ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ, ಟಿಪ್ಪು ಸಿದ್ಧಾಂತ ಇರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳು, ಇಸ್ಲಾಮಿಕ್ ಕಾರ್ಯಕರ್ತರು ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರಿಂದ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ಅವಹೇಳನ, ಧಮ್ಕಿ, ಭಯೋತ್ಪಾದನಾ ಚಟುವಟಿಕೆ, ಬಾಂಬ್ ಹಾಕುವ ಘಟನೆಗಳು ಮಿತಿ ಮೀರಿ ನಡೆಯುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಗಂಭೀರ ವಿಚಾರ ಮತ್ತು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ನಿನ್ನೆ ವಿದ್ಯಾರಣ್ಯಪುರದಲ್ಲಿ ರಾಮನವಮಿ ಇತ್ತು. ರಾಮ ಈ ದೇಶದ ಆದರ್ಶ ಪುರುಷ. ಶ್ರೀರಾಮ ಮಂದಿರವೂ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ “ಜೈ ಶ್ರೀರಾಮ್” ಎಂದು ಕೂಗಿದ್ದನ್ನು ಆಕ್ಷೇಪಿಸಿ ಮುಸ್ಲಿಂ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ “ಅಲ್ಲಾ ಹೋ ಅಕ್ಬರ್” ಕೂಗಬೇಕು ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ನಾವು ಹಿಂದೂಸ್ತಾನದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂದೇಹ ಕಾಡುವಂತಾಗಿದೆ ಎಂದು ನುಡಿದರು.
ಸಿದ್ದರಾಮಯ್ಯನವರು ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಕರ್ನಾಟಕವನ್ನು ಧಾರೆ ಎರೆದು ಕೊಟ್ಟಿದ್ದಾರಾ ಎಂದು ಭೀತಿ ವ್ಯಕ್ತಪಡಿಸಿದ ಅವರು, ಲಕ್ಷ್ಮಣ ಸವದಿಯವರು ಸಾರ್ವಜನಿಕ ಸಭೆಯಲ್ಲಿ ಕೈಮುಗಿದು ವಿನಮ್ರವಾಗಿ ‘ನಾನು ಭಾರತ್ ಮಾತಾ ಕೀ ಜೈ ಅನ್ನಬಹುದೇ ಖರ್ಗೆ ಸಾಬೇಬರೇ’ ಎಂದು ಪ್ರಶ್ನಿಸಿದ್ದಾರೆ. ಖರ್ಗೆಯವರು ಅನುಮತಿ ಕೊಟ್ಟಿದ್ದಾರೆ. ಡಿ.ಕೆ.ಸುರೇಶ್ ಅವರು ರಾಮ ದೇವರಲ್ಲ, ನಾವು ಮನೆಯಲ್ಲಿ ಅವರ ಫೋಟೊ ಇಟ್ಟಿಲ್ಲ ಎನ್ನುತ್ತಾರೆ. ಡಿ.ಕೆ.ಸುರೇಶ್ ಅವರೇ, ನೀವು ಕಲ್ಲುಬಂಡೆ ವ್ಯಾಪಾರ ಮಾಡುವವರಲ್ಲವೇ? ಕಲ್ಲು ಬಂಡೆ ಇಟ್ಟುಕೊಳ್ಳಿ. ರಾಮನ ಫೋಟೊ ಯಾಕೆ ಇಡಬೇಕು ಎಂದು ಕೇಳಿದರು. ಇಡೀ ದೇಶದಲ್ಲಿ ರಾಮಭಕ್ತ ಆಂಜನೇಯನ ದೇವಸ್ಥಾನಗಳಿವೆ. ಇದು ನಿಮಗೆ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಡಿ.ಕೆ.ಸುರೇಶ್ ಅವರನ್ನು ಪ್ರಶ್ನಿಸಿದರು.
ಹಿಂದೂಗಳನ್ನು ಈ ಥರ ಬೈದು ಬೈದು ರಾಜ್ಯದಲ್ಲಿ ಮುಸ್ಲಿಂ ಭಯೋತ್ಪಾದನಾ ಚಟುವಟಿಕೆಗಳು ಜಾಸ್ತಿಯಾಗಿವೆ. ಶ್ರೀರಾಮ ಮಂದಿರಕ್ಕೆ ಹೋಗುವ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಮಂಡ್ಯದಲ್ಲಿ ಹಾರಾಡುತ್ತಿದ್ದ ಹನುಮಧ್ವಜವನ್ನು ಕಿತ್ತು ಹಾಕಿದ್ದೀರಿ. ಸಿದ್ದರಾಮಯ್ಯನವರ ಸರಕಾರ ಬಂದ ಬಳಿಕ ಕರ್ನಾಟಕದಲ್ಲಿ ಹಿಂದೂಗಳು ಭಯದಿಂದ ಬದುಕುವಂಥ ವಾತಾವರಣವನ್ನು ಸಿದ್ದರಾಮಯ್ಯ ಆಂಡ್ ಗ್ಯಾಂಗ್ ಮಾಡುವುದನ್ನು ಖಂಡಿಸುವುದಾಗಿ ಹೇಳಿದರು.
