ಬೆಂಗಳೂರು: ಬರಗಾಲ ನಿರ್ವಹಿಸುವಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ನಗರದ ಮಲ್ಲೇಶ್ವರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ವಿಕಸಿತ ಭಾರತ ಎಲ್.ಇ.ಡಿ ಪ್ರಚಾರ ವಾಹನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಇದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರದ ಸಮಸ್ಯೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಇದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ತಿಳಿಸಿದರು.
ಕಾಳಜಿ ಇಲ್ಲದ ಸರಕಾರ ಇದು. ದರಿದ್ರ ಸರಕಾರ ಇದೆಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಗರ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಕೊಡುತ್ತಿಲ್ಲ. ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ- ಜೆಡಿಎಸ್ ಗೆಲ್ಲಿಸಲು ಪ್ರಜ್ಞಾವಂತ ಜನರು ನಿರ್ಧರಿಸಿದ್ದಾರೆ. ಸಾಮಾನ್ಯ ಜನರ ಅಭಿಪ್ರಾಯ, ವಿವಿಧ ಕ್ಷೇತ್ರಗಳ ಜನರ ಅಭಿಮತ ಪಡೆದು ಸಂಕಲ್ಪ ಪತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಸರಕಾರದ ಸಾಧನೆ ತಿಳಿಸುವುದು ಮಾತ್ರವಲ್ಲದೆ ಸಲಹಾ ಪೆಟ್ಟಿಗೆಯೊಂದಿಗೆ ಈ ವಾಹನ ತೆರಳಲಿದೆ. ಜನರ ಅಭಿಪ್ರಾಯ ಪಡೆಯುವುದು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ನರೇಂದ್ರ ಮೋದಿಯವರು ವಿಕಸಿತ ಭಾರತದ ಕೇಂದ್ರ ಬಿಂದು. ಮೋದಿಜೀ ಗ್ಯಾರಂಟಿ ಮೂಲಕ ನಾವು ಚುನಾವಣೆ ಎದುರಿಸೋಣ ಎಂದರಲ್ಲದೆ, ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷ. ರಾಹುಲ್ ಎಂದರೆ ಏನಿಲ್ಲ; ಏನಿಲ್ಲ. ಅವರ ಹೆಸರು ಹೇಳಲು ಹಿಂದೇಟು ಹಾಕುವ ಸ್ಥಿತಿ ಆ ಪಕ್ಷದಲ್ಲೇ ಇದೆ ಎಂದು ಟೀಕಿಸಿದರು.
ದಲಿತರ ಬಗ್ಗೆ ಕಾಂಗ್ರೆಸ್ನಲ್ಲಿ ಅಸಹನೆ ಇದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಇಂಡಿ’ ನೇತೃತ್ವವನ್ನು ನೀಡಲು ಕಾಂಗ್ರೆಸ್ಸಿನವರೇ ಹಿಂದೇಟು ಹಾಕುತ್ತಾರೆ ಎಂದು ಅವರು ವಿವರಿಸಿದರು. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ನಾವು ಪ್ರಯತ್ನದ ಮೂಲಕ ಮೋದಿಜೀ ಅವರನ್ನು ಗೆಲ್ಲಿಸಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ತಮಿಳುನಾಡಿಗೆ ನೀರು ಕೊಡುವ ಮೂಲಕ ಕಾಂಗ್ರೆಸ್ ಮಾಡಿದ ತಪ್ಪಿನಿಂದ ನಾವು ನೀರಿನ ಬವಣೆ ಎದುರಿಸಬೇಕಾಗಿದೆ. ಬೋರ್ವೆಲ್ ಕೊರೆಸಲೂ ಅವರ ಬಳಿ ಹಣ ಇಲ್ಲ ಎಂದು ಟೀಕಿಸಿದರು. ಜನರೆಲ್ಲ ಗುಳೆ ಹೋಗುವಂತಾಗಿದೆ. 2 ಸಾವಿರ ಕೊಟ್ಟಿದ್ದೇವೆ ಎನ್ನುತ್ತಾರೆ. ಜನರಿಗೆ ಉದ್ಯೋಗ, ನೀರು, ಆಹಾರ ಬೇಕಿದೆ. ಅದನ್ನು ಕೊಡಲಾಗದ ದಿವಾಳಿ ಸರಕಾರ ಇಲ್ಲಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ ತಪ್ಪು ನಡವಳಿಕೆಯಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಇದೊಂದು ಕೆಟ್ಟ ಸರಕಾರ. ಅದನ್ನು ತೊಲಗಿಸಬೇಕು. ಎಲ್ಲರೂ ಇಡೀ ರಾಜ್ಯ ಪ್ರವಾಸ ಮಾಡೋಣ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋಣ ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಬೈರತಿ ಬಸವರಾಜ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕ ಅವಿನಾಶ್, ರಾಜ್ಯ ಕಾರ್ಯದರ್ಶಿ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್. ದತ್ತಾತ್ರೀ ಮತ್ತು ನಿವೃತ್ತ ಐ.ಎ.ಎಸ್. ಅಧಿಕಾರಿ ಸಿ. ಸೋಮಶೇಖರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಮುಖಂಡರಾದ ಎಸ್.ವಿ. ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು. ಮೋದಿಜೀ ಅವರ ಸಾಧನೆ ಕುರಿತ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.