ಭಾರತೀಯ ಸಂಸ್ಕೃತಿಯಲ್ಲಿ ಮಾನವ ತನ್ನ ಜೀವಿತಾವಧಿಯಲ್ಲಿ ಧರ್ಮ ಮಾರ್ಗ ಆಧರಿಸಿ ನಡೆಯಲು ವಾರ್ಷಿಕವಾಗಿ ನಿಸರ್ಗದ ಕಾಲಕ್ಕೆ ತಕ್ಕಂತೆ ಹಲವು ವಿಶೇಷ ಹಬ್ಬ ಹರಿದಿನದ ಆಚರಣೆ ಮಾಡುತ್ತಾ ಬಂದಿರುವುದು ನಮ್ಮ ಸಂಪ್ರದಾಯ. ಪ್ರತಿಯೊಂದು ಹಬ್ಬ ತನ್ನದೇ ಆದ ವಿಶೇಷ ಮೌಲ್ಯ ಹೊಂದಿದೆ. ಶಿಶಿರ ಋತುವಿನ ಪಾಲ್ಗುಣ ಮಾಸದಲ್ಲಿ ಪೌರ್ಣಿಮೆಯ ದಿನವನ್ನು ಕಾಮನ ಹುಣ್ಣಿಮೆ ವಸಂತಹುಣ್ಣಿಮೆ, ಹೋಳಿಹಬ್ಬ, ರಂಗಪಂಚಮಿ, ಕಾಮದಹನ ಎಂದು ಆಚರಿಸುತ್ತೇವೆ. ನಮ್ಮ ಹಿಂದೂ ದಿನಚರಿಯಂತೆ ವರ್ಷದ ಕಟ್ಟಕಡೆಯ ಹಬ್ಬವಾಗಿದೆ. ನಂತರ ಯುಗಾದಿಯ ಹೊಸ ವರ್ಷ ಆರಂಭವಾಗುತ್ತದೆ.
ಕಾಮನ ಹಬ್ಬ ಬಂತೆಂದರೆ ಬಹುತೇಕ ಎಲ್ಲರಿಗೂ ಚಿಕ್ಕಂದಿನ ಘಟನೆಗಳು ನನ್ನಂತೆಯೇ ಸಹಜವಾಗಿ ಎಲ್ಲರ ಮನದಲ್ಲಿ ಮೂಡಿ ಬರುತ್ತವೆ. ಗುಂಪಾಗಿ ಗೆಳೆಯರೆಲ್ಲಾ ಸೇರಿ ಕಾಮಣ್ಣನ ಮಕ್ಕಳು ಎಂದು ಊರಿನ ನಮ್ಮ ಹಳ್ಳಿಯಲ್ಲಿ ಓಣಿ ಓಣಿಗಳಲ್ಲಿ ತಿರುಗಾಡಿದ್ದುದು ಕೆಲವು ಮನೆಗಳ ಮುಂದೆ ಹಳೇ ಮಡಿಕೆಗೆ ಬೂದಿ ತುಂಬಿ ಎಸೆಯುವುದು, ಕಟ್ಟಿಗೆ ಕದಿಯುವುದು ತಮಟೆ ಬಾರಿಸುತ್ತಾ ಕಾಮನ ಮೂರ್ತಿ ದಹನ ಮಾಡುವುದು, ಪುರುಷರು, ಮಹಿಳೆಯರು, ಮಕ್ಕಳು ಬಣ್ಣ ಎರಚುವುದು, ಜ್ಞಾಪಕ ಬರುತ್ತದೆ. ಆ ಹಂತದಲ್ಲಿ ಈ ಹಬ್ಬದ ಮಹತ್ವದ ಕುರಿತು ನಮಗೆ ಹೆಚ್ಚು ತಿಳಿಯದಿದ್ದರೂ ಹಿರಿಯರು ಹೇಳಿದ ಕಥೆಗಳನ್ನು ಕೇಳಿ ತಿಳಿದಿದ್ದೇವೆ. ಆದ್ದರಿಂದ ನಾವುಗಳೂ ಸಹ ಈ ಹಬ್ಬದ ಮಹತ್ವ ಹಿನ್ನೆಲೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡೋಣ.
ಪುರಾಣ ಕಥೆ: ತಾರಕಾಸುರನೆಂಬ ರಾಕ್ಷಸ ರಾಜ ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಬರಲಿ ಎಂದು ಶಿವನಿಂದ ವರವನ್ನು ಪಡೆದನು. ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯುತ್ತಾನೆ. ಆತನ ಉಪಟಳ ತಾಳಲಾರದೇ ಅವನ ಸಂಹಾರಕ್ಕೆ ದೇವತೆಗಳು ಚಿಂತಾಕ್ರಾಂತರಾಗುತ್ತಾರೆ. ದಕ್ಷಯಜ್ಞದಲ್ಲಿ ತನ್ನ ಮಡದಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಪರಶಿವನು ಯೋಗ ಸಮಾಧಿಯಲ್ಲಿರುತ್ತಾನೆ. ಅದೇ ರೀತಿ ಪಾರ್ವತಿಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ ಶಿವ ಪಾರ್ವತಿಯರಿಬ್ಬರೂ ಒಂದುಗೂಡದೆ ಮಕ್ಕಳಾಗುವಂತಿರಲಿಲ್ಲ. ಹೇಗಾದರೂ ಮಾಡಿ ಶಿವನ ತಪಸ್ಸನ್ನು ಭಂಗಮಾಡಬೇಕೆಂದು ನಿರ್ಧರಿಸಿದ ದೇವತೆಗಳು ಮನ್ಮಥನ (ಕಾಮದೇವರು) ಮೊರೆ ಹೋದರು.
ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ಈ ಕಾರ್ಯದಲ್ಲಿ ತನ್ನ ಸಾವು ನಿಶ್ಚಿತ ಎಂಬುದರ ಅರಿವಿದ್ದರೂ ಸಹ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂ ಬಾಣಗಳಿಂದ ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ತನ್ನ ತಪೋಭಂಗಕ್ಕೆ ಕಾರಣನಾದ ಕಾಮನನ್ನು ಶಿವ ತನ್ನ ಹಣೆಯ ಮಧ್ಯದಲ್ಲಿದ್ದ ಮೂರನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡುತ್ತಾನೆ. ಆಗ ಕಾಮನ ಪತ್ನಿ ರತಿದೇವಿಯು ತನ್ನ ಪತಿಯು ಉದ್ದೇಶ ಪೂರ್ವಕವಾಗಿ ಈ ಕಾರ್ಯ ಮಾಡಿಲ್ಲವೆಂದು ದೇವಾನುದೇವತೆಗಳ ಇಚ್ಛೆಯಂತೆ ಈ ರೀತಿಯ ಕಾರ್ಯದಲ್ಲಿ ಭಾಗಿಯಾಗಬೇಕಾದ ಸಂಗತಿಯನ್ನು ಶಿವನಲ್ಲಿ ತಿಳಿಸಿ ತನಗೆ ಪತಿ ಬಿಕ್ಷೆಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣುತ್ತಾನೆ ಎಂದು ಶಿವನು ಅಭಯ ನೀಡಿದನೆಂದು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ (ಕಾಮದೇವ) ಈ ಘಟನೆ ನಡೆದಿದ್ದು ಫಾಲ್ಗುಣಶುದ್ದ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಿಸಲ್ಪಡುತ್ತದೆ. ನಾರದ ಪುರಾಣದಲ್ಲಿ ಬರುವ ಮತ್ತೊಂದು ಕಥೆಯ ಪ್ರಕಾರ, ರಾಕ್ಷಸರ ರಾಜ ಹಿರಣ್ಯಕಷಿಪು ತಾನೇ ದೇವರು, ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತಾಕೀತು ಮಾಡಿದ್ದನ್ನು. ಆತನ ಸ್ವಂತ ಮಗನೇ ಒಪ್ಪದೇ ಹರಿಯೇ ಜಗದೋದ್ಧಾರಕ ಎಂದು ಹೇಳುವುದನ್ನು ಕೇಳಲಾರದೇ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು ನಾನಾ ರೀತಿಯಾದ ಪ್ರಯತ್ನ ಪಟ್ಟು ವಿಫಲವಾಗಿ ಕೊನೆಗೆ ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿದ್ದ ತನ್ನ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ತನ್ನ ಸೋದರ ಅಳಿಯ ಬಾಲ ಪ್ರಹ್ಲಾದನನ್ನು ಎತ್ತಿಕೊಂಡು ಹೋಳಿಕಾ ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹಾಗೆ ಪ್ರವೇಶಿಸುವ ಆಕೆಯು ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರವು ಗಾಳಿಯಲ್ಲಿ ಹಾರಿಹೋಗಿ ಹೋಳಿಕಾಳ ದಹನವಾಗುತ್ತಾಳೆ ಮತ್ತು ಪರಮ ವಿಷ್ಣು ಭಕ್ತ ಪ್ರಹ್ಲಾದ ಒಂದು ಚೂರು ಬೆಂಕಿ ತಾಗದೇ ಪಾರಾಗುತ್ತಾನೆ. ಆದ್ದರಿಂದ ಹೋಳಿಕಾ ದಹನವಾದ ದಿನವನ್ನು ಹೋಳಿಹಬ್ಬ ಎಂದು ಆಚರಿಸುವ ಸಂಪ್ರದಾಯ ಅಂದಿನಿಂದ ರೂಢಿಗೆ ಬಂದಿತು. ಎಂಬ ಪ್ರತೀತಿ ಇದೆ.
ಹಬ್ಬದ ಮಹತ್ವ
* ಮೇಲಿನ ಎರಡೂ ಕಥನಗಳ ಹಿಂದೆ ಇರುವ ಸಂದೇಶ ಒಂದೇ. ಕೆಟ್ಟದನ್ನು ಸುಟ್ಟುಬಿಡುವುದು, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು, ಅಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ. ಕೆಟ್ಟ ಕೆಲಸ ಮಾಡುವ ಪ್ರತಿಯೊಬ್ಬರೂ ಅಂತಿಮವಾಗಿ ಸುಟ್ಟು ಭಸ್ಮರಾಗುತ್ತಾರೆ ಎಂಬ ಸುಂದರ ಸಂದೇಶ ನೀಡುವ ಈ ಹೋಳಿ ಹಬ್ಬದ ಆಚರಣಯ ಸದುದ್ದೇಶವಾಗಿದೆ.
