ಬೆಂಗಳೂರು: ಖಾಲಿ ಇರುವ ಕುಲಪತಿಗಳ ಹುದ್ದೆಗೆ ನೇಮಕವನ್ನು ಕೂಡಲೇ ಮಾಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಒತ್ತಾಯಿಸಿದರು. ಈ ಕುರಿತ ಕಡತಗಳನ್ನು ಕೂಡಲೇ ರಾಜ್ಯಪಾಲರಿಗೆ ರವಾನಿಸಬೇಕು; 7 ವಿವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ವಿವಿಗೆ ಅನುದಾನವೂ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿ, ರಾಜ್ಯಪಾಲರಿಗೂ ಮನವಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಮಯದಿಂದ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಗೊಂದಲಗಳನ್ನು ನಿರ್ಮಾಣ ಮಾಡುತ್ತಿದೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ನಿರ್ಣಯಗಳನ್ನು ಮರೆತು ರಾಜಕೀಯಪ್ರೇರಿತವಾಗಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರದ ಗಮನ ಸೆಳೆಯುವುದಲ್ಲದೆ, ರಾಜ್ಯಪಾಲರ ಗಮನ ಸೆಳೆಯಲಾಗುವುದು ಎಂದು ಅವರು ನುಡಿದರು. ಪಬ್ಲಿಕ್ ವಿವಿಗಳು, ರಾಜ್ಯದ ವಿವಿಗಳಲ್ಲಿ ಕುಲಪತಿಗಳ ಸ್ಥಾನ ತೆರವಾಗಿ ಬಹಳಷ್ಟು ತಿಂಗಳುಗಳೇ ಕಳೆದಿವೆ. ಜೂನ್ ತಿಂಗಳಿನಲ್ಲಿ ಮಂಗಳೂರು ವಿವಿಯ ಸ್ಥಾನ ತೆರವಾದರೆ, ರಾಣಿ ಚನ್ನಮ್ಮ ವಿವಿ ಜುಲೈ ತಿಂಗಳಿನಲ್ಲಿ, ವಿಜಯನಗರ ವಿಶ್ವವಿದ್ಯಾಲಯದ ಈ ಉನ್ನತ ಸ್ಥಾನ ಆಗಸ್ಟ್ನಲ್ಲಿ ಖಾಲಿ ಆಗಿದೆ ಎಂದು ವಿವರಿಸಿದರು.
ಕುವೆಂಪು ವಿವಿ, ಬಾಗಲಕೋಟೆಯ ತೋಟಗಾರಿಕಾ ವಿವಿ ಹುದ್ದೆಗಳು ಜುಲೈ ತಿಂಗಳಿನಲ್ಲಿ ತೆರವಾಗಿವೆ. ಹಲವು ತಿಂಗಳಾದರೂ ಕುಲಪತಿಗಳ ನೇಮಕಾತಿ ಮಾಡಿಲ್ಲ. ಪರಿಶೋಧನಾ ಸಮಿತಿ ನೇಮಕಗೊಂಡಿದೆ. ಸಮಿತಿ ವರದಿಯನ್ನೂ ಕೊಟ್ಟಿದೆ. ಅದನ್ನು ನೋಡಲು ಮುಖ್ಯಮಂತ್ರಿಗಳಿಗೆ ಸಮಯ ಇಲ್ಲ ಎಂದು ಆಕ್ಷೇಪಿಸಿದರು.
ಇದನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿಲ್ಲ. ಇವರು ನಿರ್ಲಕ್ಷಿಸಿದ್ದರಿಂದ ವಿವಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಣಕಾಸಿನ ಕೊರತೆ, ಸಿಬ್ಬಂದಿ ಕೊರತೆ, ಮುಖ್ಯಸ್ಥರಾದ ಕುಲಪತಿಗಳ ಕೊರತೆ ಇದೆ. ತಾತ್ಕಾಲಿಕ ಕುಲಪತಿ ಇದ್ದರೆ ಅಲ್ಲಿ ಏನೂ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ವಿವಿಗಳ ವೇತನ ವಿಳಂಬಕ್ಕೆ ಆಕ್ಷೇಪ
ಅಸಡ್ಡೆ, ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಗೊಂದು ವಿವಿ ಇರಬೇಕೆಂಬ ಯುಪಿಎ ಸರಕಾರ ಇರುವಾಗ ಮಾಡಿದ ಶಿಫಾರಸಿನಡಿ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಿವಿ ತೆರೆದಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನ ನಡೆದಿತ್ತು. ನಾವು 7 ನೂತನ ವಿವಿಗಳನ್ನು ಜಿಲ್ಲೆಗಳಲ್ಲಿ ಆರಂಭಿಸಿದ್ದೇವೆ. ಬೀದರ್, ಕೊಪ್ಪಳ, ಬಾಗಲಕೋಟೆ, ಹಾವೇರಿ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕುಲಪತಿಗಳ ನೇಮಕ ಆಗಿದೆ. 10 ತಿಂಗಳಾದರೂ ಅವರಿಗೆ ವೇತನ ನೀಡಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಾವೇನೂ ದೊಡ್ಡ ಬಜೆಟ್ ಕೊಟ್ಟಿಲ್ಲ. ವರ್ಷಕ್ಕೆ ತÀಲಾ 2 ಕೋಟಿ ನಿಶ್ಚಯಿಸಿದ್ದೆವು. 10 ತಿಂಗಳಾದರೂ ಸಂಬಳ ಕೊಟ್ಟಿಲ್ಲ. 2 ಕೋಟಿ ಹಣ ಕೊಡಲೂ ಇವರಿಗೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಇಂಥ ಪರಿಸ್ಥಿತಿಯಲ್ಲಿ ಉತ್ತಮ ಸಮಾಜ ಕಟ್ಟಲು ಹೇಗೆ ಸಾಧ್ಯ ಎಂದು ಕೇಳಿದರು. ಇದು ರಾಜಕೀಯಪ್ರೇರಿತ ದುರುದ್ದೇಶ ಎಂದು ಟೀಕಿಸಿದರು.
ವಿವಿಗಳಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರೊಫೆಸರ್ಗಳು ಸೇರಿ ಬೋಧಕ, ಬೋಧಕೇತರ ಸಿಬ್ಬಂದಿಯೂ ತೊಂದರೆ ಅನುಭವಿಸುವಂತಾಗಿದೆ. ಹಣ ಕೊಡುವುದಿಲ್ಲ; ನಿರ್ಣಯ ಮಾಡುತ್ತಿಲ್ಲ. ಸ್ಥಾನಗಳನ್ನು ಭರ್ತಿ ಮಾಡುವುದಿಲ್ಲ. ಎಂದಿನಂತೆ ನಡೆಯಬೇಕಾದ ಕುಲಪತಿಗಳ ನೇಮಕಾತಿಯಲ್ಲೂ ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕನ್ನಡ ಅಸ್ಮಿತೆ ಬಗ್ಗೆ ಸಿದ್ದರಾಮಯ್ಯನವರು ಉದ್ದುದ್ದ ಭಾಷಣ ಮಾಡುತ್ತಾರೆ. ಹಂಪಿ ಕನ್ನಡ ವಿವಿಗೆ ಅಭಿವೃದ್ಧಿಗೆ 72 ಕೋಟಿ ಕೇಳಿದ್ದರು. ಆದರೆ, ಕೇವಲ 1.20 ಕೋಟಿ ನೀಡಿದ್ದಾರೆ ಎಂದು ಟೀಕಿಸಿದರು. ಬರೀ ಖಾಲಿ ಭಾಷಣ, ಖಾಲಿ ಆಶ್ವಾಸನೆ ಕಾಂಗ್ರೆಸ್ ಸರಕಾರದ್ದು ಎಂದು ಆರೋಪಿಸಿದರು. ಯುವಕರ ವಿರೋಧಿ, ಅಭಿವೃದ್ಧಿ ವಿರೋಧಿ, ಶಿಕ್ಷಣ ವಿರೋಧಿ ಸರಕಾರ ಇದೆಂದು ದೂರಿದರು.
ಮಾಜಿ ಸಚಿವ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.