕರ್ನಾಟಕದಲ್ಲಿ ಹೆಣ್ಮಕ್ಕಳು, ವಿದ್ಯಾರ್ಥಿಗಳ ಜೀವಕ್ಕೆ ಸುರಕ್ಷತೆ ಇಲ್ಲವಾಗಿದೆ. ದಲಿತರ ಮನೆಗೆ ನುಗ್ಗಿ ಪೋಷಕರ ಸಮ್ಮುಖದಲ್ಲೇ ಒಬ್ಬ ದಲಿತ ಯುವಕನನ್ನು ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಸಾಯಿಸುವ ಘಟನೆ ಈ ಕರ್ನಾಟಕದಲ್ಲಿ ನಡೆದಿದೆ ಎಂದರು.
ಯಾದಗಿರಿಯಲ್ಲಿ ಮೊನ್ನೆ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಕೇಶ್ ಅವರ ಹತ್ಯೆಯಾಗಿದೆ; ಆದರೆ, ನಿನ್ನೆ ಮಧ್ಯಾಹ್ನ 1 ಗಂಟೆಗೆ ಎಫ್ಐಆರ್ ದಾಖಲಾಗಿದೆ. ಕಾನೂನು- ಸುವ್ಯವಸ್ಥೆ ಈ ರಾಜ್ಯದಲ್ಲಿ ಜೀವಂತ ಇದೆಯೇ ಎಂದು ಪ್ರಶ್ನಿಸಿದರು. ಒಬ್ಬ ದಲಿತ ಯುವಕನ ಕೊಲೆಯನ್ನು ಮುಚ್ಚಿ ಹಾಕುವ ಕೆಲಸ ಈ ರಾಜ್ಯದಲ್ಲಿ ನಡೆದಿದೆಯಲ್ಲವೇ? ಒಬ್ಬ ದಲಿತನ ಹತ್ಯೆಯಾಗಿ 14 ಗಂಟೆ ವರೆಗೆ ಎಫ್ಐಆರ್ ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲವೆಂದಾದರೆ ದಲಿತ ಸಮುದಾಯದಿಂದ ಬಂದ ಗೃಹ ಸಚಿವರು ಯಾವ ಮಾನ ಮರ್ಯಾದೆ ಇಟ್ಟುಕೊಂಡು ತಮ್ಮ ಸಚಿವ ಸ್ಥಾನದ ಬಗ್ಗೆ ಹೇಳುತ್ತಾರೆ? ಯಾವ ಮುಖವನ್ನು ದಲಿತರಿಗೆ ತೋರಿಸುತ್ತೀರಿ ಎಂದು ಕೇಳಿದರು.
ದಲಿತರ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆಯೂ ಈ ಗೃಹಸಚಿವರಿಗೆ ಇಲ್ಲ; ಒಬ್ಬ ದಲಿತ ಯುವಕನ ಹತ್ಯೆಯಾಗಿ 14 ಗಂಟೆವರೆಗೆ ಅವರ ಶವ ಇಟ್ಟುಕೊಂಡು ದಲಿತ ಪೋಷಕರು ಅಂಗಲಾಚುವಂತಾಗಿದೆ. ಮಾನ, ಮರ್ಯಾದೆ, ದಲಿತ ಎಂಬ ಸ್ವಾಭಿಮಾನ ಇದ್ದರೆ ಪರಮೇಶ್ವರ್ ಅವರು ಈ ಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಪಿ.ರಾಜೀವ್ ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ ಆರ್ಥಿಕ ದಿವಾಳಿತನ ಎದ್ದಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದಾರೆ. ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಇವರು. ರಾಜ್ಯದಿಂದ 2 ಲಕ್ಷದ 38 ಸಾವಿರ ಕೋಟಿ ಸಂಗ್ರಹಿಸುವುದಾಗಿ ಹೇಳಿಕೊಂಡಿದ್ದ ಮುಖ್ಯಮಂತ್ರಿ ತಾನು ಘೋಷಿಸಿದ ಗುರಿ ಮುಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆಕ್ಷೇಪಿಸಿದರು. ಫೆಬ್ರವರಿ ಅಂತ್ಯಕ್ಕೆ 2 ಲಕ್ಷದ 5 ಕೋಟಿಯಷ್ಟೇ ಸಂಗ್ರಹವಾಗಿದೆ ಎಂದು ಟೀಕಿಸಿದರು.
