ದೇಶದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ ದಶಕಗಳಿಂದ ಮಾಡುತ್ತಿದೆ. ಉತ್ಖನನ, ಸಾಕ್ಷ್ಯ ಸಂಗ್ರಹ, ಸಂಶೋಧನೆ, ಹೋಲಿಕೆ ಅಥವಾ ಸಾಮ್ಯತೆ ಹೀಗೆ ಹಲವು ರೀತಿಯಲ್ಲಿ ಅಧ್ಯಯನ ನಡೆಸುವ ಈ ಸಂಸ್ಥೆ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಜೊತೆಯಲ್ಲಿ ಕಡಿದು ಹೋದ ಸಾಂಸ್ಕೃತಿಕ ತಂತುಗಳನ್ನು ಜೋಡಿಸುವ ಕಾರ್ಯವನ್ನು ಮಾಡುತ್ತಿದೆ.
ವಿಶ್ವದಲ್ಲೇ ಅತಿ ಹೆಚ್ಚು ಶಿಲ್ಪಶಾಸ್ತ್ರಕ್ಕೆ ಒತ್ತು ಕೊಟ್ಟ ಭಾರತದಲ್ಲಿ ಅಳಿಕೆ ಮತ್ತು ಉಳಿಕೆಗಳನ್ನು ಗುರುತಿಸಿ, ಯಾವ ಕಾಲಘಟ್ಟದಲ್ಲಿ ನಿರ್ಮಾಣವಾದುದು ಎಂಬುದರ ಜೊತೆಯಲ್ಲಿ ಅದರ ವೈಶಿಷ್ಟ್ಯತೆಯ ಹಿನ್ನೆಲೆಯಲ್ಲಿ ಅದರ ಮಹತ್ವ ಸಾರುವ ಪ್ರಯತ್ನವೂ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಇತಿಹಾಸದ ಪ್ರಮುಖ ಮಜಲುಗಳ ಅಧ್ಯಯನವು ಹಲವೊಮ್ಮೆ ಬಹಳ ಸೋಜಿಗ ಎನಿಸುತ್ತದೆ, ಇದು ಅಚ್ಚರಿಯ ಜೊತೆಯಲ್ಲಿ ಜ್ಞಾನಾರ್ಚನೆಯ ಭಾಗವೂ ಹೌದು.
2005 ರಲ್ಲಿ ಉತ್ತರಪ್ರದೇಶದ ಭಾಗ್ಪತ್ ಜಿಲ್ಲೆಯ ಸಿನೌಲಿ ಎಂಬ ಹಳ್ಳಿಯಲ್ಲಿ ರೈತನೋರ್ವ ಪ್ರತಿ ವರ್ಷದಂತೆ ಆ ವರ್ಷವೂ ಹೊಲವನ್ನು ಊಳುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಆದರೆ ಆ ಬಾರಿ ಆತನಿಗೆ ಅಚಾನಕ್ ಆಗಿ ಪ್ರಾಚೀನ ಕಾಲಘಟ್ಟದ ಮಡಕೆ, ತಾಮ್ರದ ಹೂಜಿ, ಮೂಳೆಯ ಅವಶೇಷಗಳು ಕಂಡವು. ನಂತರ ಆತನು ಕಂಡಂತಹ ಈ ಉಳಿಕೆಗಳು ನಂತರ ವಿಶ್ವ ಚರಿತ್ರೆಯ ಸಂಶೋಧನೆಗಳಿಗೆ ಸವಾಲು ಹಾಕಿದವು!
