ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರನ್ನು ಬಂಧಿಸಿರುವುದು ಸರಿ. ಆದರೆ, ಎಫ್ಎಸ್ಎಲ್ ವರದಿಯನ್ನು ಯಾಕಿನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಂಧಿತರು ಯಾರೋ ಚೇಲಾಗಳಿರಬೇಕು ಅಂದುಕೊಂಡಿದ್ದೆವು. ಅವರಿಗೆ ರಾಹುಲ್ ಗಾಂಧಿಯವರ ಸಂಪರ್ಕ ಇರುವುದು ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು. ಈಗ ರಾಹುಲ್ ಗಾಂಧಿಯವರ ಜೊತೆಗಿರುವ, ತಬ್ಬಿಕೊಂಡಿರುವ ಫೋಟೊ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಜಿಂದಾಬಾದ್ ನಂಟು ನಾವು ಅಂದುಕೊಂಡಿದ್ದ ರೀತಿಯನ್ನೂ ಮೀರಿದೆ. ಪಾಕಿಸ್ತಾನದ ಅಪ್ಪ, ಅಮ್ಮನಿಗೆ ಹುಟ್ಟಿದ ದೇಶದ್ರೋಹಿಗಳು ಕೂಗಿದ್ದಾರೆ ಎಂದುಕೊಂಡಿದ್ದೆವು. ದೇಶದ್ರೋಹಿಗಳಿಗೂ ಕಾಂಗ್ರೆಸ್ ನಾಯಕರಿಗೂ ಅಪ್ಪುಗೆಯ ನಂಟಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ವಿಶ್ಲೇಷಿಸಿದರು.
ಅಪ್ಪುಗೆಯ ನಂಟೂ ಇರುವ ಕಾರಣ ಎಫ್ಎಸ್ಎಲ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವೇನೋ ಎಂದು ಅವರು ಸಂಶಯ ವ್ಯಕ್ತಪಡಿಸಿದರು. ಎಫ್ಎಸ್ಎಲ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಅವರು ಆಗ್ರಹಿಸಿದರು.
ಅಧಿಕೃತವಾಗಿ ಎಫ್ಎಸ್ಎಲ್ ವರದಿಯನ್ನು ಬಿಡುಗಡೆ ಮಾಡಬೇಕಿತ್ತಲ್ಲವೇ? ಸಚಿವ ಪ್ರಿಯಾಂಕ್ ಖರ್ಗೆಯವರು ಘಟನೆ ನಡೆದ ಮರುದಿನವೇ ‘ಅವರು ಹಾಗೆ ಕೂಗಿಲ್ಲ; ಪಾಕಿಸ್ತಾನ ಜಿಂದಾಬಾದ್ ಎಂದು ಇಲ್ಲವೇ ಇಲ್ಲ’ ಎಂದಿದ್ದರು. ವರದಿ ಸಿಕ್ಕಿದ್ದರೂ ಸರಕಾರ ಅಧಿಕೃತವಾಗಿ ಅದನ್ನು ಬಿಡುಗಡೆ ಮಾಡಿಲ್ಲವೇಕೆ? ಎಂದು ಕೇಳಿದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೆಲವರು ಬಾಂಬ್ ಇಟ್ಟವರು ಬಿಜೆಪಿಯವರೇ ಇರಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೊಂದು ಹಳೆಯ ಕಾಯಿಲೆ. ಇವತ್ತು ನಿನ್ನೆಯ ಕಾಯಿಲೆಯಲ್ಲ ಎಂದು ಸಿ.ಟಿ.ರವಿ ಅವರು ಹೇಳಿದರು.
