ಬೆಂಗಳೂರು: ಮೋದಿ (ಎಂಒಡಿಐ) ಮಾಸ್ಟರ್ ಆಫ್ ಡಿಜಿಟಲ್ ಇನ್ಫರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್ಡ್ ಇಂಡಿಯ ‘ವಿಕಸಿತ ಭಾರತ’ ಎಂದು ಕರೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ವಿಶ್ಲೇಷಿಸಿದರು.
ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಗುರುವಾರ ನಡೆದ ಸಾಫ್ಟ್ವೇರ್ ತಂತ್ರಜ್ಞರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಭಾರತ ಮತ್ತು ಭಾರತೀಯರು ಕಾಂಗ್ರೆಸ್ಸಿನ ಮತ್ತು ಆ ಸರಕಾರದ ಭಾಗೀದಾರ ಪಕ್ಷಗಳ ಭ್ರಷ್ಟಾಚಾರ ಹಗರಣಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಚಿಂತಿಸುವ ಸ್ಥಿತಿ ಇತ್ತು. ಕಾಮನ್ವೆಲ್ತ್ ಗೇಮ್ಸ್ ಹಗರಣ, ಅಗಸ್ಟ ವೆಸ್ಟಂಡ್ ಹಗರಣ, ಕಲ್ಲಿದ್ದಲು ಹಗರಣ, ಅಂತರಿಕ್ಷ್ ದೇವಾಸ್ ಹಗರಣ ಮೊದಲಾದವುಗಳ ಬಗ್ಗೆ ಇಂದಿನ 18-22ರ ಹರೆಯದ ಯುವಜನರಿಗೆ ಅರಿವಿರಲಾರದು. 2009ರಿಂದ 2014ರ ನಡುವೆ ಒಂದಾದ ನಂತರ ಒಂದು ಹಗರಣಗಳು ನಡೆದವು. 2014ರಲ್ಲಿ ಅಭಿವೃದ್ಧಿ ಸ್ಥಗಿತವಾಗಿತ್ತು. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಅಸಮರ್ಪಕ ನೀತಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಿತ್ತು. ಆಗ ಬಿಜೆಪಿ ಪರ್ಯಾಯವಾಗಿ ಆಡಳಿತಕ್ಕೆ ಬಂತು ಎಂದು ವಿವರಿಸಿದರು
ಆಗ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತ ಆರಂಭವಾಯಿತು. ಸ್ವಚ್ಛ- ಪ್ರಾಮಾಣಿಕ ಆಡಳಿತವನ್ನು ನೀಡುವುದಾಗಿ ತಿಳಿಸಿದೆವು. ಕಳೆದ 10 ವರ್ಷಗಳಲ್ಲಿ ಮೋದಿಯವರ ವಿರುದ್ಧ ಹಾಗೂ ಅವರ ಸರಕಾರದ ಒಬ್ಬರೇ ಒಬ್ಬ ಸಚಿವರ ವಿರುದ್ಧ ಒಂದು ಪೈಸೆಯ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ಗಮನ ಸೆಳೆದರು. ಐಟಿ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಲ್ಲ; ಅದನ್ನು ಇಂಡಿಯ ಟುಮಾರೊ (ಭವಿಷ್ಯದ ಭಾರತ) ಎಂದೂ ಅರ್ಥೈಸಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ಸಂಕಲ್ಪ ಎಂದು ಅವರು ತಿಳಿಸಿದರು.
ಐಟಿ ಕುರಿತು ಮಾತನಾಡುವಾಗ ಇನ್ಫ್ರಾ (ಮೂಲಸೌಕರ್ಯ) ಮತ್ತು ಟೆಕ್ನಾಲಜಿ (ತಂತ್ರಜ್ಞಾನ) ಕುರಿತು ಮಾತನಾಡಬೇಕಾಗುತ್ತದೆ. ಸಾರ್ವಜನಿಕ ಮೂಲಸೌಕರ್ಯ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ವರ್ಷ 10 ಲಕ್ಷ ಕೋಟಿ ವ್ಯಯಿಸಿದ್ದರೆ, ಈ ವರ್ಷ 11 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಐಟಿ ಎಂದರೆ ಇಂಡಿಯನ್ ಟ್ಯಾಲೆಂಟ್ ನಮ್ಮ ಜೊತೆಗಿದೆ. ಕೌಶóಲ್ಯ ವೃದ್ಧಿ ಮೂಲಕ ಅದರ ಸಮರ್ಥ ಬಳಕೆ ಮಾಡುತ್ತಿದ್ದೇವೆ. ಇಂಡಿಯನ್ ಟ್ಯಾಲೆಂಟ್ ಭಾರತಕ್ಕೆ ಮಿಲಿಯಗಟ್ಟಲೆ ಹಣ, ಮಿಲಿಯಗಟ್ಟಲೆ ಉದ್ಯೋಗವನ್ನು ತರಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐಟಿ ಎಂದರೆ ಇಂಡಿಯನ್ ಟೂರಿಸಂಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಇನ್ಕಂ ಟ್ಯಾಕ್ಸ್ ಕುರಿತು ಮಾತನಾಡುತ್ತಿದೆ ಎಂದು ನಗುತ್ತ ನುಡಿದರು. ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಲ್ಲ. ನೀವು ರಿಟರ್ನ್ ಫೈಲ್ ಮಾಡದೆ ಇದ್ದರೆ ನೋಟಿಸ್ ಸಿಗುತ್ತದೆ. ನಾವು ಕಾಂಗ್ರೆಸ್ ಪಕ್ಷವನ್ನು ಕಾನೂನಿನಿಂದ ಅತೀತ ಎಂದು ಭಾವಿಸಬೇಕೇ ಎಂದು ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆಯ ನೋಟಿಸ್ ಮೇಲೆ ನೋಟಿಸ್ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿಲ್ಲ. ಅವರ ದುರಹಂಕಾರಕ್ಕೆ ಇದೇ ಉದಾಹರಣೆ. ಅವರು ಕೋರ್ಟಿನಲ್ಲಿ ಸೋತರು. ಆದರೆ, ಭಾರತವು ಐಟಿ (ಆದಾಯ ತೆರಿಗೆ) ವಿಭಾಗದಲ್ಲಿ ಗೆದ್ದಿದೆ. ದೇಶದ ಆದಾಯ ತೆರಿಗೆ ಸಂಗ್ರಹ ಹೆಚ್ಚುತ್ತ ಸಾಗಿದೆ ಎಂದು ವಿವರ ನೀಡಿದರು.