ASI ಸುಪರ್ದಿಯಲ್ಲಿ ಇಲ್ಲಿ ಸತತ 13 ತಿಂಗಳುಗಳ ಕಾಲ ಉತ್ಖನನ, ಉಳಿಕೆಗಳ ಸಂಗ್ರಹವಾಗುವುದರ ಜೊತೆಯಲ್ಲಿ ಪ್ರಾಚೀನ ಸಮಾಧಿ, ರಥ, ಮಣ್ಣಿನ ಪಾತ್ರೆಗಳು, ಅಸ್ಥಿಪಂಜರಗಳು ಪತ್ತೆಯಾದವು. ತಾಮ್ರದ ಶಿರಕವಚ ಪತ್ತೆಯಾದದ್ದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿತ್ತು ಮಾತ್ರವಲ್ಲ ಪ್ರಾಚೀನತೆಯ ಸಾಕ್ಷ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಶಿರಕವಚವು ಸುಮಾರು 4000 ವರ್ಷಗಳಷ್ಟು ಹಳೆಯದು ಎಂಬುದು ಮಗದೊಂದು ಅಚ್ಚರಿಯ ಅಂಶವಾಗಿತ್ತು. ಇಲ್ಲಿ ಸಿಕ್ಕ ಮಣ್ಣಲ್ಲಿ ಮಣ್ಣಾದ ಹಲವು ಮರದ ವಸ್ತುಗಳ ಕೆಲ ಹೊರಕವಚಗಳು ತಾಮ್ರಲೇಪಿತವಾದ ಕಾರಣ ಅವುಗಳನ್ನು ಕಾರ್ಬನ್ ಡೇಟಿಂಗ್ ಗೆ ಒಳಪಡಿಸಿ ಅವುಗಳ ಹಳಮೆಯನ್ನು ಖಾತ್ರಿಪಡಿಸಲಾಯಿತು. ಸಿನೌಲಿಯಲ್ಲಿ ಪತ್ತೆಯಾದ ಒಟ್ಟು 126 ಸಮಾಧಿಗಳು ದೇಶದ ಚರಿತ್ರೆಯ ಅತಿ ಪುರಾತನ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದೆ ಮಾತ್ರವಲ್ಲ ಆಳ ಅಧ್ಯಯನ ಸಂಶೋಧನೆಯ ವಸ್ತುವಾಗಿದೆ.
ಅಂದು ASI ನಿರ್ದೇಶಕರಾಗಿದ್ದ ಎಸ್.ಕೆ ಮಂಜುಳ್ ಅವರ ನೇತೃತ್ವದಲ್ಲಿ ಸಮಾಧಿಗಳು, ಕಾಲುಗಳುಳ್ಳ ಶವಪೆಟ್ಟಿಗೆಗಳು, ನೆಲಮಾಳಿಗೆಯ ರಚನೆಗಳು, ಮಣ್ಣಿನ ಪಾತ್ರೆಗಳಲ್ಲಿ ಇಟ್ಟಲ್ಪಟ್ಟಿದ್ದ ಅಕ್ಕಿ ಮೊದಲಾದವುಗಳು ಧಾನ್ಯಗಳು ಪತ್ತೆಯಾಗಿದ್ದವು. ಇವೆಲ್ಲವೂ ಒಂದು ನಿರ್ದಿಷ್ಟ ಕಾಲಘಟ್ಟದ ಕ್ಷಾತ್ರ ಕುಲದ ಸಮಾಧಿ ಸ್ಥಳವಾಗಿತ್ತು ಎಂದು ನಿರ್ಧರಿಸಲ್ಪಟ್ಟಿದೆ. ತಾಮ್ರ ಮತ್ತು ಚಿನ್ನದಲ್ಲಿ ಮಾಡಲ್ಪಟ್ಟ ವೇದಕಾಲದ ದೇವರುಗಳ ರಚನೆಯು ಇಲ್ಲಿ ಸಿಕ್ಕಿರುವುದು ಹರಪ್ಪ ಕಾಲಘಟ್ಟದ ಕೊನೆಯಲ್ಲಿ ದೊರೆತ ಕೆಲ ಅತ್ಯಮೂಲ್ಯ ರಚನೆಗಳಿಗೂ ಸಾಮ್ಯತೆಯಾಗಿದೆ.
ಸಿನೌಲಿಯಂತೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿರುವ ಗಗ್ಗಾರ್ ಹಕ್ರಾ ನದೀ ತೀರದ ರಾಕೀಘಡಿ ಮಗದೊಂದು ಉತ್ಖನನಕ್ಕೆ ಒಳಪಟ್ಟ ಪ್ರಾಚೀನ ಸಂಸ್ಕೃತಿಯ ಕುರುಹುಳ್ಳ ಪ್ರದೇಶ. ಸುಮಾರು 5000 ವರ್ಷಗಳಷ್ಟು ಹಳಮೆ ಇದಕ್ಕಿದೆ ಎಂಬ ವಿಚಾರ ಉತ್ಖನನ ಮತ್ತು ಸಂಶೋಧನೆಗಳಿಂದ ವ್ಯಕ್ತವಾಗಿದೆ. ಉತ್ಖನನದ ನಂತರ ಇಲ್ಲಿ ಕೆಲ ವಸತಿಗಳ ಪಳೆಯುಳಿಕೆಗಳು, ಬಡಾವಣೆಗಳು, ಅಸ್ಥಿಗಳು ಪತ್ತೆಯಾಗಿವೆ. ಇದರ ಹೊರತಾಗಿ ಚಿನ್ನದ ಆಭರಣ ಮಾಡುವ ಘಟಕ, ಟೆರಕ್ಕೋಟ ಆಟಿಕೆಗಳು, ಸಾವಿರಾರು ಮಣ್ಣಿನ ಪಾತ್ರೆಗಳು ಮತ್ತು ಮುದ್ರೆಗಳು, ನಾಣ್ಯಗಳು ಪತ್ತೆಯಾಗಿವೆ. ಸಿಂಧೂ ನಾಗರಿಕತೆಯ ಅತಿ ದೊಡ್ಡ ಕೇಂದ್ರವಾಗಿ ರಾಕೀಘಡಿ ಬೆಳೆದಿತ್ತು ಎಂಬುದಕ್ಕೆ ಇದು ಸಾಕ್ಷ್ಯ ನೀಡುತ್ತದೆ. ಈ ಉಖ್ಖನನದ ವ್ಯಾಪ್ತಿಯು ಸುಮಾರು 5.5 ಕಿ.ಮೀ ಯಷ್ಟಿದೆ. ಪ್ರಸ್ತುತ ಜನಸಾಂದ್ರತೆಯ ಕಾರಣ, ಅದಿರು ಸಾಗಾಟ, ಜಾಗದ ಒತ್ತುವರಿ ಸಹಿತ ಪ್ರಾಚೀನ ಉಳಿಕೆಗಳ ಕಳ್ಳ ಸಾಗಾಟದ ಕಾರಣ ಈ ಕೇಂದ್ರವು ಏಷ್ಯಾ ಖಂಡದಲ್ಲಿಯೇ ವಿನಾಶದ ಅಂಚಿನಲ್ಲಿರುವ 10 ಪ್ರಮುಖ ಪ್ರಾಚೀನ ಕೇಂದ್ರಗಳಲ್ಲಿ ಒಂದಾಗಿದೆ.
ಲೋಥಾಲ್ ಎಂಬ ಪ್ರಾಚೀನ ನೌಕಾ ನಿರ್ಮಾಣ ಸ್ಥಳದಂತೆ ಗುಜರಾತಿನ ವಾಡ್ನಗರವು ಐತಿಹಾಸಿಕ ಪ್ರಾಚ್ಯವಸ್ತು ಕೇಂದ್ರವಾಗಿ ಬೆಳಕಿಗೆ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮನಾಡಾದ ವಾಡ್ನಗರವು ಉತ್ಖನನದ ಪ್ರಮುಖ ಕೇಂದ್ರವೂ ಆಗಿದೆ. ಐಐಟಿ ಖರಗಪುರದ ವಿಜ್ಞಾನಿಗಳು ವಾಡ್ನನಗರದಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸ ಕೇಂದ್ರವಾಗಿತ್ತು ಎಂಬುದನ್ನು ಕಂಡುಹಿಡಿದಿದ್ದಾರೆ. ಕ್ರಿ.ಪೂ 800 ರಲ್ಲಿ ಈ ಪ್ರದೇಶದ ಮಹಾಜನಪದದ ಭಾಗವಾಗಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ. ಇಲ್ಲಿ ನಿರಂತರವಾಗಿ ಉತ್ಖನನ ಕಾರ್ಯಗಳು ನಡೆಯುತ್ತಿವೆ. ವೇದಕಾಲದ ಕೊನೆಯ ಮತ್ತು ಬೌದ್ಧ ಪೂರ್ವದ ಮಹತ್ತರ ಮಾಹಿತಿಯನ್ನು ಇಲ್ಲಿಂದ ಕಲೆ ಹಾಕಲಾಗಿದೆ. ವಿಹಾರಗಳು, ಸಂಘರಾಮಗಳು ಇಲ್ಲಿದ್ದ ಬಗ್ಗೆ ಮಾಹಿತಿಯಿದೆ. ತಮಿಳುನಾಡಿನ ಕೀಲಡಿ, ಅದಿಚೆಲ್ಲೋರ್, ಮಧ್ಯಪ್ರದೇಶದ ಬಾಂಧ್ವಗಢ, ಜಾರ್ಖಂಡ್ ಹಜಾರಿಭಾಗ್, ಬಿಹಾರದ ವಿಕ್ರಮಶಿಲೆ ದೇಶದ ಪ್ರಾಚೀನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಅತಿ ಮುಖ್ಯ ಪ್ರದೇಶಗಳು.