2000ನೇ ಇಸವಿಯಲ್ಲಿ ಚರ್ಚ್ಗಳ ಮೇಲೆ ಬಾಂಬ್ ಸ್ಫೋಟಿಸಿದ್ದರು. ಆಗ ಇವತ್ತಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗೃಹ ಸಚಿವರಾಗಿದ್ದರು. ತನಿಖೆಗೆ ಮುಂಚೆಯೇ ಅವರು ‘ಇದರ ಹಿಂದೆ ಆರೆಸ್ಸೆಸ್ ಪಿತೂರಿ ಇದೆ’ ಎಂದು ಫರ್ಮಾನು ಹೊರಡಿಸಿದ್ದರು. ಸಾರ್ವಜನಿಕ ಹೇಳಿಕೆಯನ್ನೂ ಕೊಟ್ಟಿದ್ದರು. ಆಮೇಲೆ ಬಂಧನ ಆದಾಗ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆಯವರು ಚರ್ಚ್ಗಳಿಗೆ ಬಾಂಬ್ ಇಟ್ಟಿದ್ದರು ಎಂಬುದು ತನಿಖೆ ನಂತರ ಬೆಳಕಿಗೆ ಬಂತು ಎಂದು ವಿವರಿಸಿದರು. ಆಗ ಫ್ಲೈಓವರ್ನಲ್ಲಿ ಬಾಂಬ್ ಒಯ್ಯುವಾಗ ಸ್ಫೋಟ ಸಂಭವಿಸಿ ಭಯೋತ್ಪಾದಕನೂ ಸತ್ತಿದ್ದ; ಭಯೋತ್ಪಾದನಾ ಜಾಲವೂ ಹೊರಗಡೆ ಬಂದಿತ್ತು ಎಂದು ತಿಳಿಸಿದರು.
ಈಗ ಕಾಂಗ್ರೆಸ್ ಸಚಿವರು ಭಯೋತ್ಪಾದಕರನ್ನು ರಕ್ಷಿಸುವ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇಂಥ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ ಎನ್ನುತ್ತಾರೆ. ಇನ್ನೊಬ್ಬ ಸಚಿವರು ಭೀತರಾಗದಿರಿ; ಇದೊಂದು ಲಘು ಸ್ಫೋಟ ಎಂದಿದ್ದಾರೆ. ಈಗ ತನಿಖೆಗೆ ಮೊದಲೇ ವಿಷಯಾಂತರ ಮಾಡುವ, ದಿಕ್ಕು ತಪ್ಪಿಸುವ ಹೀನ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸಚಿವರು ಮಾಡುತ್ತಿರುವುದು ಅವರು ಯಾರನ್ನೋ ರಕ್ಷಿಸುವ ಉದ್ದೇಶ ಹೊಂದಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ವಿಷಯವನ್ನು ರಾಜಕೀಯಗೊಳಿಸಬೇಡಿ ಎನ್ನುತ್ತಾರೆ. ಹಾಗಿದ್ದರೆ ನಿಮ್ಮ ಸಚಿವರು ಮಾಡುತ್ತಿರುವುದು ಏನು? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರು ರಾಜಕೀಯಕರಣದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸರಕಾರವೇ 222ಕ್ಕೂ ಹೆಚ್ಚು ತಾಲ್ಲೂಕುಗಳು ಬರಗಾಲಪೀಡಿತ ಎಂದು ಪ್ರಕಟಿಸಿದೆ. ಎಷ್ಟು ಜನ ಸಚಿವರು ಜಿಲ್ಲೆಗೆ ಹೋಗಿ ಬರಗಾಲ ಎದುರಿಸಲು, ಬರದ ಬವಣೆ ನೀಗಿಸಲು ಯೋಜನೆ ರೂಪಿಸಲು ಮುಂದಾಗಿದ್ದಾರೆ ಎಂದು ಕೇಳಿದರು. ಎಷ್ಟು ಜನ ಸಚಿವರು ಬರಗಾಲಪೀಡಿತ ತಾಲ್ಲೂಕುಗಳಿಗೆ ಪ್ರವಾಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕುಡಿಯುವ ನೀರಿಗೆ ಹಾಹಾಕಾರ ಇದೆ. ಜನಸಾಮಾನ್ಯರ ಹಾಹಾಕಾರ ನೀಗಿಸುವ ಅಧಿಕಾರ ಇರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಅವರ ಅಸಮರ್ಥತೆ, ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.