ಐಟಿ ಕ್ಷೇತ್ರದಲ್ಲಿ ಪ್ರಸ್ತುತ ಎ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಬಿ ಎಂದರೆ ಭೀಮ್ ಯುಪಿಐ. ಇದು ವಿಶ್ವದ ಅತಿ ದೊಡ್ಡ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ಸಿ ಎಂದರೆ ಚಿಪ್. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಿದ್ದರೆ ನಾವು ತೈವಾನ್ನಂಥ ದೇಶದ ಮೇಲೆ ಅವಲಂಬನೆ ಮಾಡುವ ಅಗತ್ಯ ಇರಲಿಲ್ಲ. ಆದರೆ, ಭಾರತವು ಶೀಘ್ರವೇ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಆತ್ಮನಿರ್ಭರವಾಗಲಿದೆ. 3 ಸೆಮಿ ಕಂಡಕ್ಟರ್ ಘಟಕಗಳನ್ನು 1.14 ಲಕ್ಷ ಕೋಟಿ ವೆಚ್ಚದಲ್ಲಿ ಆರಂಭಿಸಲಿದೆ ಎಂದು ಅವರು ಹೇಳಿದರು. ಡಿ ಎಂದರೆ ಡೆವಲಪ್ಮೆಂಟ್ ಮತ್ತು ಡೇಟಾ ಎಂದು ಅವರು ನುಡಿದರು. ಭಾರತವು ವಿವಿಧ ಕ್ಷೇತ್ರಗಳಲ್ಲಿ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.
ಕ್ರೀಡೆಯಿಂದ ಬಾಹ್ಯಾಕಾಶ, ವಿಜ್ಞಾನದಿಂದ ಸ್ಟಾರ್ಟಪ್ ಕ್ಷೇತ್ರಗಳಲ್ಲಿ ಇದು ಭಾರತದ ಯುಗ. ವಿವಿಧ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಸಾಧನೆಯನ್ನು ವಿವರಿಸಿದ ಅವರು, ಚಂದ್ರಯಾನದ ಸಾಧನೆ, ಕೋವಿಡ್ ಲಸಿಕೆ ಉತ್ಪಾದನೆಯನ್ನು ಉದಾಹರಣೆ ನೀಡಿದರು. ಅಖಿಲೇಶ್ ಯಾದವ್, ಲಾಲೂ ಯಾದವ್, ರಾಹುಲ್ ಗಾಂಧಿಯವರು ಭಾರತ ಉತ್ಪಾದಿಸಿದ ಕೋವಿಡ್ ಲಸಿಕೆ ಬಳಸಬೇಡಿ ಎಂದಿದ್ದರು. ಆದರೆ, ನಾವು 2 ಹೊಸ ಲಸಿಕೆ ಸಂಶೋಧನೆ ಮಾಡಿ 220 ಕೋಟಿ ಲಸಿಕೆಗಳನ್ನು ನೀಡಿದೆವು ಎಂದು ವಿವರ ನೀಡಿದರು. ಇದಲ್ಲದೆ ನಾವು 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ರಫ್ತು ಮಾಡಿದ್ದಾಗಿ ತಿಳಿಸಿದರು.
ಕೆಲವು ವರ್ಷಗಳ ಹಿಂದೆ 500 ಸ್ಟಾರ್ಟಪ್ ಇದ್ದುದು ಈಗ 1.20 ಲಕ್ಷಕ್ಕೆ ಏರಿದೆ. 454 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸ್ಟಾರ್ಟಪ್ಗಳು ನಮ್ಮಲ್ಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರೀ, ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್ಕುಮಾರ್ ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.