ಜಾರ್ಖಂಡಿನ ಹಜಾರಿಭಾಗಿನ ಗುಡ್ಡವೊಂದರ ಮೇಲೆ ಕಾಡು ಪೊದರೆಗಳ ಮಧ್ಯೆ ಪತ್ತೆಯಾದ ಬೋಧಿಸತ್ವ,ತಾರಾ ದೇವಿಯ ಮೂರ್ತಿಗಳು ದೇಶದ ಪ್ರಾಚೀನ ಇತಿಹಾಸದ ಭವ್ಯ ಕೊಂಡಿಗಳೆಂದೇ ಹೇಳಬಹುದು. ಸಾವಿರಾರು ವರ್ಷಗಳ ನಂತರ ಇತಿಹಾಸಕಾರರು ವಿಜ್ಞಾನಿಗಳ ಮೂಲಕ ಪತ್ತೆಯಾದ ಹಜಾರಿಭಾಗಿನ ಈ ಪ್ರದೇಶದಲ್ಲಿ ಕಂಡು ಬಂದ ಶ್ರಮಣ ಪರಂಪರೆಯ ಅತಿ ವಿಶೇಷವಾದ ಉಳಿಕೆಗಳು ಸಂಸ್ಕೃತಿಯ ವ್ಯಾಪ್ತಿ ಮತ್ತು ವಿಶಾಲತೆಯನ್ನು ದರ್ಶಿಸುತ್ತವೆ. ಇಲ್ಲಿ ಪತ್ತೆಯಾದ ಸುಂದರ ಮೂರ್ತಿಗಳು ಪಾಲ ರಾಜವಂಶಜರ ಕಾಲಘಟ್ಟದಲ್ಲಿ ನಿರ್ಮಾಣ ಹೊಂದಿವೆ ಎಂದು ಹೇಳಲಾಗಿದೆ. ಸುಮಾರು ಹತ್ತನೇ ಶತಮಾನದ ಕಾಲಘಟ್ಟದ ಈ ಮೂರ್ತಿಗಳು ವಜ್ರಯಾನ ಧರ್ಮ ಪರಂಪರೆಯ ಸಾದೃಶ ಉದಾಹರಣೆಯೆಂದು ಹೇಳಲಾಗಿದೆ. 2023 ಜುಲೈ ತಿಂಗಳಲ್ಲಿ ಮಧ್ಯಪ್ರದೇಶದ ಬಾಂಧ್ವಘಡ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾದ ವಿಶಿಷ್ಟ ಉಳಿಕೆಗಳಲ್ಲಿ ನರಸಿಂಹ, ವರಾಹ ಸಹಿತ ವಿಷ್ಣುವಿನ ವಿವಿಧ ಅವತಾರಗಳು ಸಹಿತ ಬುದ್ಧ ಮತ್ತು ತಾರಾದೇವಿ ಸಹಿತ ಬೋಧಿಸತ್ವ ಅವಲೋಕಿತೇಶ್ವರನ ಮೂರ್ತಿಗಳು ಪತ್ತೆಯಾಗಿದ್ದವು. ಇವುಗಳು 1400 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.
