ಬೆಂಗಳೂರು: ಬಿಜೆಪಿ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಕರ್ನಾಟಕದ ಬೂತ್ ಕಾರ್ಯಕರ್ತರ ಜೊತೆ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ ಅವರು, 2-3 ಜನರ ಗುಂಪು ರಚಿಸಿ ಕುಳಿತು ಮಾತನಾಡಿ, ಮತದಾನ ಖಚಿತಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಸಾಧನೆಗಳನ್ನು ನಿರ್ದಿಷ್ಟ ಮನೆಗಳಿಗೆ ತಲುಪಿಸುವ ಕಡೆ ಗಮನ ಕೊಡಿ ಎಂದು ವಿನಂತಿಸಿದರು.
ಸಾಧನೆ, ಕೆಲಸಗಳ ಕುರಿತು ಮಾತನಾಡಿ. ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ತಿಳಿಸಬೇಕು. ಅವರ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಿ ಎಂದೂ ಅವರು ತಿಳಿಸಿದರು. ಪ್ರಯೋಜನಾರ್ಥಿಗಳ ಜೊತೆ ಮಾತನಾಡಲು ಯುವಜನರ ಜೊತೆ ಯುವಜನರನ್ನೇ ನಿಯೋಜಿಸಿ. ಹಿರಿಯರ ಜೊತೆ ಹಿರಿಯರೇ ಮಾತನಾಡುವಂತಿರಲಿ. ಲಾಭಾರ್ಥಿಗಳಿಗೆ ಆದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡೋಣ. ಡೈರಿಯಲ್ಲಿ ಇದನ್ನು ಬರೆದುಕೊಳ್ಳಿ. ಮತದಾರರ ಮನ ಗೆಲ್ಲೋಣ. ಮತದಾರರ ಹೃದಯ ಗೆಲ್ಲುವುದು, ಕುಟುಂಬದ ಮನ ಗೆಲ್ಲುವುದು, ಬೂತ್ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ಕೊಡುವಂತೆ ಮಾಡುವ ಸವಾಲನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದ್ದು, ಪ್ರತಿ ಬೂತ್ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು; ಇದು ಗೆಲುವಿನ ಕಡೆ ನಮ್ಮನ್ನು ಕರೆದೊಯ್ಯಲಿದೆ ಎಂದು ತಿಳಿಸಿದರು. ನಾವು ಆಡಳಿತದಲ್ಲಿ ಇಲ್ಲದಿದ್ದರೂ ನಾವು ಭೇದಭಾವ ಮಾಡಿಲ್ಲ. ಇದನ್ನು ಜನರಿಗೆ ತಿಳಿಸೋಣ ಎಂದು ಅವರು ಹೇಳಿದರು.
ಇದೇವೇಳೆ ಪ್ರಧಾನಿಯವರು ಕಾರ್ಯಕರ್ತರು ಜನರನ್ನು ಭೇಟಿ ಮಾಡುವ ಕಾರ್ಯ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಸಾಧನೆಗಳನ್ನು ತಿಳಿಸುವ ಕಾರ್ಯ ನಡೆದಿದೆಯೇ ಎಂದು ಕೇಳಿ ಉತ್ತರ ಪಡೆದರು. ಬಿಜೆಪಿ ಸರಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ ಎಂದು ಕೇಳಿದರು. ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು ಎಂದೂ ಪ್ರಶ್ನೆಯನ್ನು ಮುಂದಿಟ್ಟು ಉತ್ತರ ಪಡೆದರು. ಮಹಿಳಾ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ. ಮತದಾನ ಮಾಡುವುದು ಹೇಗೆ ಎಂದು ಜಾಗೃತಿ ಮೂಡಿಸಿ ಎಂದು ಸಲಹೆ ಕೊಟ್ಟರು.
ಬಿಜೆಪಿ ಸರಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. ‘ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ ಎಂದೂ ತಿಳಿಸಿದರು. ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ ಎಂದೂ ಅವರು ತಿಳಿಸಿದರು. ಬೂತ್ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ ಎಂದೂ ತಿಳಿಸಿದರು.
ನಾರಿ ಶಕ್ತಿ, ನಮೋ ಆ್ಯಪ್ ಮೂಲಕ ಮಾಡಿದ ಜಾಗೃತಿ, ಚಾಯ್ ಪೇ ಚರ್ಚಾ ಕಾರ್ಯಕ್ರಮಗಳ ಕುರಿತು ಕೂಡ ಅವರು ಮಾಹಿತಿ ಪಡೆದುಕೊಂಡರು. ಪನ್ನಾ ಪ್ರಮುಖರ ಮೂಲಕ ಚರ್ಚೆ ಮಾಡಿದ್ದೀರಾ ಎಂದೂ ಅವರು ಮಾಹಿತಿ ಪಡೆದರು. ರೈತರಿಗಾಗಿ ಜಾರಿಗೊಳಿಸಿದ ವಿವಿಧ ಯೋಜನೆಗಳ ಕುರಿತು ಅನ್ನದಾತರಿಗೆ 6 ಸಾವಿರ ರೂಪಾಯಿ ಕೊಟ್ಟ ಕುರಿತು ಮಾಹಿತಿ ನೀಡಿದ್ದೀರಾ ಎಂದು ಅವರು ತಿಳಿದುಕೊಂಡರು. ಮೂಲಸೌಕರ್ಯ ವೃದ್ಧಿ, ಕಿಸಾನ್ ಸಮ್ಮಾನ್ ಸೇರಿ ವಿವಿಧ ಯೋಜನೆಗಳ ಕುರಿತು ಪ್ರತ್ಯೇಕವಾಗಿ ತಿಳಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುದನ್ನು ಮನದಟ್ಟು ಮಾಡಿ. ಮೋದಿ ಗ್ಯಾರಂಟಿ ನುಡಿದಂತೆ ನಡೆಯುವ ಗ್ಯಾರಂಟಿ ಎಂದು ತಿಳಿಹೇಳಬೇಕು. ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್ ಸಂಪರ್ಕ, ಮನೆಮನೆಗೆ ನಳ್ಳಿ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆಗಳನ್ನು ನಮ್ಮ ಸರಕಾರ ಕೊಟ್ಟಿದೆ. ಇದು ಮೋದಿಜೀ ಗ್ಯಾರಂಟಿ. ಇದನ್ನು ಜನರಿಗೆ ತಿಳಿಸಿ ಎಂದು ವಿನಂತಿಸಿದರು.