* ಸಮಾಜದಲ್ಲಿ ಬಣ್ಣ ಹಚ್ಚುವ ಮೂಲಕ ಶ್ರೀಮಂತರು, ಬಡವರು, ಪುರುಷರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರೆನ್ನುವ ತಾರತಮ್ಯವಿಲ್ಲದೇ ಒಂದುಗೂಡಿಸುವ ಸೌಹಾರ್ದತೆಯ ಭಾವ ಬಲಪಡಿಸುವ ಜೀವನೋತ್ಸಾಹ ನೀಡುವ ಹಬ್ಬವಾಗಿದೆ.
* ನಿಸರ್ಗ ಬದಲಾವಣೆಯ ವಸಂತ ಋತುವಿನ ಸಂದರ್ಭದಲ್ಲಿ ಮನುಷ್ಯನ ಆರೋಗ್ಯಕ್ಕೆ ಅನುಕೂಲವಾಗುವಂತಹ ವಿವಿಧ ಬಣ್ಣಗಳನ್ನು ಹಣ್ಣು, ಕಾಯಿ, ಎಲೆ, ಹೂ ಗಿಡಿಮೂಲಿಕೆ ಇತ್ಯಾದಿಗಳಿಂದ ತಯಾರಿಸಿ ನೈಸರ್ಗಿಕ ಬಣ್ಣ ಹಚ್ಚುವುದರ ಮೂಲಕ ಹಬ್ಬ ಆಚರಿಸುವುದು
ಪ್ರಸ್ತುತ ಆಚರಣೆ ದೇಶದ ವಿವಿಧ ಪ್ರದೇಶಗಳಲ್ಲಿನ ಸಂಸ್ಕೃತಿಯಂತೆ ಹೋಳಿ ಹಬ್ಬ ಆಚರಿಸುವುದನ್ನು ನಾವು ನೋಡುತ್ತೇವೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಚರಣೆ ಭಿನ್ನವಾಗಿದ್ದರೆ, ಉತ್ತರ & ದಕ್ಷಿಣ ಭಾರತದ ಆಚರಣೆಯೂ ಭಿನ್ನತೆಯಿಂದ ಕೂಡಿದೆ. ಆದರೂ ದೇಶದ ಆಚರಣೆಯ ಉದ್ದೇಶ ಒಂದೇ ಆಗಿರುತ್ತದೆ.
ಆದರೆ ಪ್ರಸ್ತುತ ಆಚರಣೆ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸದೇ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕಗಳಿಂದ ಕೂಡಿದ ವಿವಿಧ ದ್ರಾವಣಗಳನ್ನು ಬಳಸಿ ಕೃತಕವಾಗಿ ತಯಾರಿಸಿದ ಬಣ್ಣಗಳನ್ನು ಹಚ್ಚುವುದು, ಇದಕ್ಕಾಗಿ ವಿವಿಧ ಕಂಪನಿಗಳು ಈ ಸಂದರ್ಭವನ್ನು ಲಾಭಗಳಿಸಲು ಅಂತಹ ಬಣ್ಣಗಳನ್ನು ತಯಾರಿಸಿ ದುರುಪಯೋಗ ಪಡಿಸಿಕೊಳ್ಳುವುದು, ಯುವಕರು ಡಿ.ಜಿ ಗಳ ಮೂಲಕ ಕಿವಿಗಡಚಿಕ್ಕುವಂತೆ ಮ್ಯೂಸಿಕ್ ಹಾಕಿ ಕುಣಿದು ಕುಪ್ಪಳಿಸಿ ಅಸಭ್ಯವಾಗಿ ವರ್ತಿಸುವುದು, ರಾಸಾಯನಿಕ ಬಣ್ಣಗಳನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರಕ್ಕೆ ಧಕ್ಕೆ ಮಾಡುವುದು ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ. ಆದ್ದರಿಂದ ಈ ಹಬ್ಬದ ಸದುದ್ದೇಶ ಅರ್ಥ ಮಾಡಿಕೊಂಡು ನಾವುಗಳು ಸ್ವಸ್ಥ ಮಾನಸಿಕ ವ್ಯಕ್ತಿತ್ವದ ವ್ಯಕ್ತಿಯಾಗಲು, ಸದೃಢ ಸಮಾಜ ನಿರ್ಮಾಣ ಮಾಡಲು ಯುವ ಪೀಳಿಗೆಗೆ ಸಾಧಕ ಬಾಧಕಗಳನ್ನು ತಿಳಿಸುತ್ತಾ ನಾವೆಲ್ಲರೂ ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸೋಣ. ಬಂಧುತ್ವ ಬೆಳೆಸೋಣ. ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು.
✍️ ಗಂಗಾಧರಾಚಾರಿ, ಉಪಾಧ್ಯಕ್ಷರು, KRMSS, ರಾಮನಗರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.