ಇಲ್ಲಿ ಒಟ್ಟು 100 ಕ್ಕೂ ಹೆಚ್ಚಿನ ಉಳಿಕೆಗಳನ್ನು ASI ಪತ್ತೆ ಮಾಡಿದೆ. ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿರುವ ಈ ಉಳಿಕೆಗಳು ಯಾವುದೇ ಮನುಷ್ಯನ ಸಂಪರ್ಕ ಇಲ್ಲದ ಕಾರಣ ಯಥಾವತ್ ಉಳಿದುಕೊಂಡಿದೆ ಎಂದೇ ಹೇಳಬಹುದು. 2022 ರಲ್ಲಿ ASI ಮೂಲಕ ಹೊರಬಿದ್ದ ಮಾಹಿತಿ ಪ್ರಕಾರ ಈ ಕೇಂದ್ರವು ಎರಡನೇ ಶತಮಾನದಿಂದ 15 ನೇ ಶತಮಾನದ ತನಕ ಉಜ್ವಲವಾಗಿ ಬೆಳೆದಿತ್ತು ಎನ್ನಲಾಗಿದೆ. ಅತಿ ದೊಡ್ಡ ವರಾಹ ಮೂರ್ತಿಯೂ ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ASI ಜಬಲಪುರ ಕೇಂದ್ರದ 10 ಮಂದಿ ಅಧಿಕಾರಿಗಳು ಬಾಂಧ್ವಘಡದಲ್ಲಿ ಒಟ್ಟು 26 ಗುಹೆಗಳನ್ನು ಪತ್ತೆ ಮಾಡಿದ್ದು, ಇವೆಲ್ಲವೂ ಅಜಂತಾ, ಎಲ್ಲೋರದಂತಿರುವ ಬೌದ್ಧ ಮತ್ತು ಶೈವ ಆರಾಧನಾ ಗುಹೆಗಳಂತೆ ಕಾಣುತ್ತಿವೆ. ಇದೇ ಪ್ರದೇಶದಲ್ಲಿ ಕೆಲ ಬೌದ್ಧ ಸ್ಥೂಪಗಳ ರಚನೆಗಳು ಪತ್ತೆಯಾಗಿವೆ. ಇದರ ಹೊರತಾಗಿ ನಾಣ್ಯಗಳು, ಶಿಲಾಶಾಸನಗಳು ದಕ್ಕಿವೆ. ಮೌರ್ಯರ ನಂತರ ಬಂದಂತಹ ಗುಪ್ತ ರಾಜವಂಶಜರು ಈ ಪ್ರದೇಶದಲ್ಲಿ ಇಂತಹ ಶಿಲಾಕೃತಿಗಳ ರಚನೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಪತ್ತೆಯಾದ 26 ದೇಗುಲಗಳ ರಚನೆಯಲ್ಲಿ ಎರಡು ಪ್ರಾಚೀನ ಶೈವ ಮಠಗಳಾಗಿವೆ ಎಂದು ಅಂದಾಜಿಸಲಾಗಿದ್ದು ಇವುಗಳು ಕಲಚೂರಿ ರಾಜರ ಕಾಲಘಟ್ಟದಲ್ಲಿ ನಿರ್ಮಾಣವಾದುದಾಗಿವೆ. 46 ಮೂರ್ತಿಗಳನ್ನು ಈ ಪ್ರದೇಶಗಳಲ್ಲಿ ಹೊಸದಾಗಿ ಪತ್ತೆ ಹಚ್ಚಲಾಗಿದೆ. ಮೂರ್ತಿ ನಿರ್ಮಾಣಕ್ಕೆ ಅಗತ್ಯವಾಗಿದ್ದ ಪ್ರಾಚೀನ ಕ್ವಾರಿ ಸಹಿತ ಕಲ್ಲಿನ ಅಚ್ಚಿನ ಘಟಕದ ಅವಶೇಷವೂ ಪತ್ತೆಯಾಗಿದೆ. ಶಿಲಾಶಾಸನಗಳಲ್ಲಿ ಕೌಸಾಂಬಿ, ಮಥುರಾ, ಪಾವತ, ವೆಜಭರದ, ಸಪ್ತನಾರೈಕ ಮೊದಲಾದ ಹೆಸರುಗಳ ಉಲ್ಲೇಖವಿದ್ದು, ಮಹಾರಾಜ ಭೀಮಸೇನಾ, ಮಹಾರಾಜ ಪೋತಸಿರಿ, ಮಹಾರಾಜ ಭಟ್ಟದೇವರ ಹೆಸರುಗಳಿವೆ. ಬಾಂಧ್ವಘಡದ ಈ ಪ್ರದೇಶದಲ್ಲಿ 1938 ರಲ್ಲಿ ಪ್ರಥಮ ಬಾರಿಗೆ ಪತ್ತೆ ಹಚ್ಚಲಾಗಿತ್ತು ಮತ್ತು ಉತ್ಖನನದ ಆರಂಭಿಕ ಹೆಜ್ಜೆಯನ್ನಿರಿಸಲಾಗಿತ್ತು.