ಉಡುಪಿಯ ದ್ವಾರಕಾ ನಗರ ಕೃಷ್ಣನಗರದ ಹಿನ್ನೆಲೆಯನ್ನು ತಿಳಿಸಿದ ನರೇಂದ್ರ ಮೋದಿ ಅವರು, ಉಡುಪಿಯನ್ನು ಕಂಡರೆ ಅತ್ಯಂತ ಸಂತಸವಾಗುತ್ತದೆ ಎಂದರು. ಸಮಾಜದ ಎಲ್ಲ ವರ್ಗಕ್ಕೆ, ಲಾಭಾರ್ಥಿಗಳನ್ನು ತಲುಪುವ ಕಡೆ ಗಮನ ಕೊಡಲು ಸಲಹೆ ನೀಡಿದರು. ಪ್ರತಿ ಬೂತ್ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆ ಗೆಲ್ಲೋಣ ಎಂದು ತಿಳಿಸಿದರು. ಪ್ರಥಮ ಬಾರಿ ಮತದಾನ ಮಾಡುವವರ ಮನ ಗೆಲ್ಲಲು ನೀವೇನು ಮಾಡುತ್ತೀರಿ ಎಂದು ಕೇಳಿ ಉತ್ತರ ಪಡೆದರು.
ಹಿಂದಿನ ಚುನಾವಣೆಗಳಲ್ಲಿ ಪಡೆದ ಮತಗಳ ಕುರಿತು ಮಾಹಿತಿ ಶೇಖರಿಸಿದ್ದೀರಾ ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಕಮಲದ ಚಿಹ್ನೆಯನ್ನು ಕೈಯ ಮೇಲೆ ಮೆಹಂದಿ ಮೂಲಕ ಹಾಕಿಕೊಳ್ಳಿ. ಇದರ ಮೂಲಕ ಜನಜಾಗೃತಿ ಮೂಡಿಸಿ ಎಂದು ಅವರು ಸಲಹೆ ಕೊಟ್ಟರು. ಯುಗಾದಿ ಸಂದರ್ಭದಲ್ಲಿ ಕಮಲ ಚಿಹ್ನೆ ಮೂಲಕ ರಂಗೋಲಿ ಮಾಡುವ ಕುರಿತ ಸಲಹೆಯೂ ಒಳ್ಳೆಯದೇ ಎಂದು ಪ್ರಧಾನಿಯವರು ನುಡಿದರು.
ಬೂತ್ ಮಟ್ಟದ ಬೈಠಕ್ಗಳಿಗೆ ಮಹತ್ವವಿದೆ. ಇದನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು. ಹಿರಿಯ ನಾಗರಿಕರ ಮನಸ್ಸನ್ನು ಗೆಲ್ಲಬೇಕು. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದೂ ವಿನಂತಿಸಿದರು. ಬೂತ್ ಗೆದ್ದು ಲೋಕಸಭಾ ಸ್ಥಾನ ಗೆಲ್ಲಬೇಕು. ಪ್ರತಿ ಬೂತ್ನಲ್ಲಿ 370ಕ್ಕೂ ಹೆಚ್ಚು ಮತ ಪಡೆದು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದೂ ತಿಳಿಸಿದರು.
ಬೇಸಿಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗುತ್ತಿದೆ. ಬೆಳಿಗ್ಗೆ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ. ಇದು ತುಂಬ ಉಪಯುಕ್ತ ಎಂದು ಸಲಹೆ ಕೊಟ್ಟರು. ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಜನತೆಗೆ ಅವರು ರಾಮನವಮಿ, ಯುಗಾದಿಯ ಶುಭಾಶಯ ಕೋರಿದರು.
ಮೈಸೂರಿನ ರಾಜೇಶ್, ಶಿವಮೊಗ್ಗದ ಸರಳಾ, ಬೆಳಗಾವಿಯ ಶ್ರುತಿ ಆಪ್ಟೇಕರ್, ಉಡುಪಿಯ ಸುಪ್ರೀತ್ ಭಂಡಾರಿ ಅವರ ಜೊತೆ ಸಂವಾದ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.