ಚಿಕ್ಕಪೇಟೆಯಲ್ಲಿ ಹನುಮಾನ್ ಚಾಲೀಸ ಜೋರಾಗಿ ಹಾಕಿದ್ದನ್ನು ವಿರೋಧಿಸಿ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ಮಾಡಿ ಹೊಡೆದು ದರೋಡೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಪರೋಕ್ಷವಾಗಿ ಗೂಂಡಾಗಿರಿಗೆ ಬೆಂಬಲ ಕೊಡುತ್ತಿದೆ ಎಂದು ಆಕ್ಷೇಪಿಸಿದರು. ಮತ ಹಾಕಿದರೆ ಅವರನ್ನು ರಕ್ಷಿಸುವ ಸಂದೇಶವನ್ನು ಮೂಲಭೂತವಾದಿಗಳಿಗೆ ಕಾಂಗ್ರೆಸ್ ಪಕ್ಷ ನೀಡಿದೆ ಎಂದು ಟೀಕಿಸಿದರು.
ಬಹುಸಂಖ್ಯಾತ ಹಿಂದೂಗಳನ್ನು ಈ ಸರಕಾರ ಕಡೆಗಣಿಸುತ್ತಿದೆ. ಜೈಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸಿದ್ದರಾಮಯ್ಯನವರು ಗೂಂಡಾ ಕಾಯ್ದೆ, ದೇಶದ್ರೋಹದ ಕೇಸು ಹಾಕಿದ್ದಾರಾ? ಎಂದು ಪ್ರಶ್ನಿಸಿದರು. ಅರೆಸ್ಟ್ ಮಾಡಿದ್ದೀರಿ. ಬಿರಿಯಾನಿ ಕೊಟ್ಟು ಕಳಿಸುತ್ತೀರಿ ಎಂದು ಆಕ್ಷೇಪಿಸಿದರು.
ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಉಪ ಮುಖ್ಯಮಂತ್ರಿಯವರ ಸಹೋದರ ದೇಶ ಇಬ್ಭಾಗ ಮಾಡಬೇಕು ಎನ್ನುತ್ತಾರೆ. ಈ ಥರದ ಹೇಳಿಕೆಗಳಿಂದ ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಹುರುಪು ಬಂದಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ಫಿಟ್ಟಿಂಗ್ ಮಾಸ್ಟರ್ಗಳು. ರಾಮೇಶ್ವರಂ ಕೆಫೆ ಬಾಂಬ್ ಹೊಗೆ ಏಳುತ್ತಿರುವಾಗಲೇ ಅದು ಹೋಟೆಲ್ ರೈವಲ್ರಿ ಎಂದಿದ್ದರು ಎಂದು ಟೀಕಿಸಿದರು.
ಇಂಥ ಘಟನೆಗಳಿಗೆ ಕಾರಣವಾದ ಈ ಸರಕಾರ ಬಹಳ ದಿನ ಉಳಿಯುವುದಿಲ್ಲ. ಇದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ಸರಕಾರ ಎಂದು ಬ್ರಾಂಡ್ ಆಗಿದೆ. ಇದು ಜನಕ್ಕೆ ಗೊತ್ತಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂದರು. ನಿಮ್ಮ ಏಕೈಕ ಎಂಪಿ, ಎಐಸಿಸಿ ಅಧ್ಯಕ್ಷ ಖರ್ಗೆಯವರು ಸಂಸತ್ತಿನಲ್ಲಿ ಏನು ಮಾಡಿದ್ದಾರೆ? ಕರ್ನಾಟಕದ ಪರವಾಗಿ ಬಾಯಿ ಬಿಟ್ಟೇ ಇಲ್ಲ; ನೀವೇನು ಮಾಡಿದ್ದೀರಿ ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಹಿಂದೂಗಳ ರಕ್ಷಣೆ ಬಗ್ಗೆ ಆತಂಕ ಉಂಟಾಗಿದೆ. ದರಿದ್ರ ಸರಕಾರ ಇದು. ನಯಾಪೈಸೆ ಹಣ ಇಲ್ಲ. ಮೇ ಜೂನ್ ನಂತರ ಸಂಬಳ ಕೊಡಲು ದುಡ್ಡಿಲ್ಲ ಎಂಬ ಸ್ಥಿತಿ ಬಂದಿದೆ. ಪಿಂಚಣಿ, ಸ್ಕಾಲರ್ಶಿಪ್ ಕೊಟ್ಟಿಲ್ಲ. ಇದರ ಜೊತೆಗೆ ಕರ್ನಾಟಕದ ಶಾಂತಿಯ ತೋಟವನ್ನು ಮತಕ್ಕಾಗಿ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದರ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.
ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.