ನೀತಿಸಂಹಿತೆ ಜಾರಿಯಲ್ಲಿದ್ದರೂ ಸಚಿವ ಕೃಷ್ಣಬೈರೇಗೌಡರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇವತ್ತು ಕಾಂಗ್ರೆಸ್ ಸಚಿವರ- ಶಾಸಕರ ದಂಡು ವಿಧಾನಸೌಧದಲ್ಲಿ ಹೋರಾಟವನ್ನು ಮಾಡುತ್ತಿದೆ. ವಿಧಾನಸೌಧ ಪ್ರಜಾತಂತ್ರದ ಪ್ರತೀಕವೇ? ಕಾಂಗ್ರೆಸ್ಸಿನ ಕಾರ್ಯಾಲಯವೇ ಎಂದು ಕೇಳಿದರು.
ರಾಜ್ಯದಲ್ಲಿ ನಡೆದ ಮಹಿಳೆಯ ವಿವಸ್ತ್ರ ಪ್ರಕರಣ, ಸಾಮೂಹಿಕ ಅತ್ಯಾಚಾರ, ರಾಮೇಶ್ವರಂ ಕೆಫೆ ಸ್ಫೋಟ, ಕುಕ್ಕರ್ ಬಾಂಬ್ ಸ್ಫೋಟ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಪ್ರಕರಣಗಳನ್ನು ನಾನು ನೆನಪಿಸಲು ಹೋಗುವುದಿಲ್ಲ. ಕರ್ನಾಟಕದಲ್ಲಿ ಕೇವಲ 3 ದಿನಗಳಲ್ಲಿ 8 ಕೊಲೆ ಪ್ರಕರಣಗಳು ನಡೆದಿವೆ. ಯಾಕೆ ಎಂದ ಅವರು, ರಾಜ್ಯದಲ್ಲಿ ಜನಪರ ಸರಕಾರ ಇದೆಯೇ ಅಥವಾ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಯಾಕೆ ಎಂದು ಪ್ರಶ್ನಿಸಿದರು.
ಕರ್ನಾಟಕವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಉನ್ನತ ಸ್ಥಿತಿಯಲ್ಲಿ, ದೇಶಕ್ಕೆ ಮಾದರಿ ರಾಜ್ಯವಾಗಿತ್ತು. ಭಿಕ್ಷೆ ಬೇಡುವ ಮುಖ್ಯಮಂತ್ರಿ, ಮೈ ಪರಚಿಕೊಳ್ಳುವ ಸಿಎಂ, ವಿಚಾರಣೆಗೆ ಮೊದಲೇ ತೀರ್ಪನ್ನು ನೀಡುವ ಗೃಹ ಸಚಿವ, ಪ್ರಕರಣದ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳದೆ ಉತ್ತರಿಸುವ ಪೊಲೀಸ್ ಸಚಿವರಿರುವುದು ರಾಜ್ಯದ ದುರ್ದೈವ ಎಂದು ನುಡಿದರು.
ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಭಯೋತ್ಪಾದನಾ ಕೃತ್ಯಗಳು ಜಾಸ್ತಿ ಆಗುತ್ತಿವೆ ಯಾಕೆ ಎಂದು ಕೇಳಿದ ಅವರು, ಪೊಲೀಸ್ ಠಾಣೆಯಲ್ಲಿ ನಮಗೆ ರಾಜಾತಿಥ್ಯ ಇದೆ ಎಂದು ಡಿ.ಕೆ.ಶಿವಕುಮಾರರ ಬ್ರದರ್ಸ್ಗೆ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ನಾವು ಯಾವುದೇ ಅಪರಾಧ ಮಾಡಿದರೂ ನಮ್ಮ ಮನೆಗೆ ಪೊಲೀಸ್ ರಕ್ಷಣೆ ಕೊಡುತ್ತಾರೆ. ಅಮಾಯಕ ಯುವತಿಯನ್ನು ಕೊಲೆ ಮಾಡಿದರೆ ಪೊಲೀಸ್ ಠಾಣೆಯಲ್ಲಿ ನನಗೆ ರಾಜಾತಿಥ್ಯ ಕೊಟ್ಟು, ನನ್ನ ಮನೆಗೆ ರಕ್ಷಣೆ ನೀಡಲು ಕಾಂಗ್ರೆಸ್ ಸರಕಾರ ಸನ್ನದ್ಧವಾಗಿದೆ ಎಂಬ ಭಾವನೆಯಿಂದ ಇಂಥ ಕೃತ್ಯಗಳು ನಡೆಯುತ್ತಿವೆ ಎಂದು ಪಿ.ರಾಜೀವ್ ಆರೋಪಿಸಿದರು.
ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.