ತಮಿಳುನಾಡಿನ ದಕ್ಷಿಣದಲ್ಲಿರುವ ಸಣ್ಣ ಹಳ್ಳಿ ಕೀಲಡಿಯು ದೇಶದ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಬಹಳ ಮಹತ್ವದ ಪ್ರಾಚೀನ ಸುಳಿಯನ್ನು ನೀಡಿದ ಮಗದೊಂದು ಐತಿಹಾಸಿಕ ಕೇಂದ್ರವಾಗಿದೆ. ಶಿವಗಂಗಾ ಜಿಲ್ಲೆಯಲ್ಲಿರುವ ಈ ಹಳ್ಳಿಯು ದೇಗುಲ ನಗರಿ ಮಧುರೈಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. 2015 ರಲ್ಲಿ ಇಲ್ಲಿ ನಡೆದ ಉತ್ಖನನದ ಮೂಲಕ ಈ ಪ್ರದೇಶದಲ್ಲಿ ಸಂಗಮ ಕಾಲದಲ್ಲಿಯೇ ನಾಗರಿಕತೆಯ ಉಗಮ ವಾಗಿತ್ತು ಎಂದು ಖಾತ್ರಿಪಡಿಸಲಾಗಿದೆ, ಮಾತ್ರವಲ್ಲ ಇಲ್ಲಿ ಹರಿಯುವ ವೈಗೈ ನದಿ ತೀರವು ಪ್ರಾಚೀನ ಸಂಸ್ಕೃತಿಯ ತೊಟ್ಟಿಲು ಕೂಡಾ ಅಗಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ. ಸಂಗಮ ಕಾಲವು ಕ್ರಿ.ಪೂ 3 ನೇ ಶತಮಾನದಿಂದ ಕ್ರಿ.ಶ 3 ನೇ ಶತಮಾನದ ತನಕ ವಿಸ್ತರಿಸಿತ್ತು. 2019 ರಲ್ಲಿ ನಡೆದ ಮಗದೊಂದು ಉತ್ಖನನದ ಮೂಲಕ ಈ ಪ್ರದೇಶದಿಂದ ಕ್ರಿ.ಪೂ 6 ನೇ ಶತಮಾನಕ್ಕೆ ಸಂಬಂಧಪಟ್ಟ ಕೆಲ ಉಳಿಕೆಗಳನ್ನು ಪತ್ತೆ ಮಾಡಲಾಗಿದೆ.
ಪ್ರಾಚೀನ ಅದರಲ್ಲೂ ಶಿಲಾಯುಗ ಕಾಲಘಟ್ಟದ ಭವ್ಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ತಮಿಳುನಾಡಿನ ಮಗದೊಂದು ಕೇಂದ್ರ ತೂತುಕುಡಿ ಜಿಲ್ಲೆಯ ಅದಿಚೆನ್ನಲ್ಲೂರು. ಈ ಉತ್ಖನನ ಪ್ರದೇಶದಿಂದ ಪ್ರಾಚೀನ ಕಾಲಘಟ್ಟದ ಚಿನ್ನ, ಲೋಹದ ಉಳಿಕೆಗಳು, ಮಾನವನ ಅಸ್ಥಿಗಳು ಪತ್ತೆಯಾಗಿವೆ. ಪ್ರಾಚೀನ ನಾಗರಿಕತೆಯ ಭಾಗವಾದ ಈ ಕೇಂದ್ರವು ವಾಣಿಜ್ಯ, ವ್ಯಾಪಾರ ಸಹಿತ ಖಂಡಾಂತರ ಸಂಪರ್ಕ ಮತ್ತು ವ್ಯವಹಾರಗಳಿಗೆ ಮಹತ್ತರ ಸಾಕ್ಷ್ಯ ಒದಗಿಸಬಲ್ಲ ಕೇಂದ್ರ ಎಂದು ಬಣ್ಣಿಸಲಾಗಿದೆ. ಲೋಥಾಲ್ ಮೂಲಕ ಪಶ್ಚಿಮಕ್ಕೆ ಭಾರತವು ಹೇಗೆ ಸಾಗರತ್ತೋರ ಸಂಪರ್ಕವನ್ನು ಸಾಧ್ಯವಾಗಿಸಿತ್ತೋ ಅದೇ ರೀತಿ ಅದಿಚೆನ್ನಲ್ಲೂರು ಪ್ರದೇಶವು ಅತಿ ಹೆಚ್ಚಿನ ತಾಮ್ರ, ಕಂಚು ಚಿನ್ನದ ವಸ್ತುಗಳು ಸಹಿತ ಮಣ್ಣಿನ ಪಾತ್ರಗಳು ಈ ಪ್ರದೇಶದಿಂದ ಸಿಕ್ಕಿವೆ. 2023 ಆಗಸ್ಟ್ 5 ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಸ್ತುಸಂಗ್ರಹಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಹಿರೆ ಬೆಣಕಲ್ ಪ್ರಾಚೀನ ಶಿಲಾಯುಗ ಕಾಲಘಟ್ಟದ ಬಗ್ಗೆ ಬೆಳಕು ಚೆಲ್ಲುವ ಮಹತ್ತರ ತಾಣವಾಗಿದೆ. ಈ ತಾಣವು ಪ್ರಸ್ತುತ ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಸರಿಸುಮಾರು 3500 ವರ್ಷಗಳ ಹಿಂದಿನ ಶಿಲಾಯುಗ ಕಾಲಘಟ್ಟದ ಸಮಾಧಿ ಸ್ಥಳವೆಂದು ಇದನ್ನು ಗುರತಿಸಲಾಗಿದ್ದು 1000 ಮಿಗಿಲಾದ ಶಿಲಾಯುಗ ಸ್ಮಾರಕಗಳು ಇಲ್ಲಿವೆ. ಹೊಸಪೇಟೆ ತಾಲೂಕಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಈ ತಾಣವು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಪ್ರದೇಶವು ಸಂರಕ್ಷಿತ ಅರಣ್ಯದ ಭಾಗವಾಗಿಯೂ ರಕ್ಷಿಸಲ್ಪಟ್ಟಿದೆ. ಹಿರೆ ಬೆಣಕಲ್ಲಿನ ವಿಶೇಷತೆಯೆಂದರೆ ಇಲ್ಲಿನ ಸಂಗೀತ ಶಿಲೆಗಳು ಅಥವಾ ವೃತ್ತಾಕಾರದ ಶಿಲಾ ಪ್ರಕಾರಗಳು. ಈ ಕಲ್ಲುಗಳ ಮೇಲೆ ಮರದಿಂದ ಹೊಡೆದರೆ ಸುಮಾರು 1 ಕಿ.ಮೀ ದೂರದ ತನಕ ಶಬ್ದ ಕೇಳುತ್ತದೆ. ಇತಿಹಾಸ ಪೂರ್ವದ ಶಿಲಾ ಚಿತ್ರಣಗಳು, 11 ಶಿಲಾಮಯ ತಂಗುದಾಣಗಳು ಇಲ್ಲಿವೆ. ಬಹಳ ಅತ್ಯಪೂರ್ವವಾದ ಮತ್ತು ಶಿಲಾಯುಗ ಕಾಲಘಟ್ಟದ ಜನಜೀವನ ಸಂಸ್ಕೃತಿಯನ್ನು ದರ್ಶಿಸುವ ಈ ತಾಣವು ಪ್ರಸ್ತುತ ASI ಸಂರಕ್ಷಿತ ತಾಣವೂ ಆಗಿದೆ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.